ಬೆಂಗಳೂರು (ಜುಲೈ 3): ಬೆಂಗಳೂರು ಮಾದಪಟ್ಟಣದ ಸಮೀಪ ಸಂಭವಿಸಿದ ಕ್ರಷರ್ ದುರಂತ ಪ್ರಕರಣದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಕರಣದ ತನಿಖೆಯನ್ನು ತಾವರೆಕೆರೆ ಪೊಲೀಸರು ತೀವ್ರಗೊಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರ ಸಂಪರ್ಕ ಸಾಧಿಸುವ ಕಾರ್ಯವೂ ವೇಗ ಪಡೆದುಕೊಂಡಿದ್ದು, ಇನ್ನೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯ ಪರಾರಿಯಾಗಿರುವ ಕ್ವಾರಿ ಮಾಲೀಕರಿಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ದುರಂತದಲ್ಲಿ ಗಾಯಗೊಂಡ ಐವರು ಆರ್‌ಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಮುಂದಿನ ಕೆಲವು ದಿನಗಳು ಚಿಕಿತ್ಸೆಯು ಮಹತ್ವದ್ದಾಗಿರಲಿದೆ ಎಂದು ತಿಳಿದುಬಂದಿದೆ. ಈ ನಡುವೆ, ಘಟನೆಯಲ್ಲಿ ಮೃತಪಟ್ಟ ಯಾದಗಿರಿ ಮೂಲದ ರಾಮ್ ನಾಯಕ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇಲಾಖೆಯ ಆಂಬುಲೆನ್ಸ್ ಮೂಲಕ ಮೃತದೇಹವನ್ನು ಯಾದಗಿರಿಗೆ ರವಾನೆ ಮಾಡಲಾಗಿದೆ.
ಘಟನೆಯಲ್ಲಿ ಮೃತಪಟ್ಟ ಉಳಿದ ಆರು ಮಂದಿ ಮಧ್ಯ ಪ್ರದೇಶ ಮೂಲದವರಾಗಿರುವ ಹಿನ್ನೆಲೆ, ಅವರ ಕುಟುಂಬಸ್ಥರ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಈಗಾಗಲೇ ಸಂಬಂಧಿತ ಕುಟುಂಬಗಳಿಗೆ ಮಾಹಿತಿ ರವಾನಿಸಲಾಗಿದ್ದು, ಮೃತದೇಹ ಹಸ್ತಾಂತರ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಮೃತರ ಕುಟುಂಬಸ್ಥರೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಅಧಿಕೃತ ಘೋಷಣೆ ಬಳಿಕ ಪರಿಹಾರ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ.
ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಅಧಿಕಾರಿಗಳು ಅಗತ್ಯ ದಾಖಲೆ ಹಾಗೂ ಪರಿಶೀಲನಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಘಟನೆಯ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಮೃತರ ಕುಟುಂಬಸ್ಥರ ವಿವರಗಳನ್ನು ಸಂಗ್ರಹಿಸಿ, ಸಂಪರ್ಕದಲ್ಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ದುರಂತದ ತನಿಖೆಯನ್ನು ಕೈಗೊಂಡಿರುವ ತಾವರೆಕೆರೆ ಪೊಲೀಸರು ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಿದ್ದಾರೆ. ಪಾಂಡು, ಲೋಕೇಶ್ ಮತ್ತು ರಾಜು ಎಂಬ ಆರೋಪಿಗಳನ್ನು ನಿನ್ನೆ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರ್ಟ್ ಆದೇಶಿಸಿದೆ. ಅದರಂತೆ ಮೂವರನ್ನೂ ಜೈಲಿಗೆ ಕಳುಹಿಸಲಾಗಿದೆ.
ಆದರೆ ಪ್ರಕರಣದ ಪ್ರಮುಖ ಆರೋಪಿಗಳೆಂದು ಪರಿಗಣಿಸಲ್ಪಟ್ಟಿರುವ ಕ್ವಾರಿ ಮಾಲೀಕರಿಬ್ಬರು ಸದ್ಯ ಪರಾರಿಯಾಗಿದ್ದಾರೆ. ಅವರ ಪತ್ತೆಗಾಗಿ ತಾವರೆಕೆರೆ ಪೊಲೀಸರು ವಿಶೇಷ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ದುರಂತಕ್ಕೆ ಕಾರಣವಾದ ನಿರ್ಲಕ್ಷ್ಯ, ಸುರಕ್ಷತಾ ನಿಯಮ ಉಲ್ಲಂಘನೆ, ಕಾರ್ಮಿಕರ ಸುರಕ್ಷತೆ ಕಡೆಗಣನೆ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಸಾಗುತ್ತಿದೆ.
ಮಾದಪಟ್ಟಣ ಕ್ರಷರ್ ದುರಂತ ರಾಜ್ಯದ ಗಣಿಗಾರಿಕೆ ಮತ್ತು ಕ್ವಾರಿ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕಾರ್ಮಿಕರ ಸುರಕ್ಷತೆಗೆ ಯಾರು ಹೊಣೆ, ನಿಯಮ ಉಲ್ಲಂಘನೆ ನಡೆದಿದೆಯೇ, ಪರಾರಿಯಾಗಿರುವ ಮಾಲೀಕರ ಪಾತ್ರ ಏನು ಎಂಬುದರ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಕುಟುಂಬಸ್ಥರ ಆಗಮನದ ನಂತರ ಮೃತದೇಹ ಹಸ್ತಾಂತರ ಮತ್ತು ಪರಿಹಾರ ಘೋಷಣೆ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯುವ ಸಾಧ್ಯತೆ ಇದೆ.





