ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳ ಮೂಲದ ಯುವತಿ ಶರಣ್ಯ ಜಿ.ಎಸ್. ನಾಪತ್ತೆಯಾಗಿರುವ ಘಟನೆ ತೀವ್ರ ಆತಂಕ ಸೃಷ್ಟಿಸಿದೆ.
ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಶರಣ್ಯ ನಿನ್ನೆ ಒಬ್ಬಳೇ ಟ್ರೆಕ್ಕಿಂಗ್‌ಗೆ ತೆರಳಿದ್ದಳು. ಸಂಜೆಯಾದರೂ ವಾಪಸಾಗದಿದ್ದ ಕಾರಣ ಅರಣ್ಯ ಇಲಾಖೆ, ಪೊಲೀಸ್ ಮತ್ತು ಶ್ವಾನ ದಳದ ನಾಲ್ಕು ತಂಡಗಳು ಆಕೆಯನ್ನು ಹುಡುಕುವಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಘಟನೆಯ ವಿವರ :
ಶರಣ್ಯ ಇತರ 9 ಜನರ ಜೊತೆ ಟ್ರೆಕ್ಕಿಂಗ್‌ಗೆ ತೆರಳಿದ್ದಳು. ಕೊನೆಯಲ್ಲಿ ನಾಯಿಗಳ ಜೊತೆ ಆಟವಾಡುತ್ತಾ ಹಿಂದುಳಿದಿದ್ದ ಆಕೆ, ಗುಂಪಿನಿಂದ ಕಳೆದುಕೊಂಡು ನಾಪತ್ತೆಯಾಗಿದ್ದಾಳೆ. ನಾಪತ್ತೆಯಾದ ನಂತರ ಶರಣ್ಯ ತಾನು ದಾರಿ ತಪ್ಪಿರುವುದಾಗಿ ಹೋಂಸ್ಟೇ ಮಾಲೀಕನಿಗೆ ಫೋನ್ ಮಾಡಿ ತಿಳಿಸಿದ್ದಳು. ಅದಾದ ಬಳಿಕ ಆಕೆಯ ಮೊಬೈಲ್ ನಾಟ್ ರೀಚೇಬಲ್ ಆಗಿದೆ. ಆ ಪ್ರದೇಶದಲ್ಲಿ ದಟ್ಟ ಮಳೆಮೋಡ, ಕಡಿದಾದ ಹಾದಿ ಮತ್ತು ಕಾಡಾನೆಗಳ ಹಾವಳಿ ಇರುವುದರಿಂದ ಶೋಧಕ್ಕೆ ತೊಂದರೆಯಾಗುತ್ತಿದೆ.
ಶೋಧ ಕಾರ್ಯ :
ಅರಣ್ಯ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ, ಪೊಲೀಸರು ಮತ್ತು ಶ್ವಾನ ದಳದ ನಾಲ್ಕು ತಂಡಗಳು ರಾತ್ರಿ 3 ಗಂಟೆಯವರೆಗೂ ಶೋಧ ನಡೆಸಿದ್ದರೂ ಇದುವರೆಗೆ ಶರಣ್ಯಳ ಸುಳಿವು ಸಿಕ್ಕಿಲ್ಲ. ಶೋಧ ಕಾರ್ಯ ಇಂದು ಬೆಳಗ್ಗೆಯಿಂದಲೂ ಮುಂದುವರೆದಿದೆ.
ನಾಪತ್ತೆಯಾದ ಯುವತಿ ಸುರಕ್ಷಿತವಾಗಿ ಮರಳಲಿ ಎಂದು ಸ್ಥಳೀಯ ಜನಾಂಗದವರು ಮಲೆ ತಮ್ಮಚ್ಚ ದೇವರಿಗೆ ಹರಕೆ ಹೊತ್ತಿದ್ದಾರೆ. ಬೆಟ್ಟ ಪ್ರದೇಶದಲ್ಲಿ ದಟ್ಟ ಮಳೆಮೋಡ ಕವಿದಿರುವುದು ಶೋಧಕ್ಕೆ ಮತ್ತಷ್ಟು ತೊಂದರೆಯನ್ನುಂಟು ಮಾಡಿದೆ.





