ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಇಡೀ ವಿಶ್ವವೇ ಎದುರು ನೋಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾ ಈಗ ಹೊಸ ಸಂಚಲನ ಸೃಷ್ಟಿಸಿದೆ. ಸಿನಿಮಾ ಬಿಡುಗಡೆಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗ ಚಿತ್ರತಂಡ ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದ್ದು, ಬಾಲಿವುಡ್ ನಟಿ ತಾರಾ ಸುತಾರಿಯಾ ಅವರ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ರೆಟ್ರೋ ಲುಕ್‌ನಲ್ಲಿ ಮಿಂಚಿದ ತಾರಾ ಸುತಾರಿಯಾ:
ಜನವರಿ 3ರಂದು ‘ಟಾಕ್ಸಿಕ್’ ಚಿತ್ರತಂಡ ತಾರಾ ಸುತಾರಿಯಾ ಅವರ ಪಾತ್ರವನ್ನು ಪರಿಚಯಿಸಿದೆ. ಈ ಚಿತ್ರದಲ್ಲಿ ಅವರು ‘ರೆಬೆಕ್ಕಾ’ (Rebecca) ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ತಾರಾ ಅವರು ವಿಂಟೇಜ್ ಗೌನ್, ಲೇಸ್ ಗ್ಲೌಸ್ ಮತ್ತು ರೆಟ್ರೋ ಹೇರ್ ಸ್ಟೈಲ್‌ನಲ್ಲಿ ಅತ್ಯಂತ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಕೈಯಲ್ಲಿರುವ ಬಂದೂಕು ಮತ್ತು ಪಿಸ್ತೂಲ್‌ಗಳು ಅವರು ಚಿತ್ರದ ನಾಯಕಿಯಲ್ಲ, ಬದಲಾಗಿ ಒಬ್ಬ ಖತರ್ನಾಕ್ ಲೇಡಿ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮುನ್ಸೂಚನೆ ನೀಡಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈಗಾಗಲೇ ನಯನತಾರಾ (ಗಂಗಾ), ಕಿಯಾರಾ ಅಡ್ವಾಣಿ (ನಾಡಿಯಾ) ಮತ್ತು ಹುಮಾ ಖುರೇಷಿ (ಎಲಿಜಬೆತ್) ಅವರ ಪಾತ್ರಗಳ ಪರಿಚಯ ಮಾಡಲಾಗಿದ್ದು, ಇದೀಗ ತಾರಾ ಸುತಾರಿಯಾ ಕೂಡ ಈ ಪ್ರಮುಖ ಪಾತ್ರವರ್ಗಕ್ಕೆ ಸೇರ್ಪಡೆಯಾಗಿದ್ದಾರೆ. ಕನ್ನಡದ ರುಕ್ಮಿಣಿ ವಸಂತ್ ಕೂಡ ಪ್ರಮುಖ ಪಾತ್ರದಲ್ಲಿದ್ದು, ಇಡೀ ಸಿನಿಮಾ ಹಾಲಿವುಡ್ ಮಟ್ಟದ ಮೇಕಿಂಗ್ ಮತ್ತು ಸ್ಪೆಷಲ್ ಎಫೆಕ್ಟ್ಸ್‌ಗಳನ್ನು ಹೊಂದಿರಲಿದೆ.
ರಿಲೀಸ್‌ಗೆ ಕ್ಷಣಗಣನೆ:
‘ಟಾಕ್ಸಿಕ್ – ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು ಗ್ಯಾಂಗ್‌ಸ್ಟರ್ ಕಥಾಹಂದರವನ್ನು ಹೊಂದಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಸಿನಿಮಾ ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಯಶ್ ಅವರ ಮ್ಯಾನರಿಸಂ ಮತ್ತು ಈ ಬಹುತಾರಾಗಣದ ಸಮಾಗಮ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವುದು ಖಚಿತ ಎನ್ನಲಾಗುತ್ತಿದೆ.





