ಕಳೆದ ತಿಂಗಳಷ್ಟೇ ಮದುವೆಯಾಗಿದ್ದ ನವಜೋಡಿ ಜಾತ್ರೆಗೆಂದು ಊರಿಗೆ ಬರುವಾಗ ದೊಡ್ಡಬಳ್ಳಾಪುರದ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರಿನ ಪವನ್ (29) ಮತ್ತು ಬಳ್ಳಾರಿ ಜೋಳದ ರಾಶಿ ಗ್ರಾಮದ ರಕ್ಷಿತಾ (24) ಕಳೆದ ತಿಂಗಳು ಮದುವೆಯಾಗಿದ್ದರು. ಮದುವೆಯ ನಂತರ ಮೊದಲ ಬಾರಿಗೆ ಊರ ಜಾತ್ರೆಗೆ ಹೋಗುವ ಸಂಭ್ರಮದಲ್ಲಿ ಇಬ್ಬರೂ ಕಾರಿನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪ್ರಯಾಣ ಬೆಳೆಸುತ್ತಿದ್ದರು.
ದೊಡ್ಡಬಳ್ಳಾಪುರದ ಬಳಿ ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಪವನ್ ಮತ್ತು ರಕ್ಷಿತಾ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಯಿಂದಾಗಿ ದಂಪತಿಗಳ ಮೃತದೇಹಗಳು ತೀವ್ರವಾಗಿ ತುಂಡುತುಂಡಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬಸ್ಥರ ಆಕ್ರಂದನ
ಜಾತ್ರೆಯ ಸಂಭ್ರಮದಲ್ಲಿ ಊರಿಗೆ ಬರಬೇಕಾಗಿದ್ದ ನವಜೋಡಿ ಶವವಾಗಿ ಮನೆಗೆ ಬಂದ ದೃಶ್ಯವು ಎರಡೂ ಕುಟುಂಬಗಳಲ್ಲಿ ಮತ್ತು ಗ್ರಾಮದಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ. ರಕ್ಷಿತಾ ಕುಟುಂಬದಲ್ಲಿ ಮುಗಿಲು ಮುಟ್ಟಿದ ರೋಧನ ಕೇಳಿಬಂದಿದೆ. ಸಂತೋಷದ ದಿನಗಳಲ್ಲಿ ಬರಬೇಕಾಗಿದ್ದ ದಂಪತಿಗಳು ಶವವಾಗಿ ಬಂದಿದ್ದು ನೆರೆದಿದ್ದವರ ಕಣ್ಣುಗಳನ್ನು ತೇವಗೊಳಿಸಿದೆ. ಪೊಲೀಸರು ಅಪಘಾತದ ಕಾರಣ ತನಿಖೆ ಮಾಡುತ್ತಿದ್ದು, ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.





