ಯುವ ಸಿನಿಮಾದ ಕೆಮಿಸ್ಟ್ರಿಯಿಂದ ಎಲ್ಲರ ಮನೆ ಮಾತಾಗಿದ್ದ ಜೋಡಿ ಅಂದ್ರೆ ಅದು ಯುವರಾಜ್‌ಕುಮಾರ್ ಹಾಗೂ ಸಪ್ತಮಿ ಗೌಡ. ಇದೀಗ ಈ ಜೋಡಿ ಮತ್ತೊಮ್ಮೆ ಬಿಗ್‌ಸ್ಕ್ರೀನ್ ಮೇಲೆ ರಾರಾಜಿಸೋ ಮುನ್ಸೂಚನೆ ನೀಡಿದೆ. ಗ್ಯಾರಂಟಿ ಪಿಚ್ಚರ್ ಟೀಂಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರೋ ಸಿಂಗಾರ ಸಿರಿ ಸಪ್ತಮಿ, ಯುವ ಜೊತೆ ಸಿನಿಮಾ ಮಾಡೋ ಆಶಯ ಹೊರಹಾಕಿದ್ದಾರೆ.
ಐದು ವರ್ಷಗಳ ಹಿಂದೆ ಡಾಲಿಯ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಚಂದನವನಕ್ಕೆ ಬಲಗಾಲಿಟ್ಟು ಬಂದ ಈ ಪೋರಿ ಸಪ್ತಮಿ ಗೌಡ. ನಿವೃತ್ತ ಪೊಲೀಸ್ ಆಫೀಸರ್ ಎಸ್.ಕೆ. ಉಮೇಶ್‌ರ ಮುದ್ದಿನ ಮಗಳು. ಚೊಚ್ಚಲ ಸಿನಿಮಾ ತಕ್ಕ ಮಟ್ಟಿಗೆ ಕೈ ಹಿಡಿದರೂ, ಕಾಂತಾರ ಚಿತ್ರದಿಂದ ಕರುನಾಡಿನಿಂದ ವಿಶ್ವದ ಮೂಲೆ ಮೂಲೆಗೆ ತಲುಪಿದರು. ಸಿಂಗಾರ ಸಿರಿಯಾಗಿ ಲೀಲಾಜಾಲವಾಗಿ ಲೀಲಾ ಪಾತ್ರಕ್ಕೆ ಜೀವ ತುಂಬಿದ್ರು ಸಪ್ತಮಿ ಗೌಡ. ಆ ಸಿನಿಮಾ ಇದೀಗ ಇತಿಹಾಸದ ಪುಟಗಳು ಸೇರಿರೋದು ಗೊತ್ತೇಯಿದೆ.
ರಿಷಬ್ ಶೆಟ್ಟಿ ಅಂತಹ ಬಹುಮುಖ ಪ್ರತಿಭೆ, ಹೊಂಬಾಳೆ ಫಿಲಂಸ್ ಅಂತಹ ಬ್ಯಾನರ್‌ನಿಂದ ಕನ್ನಡಿಗರ ಮನೆ ಮಾತಾದ ಈ ಬ್ಯೂಟಿ, ಬಾಲಿವುಡ್‌ಗೂ ಎಂಟ್ರಿ ಕೊಟ್ಟರು. ವ್ಯಾಕ್ಸಿನ್ ವಾರ್ ಚಿತ್ರ ಮುಗಿಸಿ, ಒನ್ಸ್ ಅಗೈನ್ ಯುವ ಚಿತ್ರದಿಂದ ಮತ್ತೊಮ್ಮೆ ಹೊಂಬಾಳೆ ಫಿಲಂಸ್ ಜೊತೆ ಕೈ ಜೋಡಿಸಿದ್ರು. ರಾಜಕುಮಾರ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲಿ ಯುವನ ಹುಡ್ಗಿಯಾಗಿ ಕಮಾಲ್ ಮಾಡಿದ್ರು. ಯುವ-ಈಕೆಯ ಕೆಮಿಸ್ಟ್ರಿ ವ್ಹಾವ್ ಫೀಲ್ ತರಿಸಿತ್ತು.
ಇದೀಗ ನೀನಾಸಂ ಸತೀಶ್‌ರ ದಿ ರೈಸ್ ಆಫ್ ಅಶೋಕ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ ಸಪ್ತಮಿ. ಇದೊಂದು 70ರ ದಶಕದ ಸಿನಿಮಾ ಆಗಿದ್ದು, ಅಭಿನಯ ಚತುರನೊಟ್ಟಿಗೆ ಹಳ್ಳಿ ಹುಡ್ಗಿ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಹೂ ಮಾರೋ ಹುಡ್ಗಿಯಾಗಿ ಮತ್ತೆ ಎಲ್ಲರ ದಿಲ್ ದೋಚುವ ಮುನ್ಸೂಚನೆ ನೀಡಿದ್ದಾರೆ. ಅಲ್ಲದೆ, ಟಾಲಿವುಡ್‌ಗೂ ಕಾಲಿಟ್ಟಿದ್ದು, ನಟ ನಿತಿನ್ ನಟನೆಯ ತಮ್ಮುಡು ಸಿನಿಮಾದಲ್ಲಿ ಅಭಿನಯಿಸ್ತಿದ್ದಾರೆ. ನಮ್ಮ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರೋ ಸಪ್ತಮಿ, ಯುವ ಜೊತೆ ಮತ್ತೆ ಸಿನಿಮಾ ಮಾಡೋ ಇಂಗಿತ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಕಾಂತಾರ ಬೆಡಗಿಯ ಬೆಡಗು ಬಿನ್ನಾಣ ಜೋರಾಗಿದ್ದು, ನಿತಿನ್ ಸಿನಿಮಾದ ಬಳಿಕ ಪರಭಾಷಾ ಚಿತ್ರಗಳಲ್ಲಿ ಬ್ಯುಸಿ ಆಗಲಿದ್ದಾರೆ ಎನ್ನಲಾಗ್ತಿದೆ. ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನ ಪರಭಾಷೆಗಳಲ್ಲಿ ಹಾರಿಸ್ತಾರೆ ಅಂದ್ರೆ ಅದಕ್ಕಿಂತ ಸಾರ್ಥಕತೆ ಇನ್ನೇನಿದೆ ಅಲ್ಲವೇ..?
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್