ಕಲರ್ಸ್ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ”ಭಾಗ್ಯಲಕ್ಷ್ಮಿ” ಈ ಸಾರಿ ಪ್ರೇಕ್ಷಕರನ್ನು ಚಕಿತಗೊಳಿಸಲಿದೆ. ಸೋಮವಾರ, 24 ಫೆಬ್ರವರಿ ಸಂಜೆ 7ಗಂಟೆಗೆ ಪ್ರಸಾರವಾಗಲಿರುವ ಒಂದು ಗಂಟೆಯ ವಿಶೇಷ ಎಪಿಸೋರಡ್‌ನಲ್ಲಿ ಭಾಗ್ಯಳ (ಪಾತ್ರ) ಜೀವನದ ಹೊಸ ತಿರುವು ಬಹಿರಂಗವಾಗುತ್ತದೆ. ತನ್ನ ಗಂಡ ತಾಂಡವ್ ಶ್ರೇಷ್ಠಳೊಂದಿಗೆ ಮದುವೆಯಾದ ನಂತರ, ಭಾಗ್ಯ ತನ್ನ ಸ್ವಾಭಿಮಾನಕ್ಕಾಗಿ ಹೋರಾಡುವ ದೃಶ್ಯಗಳು ಪ್ರೇಕ್ಷಕರನ್ನು ಕಣ್ಣೀರಿಡಿಸಬಹುದು.
ಭಾಗ್ಯ ಮೊದಲು ಅಮಾಯಕ ಹೆಂಡತಿಯಾಗಿ ತನ್ನ ಗಂಡನನ್ನು ನಂಬಿದ್ದಳು. ಆದರೆ, ತಾಂಡವ್ ದ್ವಿಮುಖ ವರ್ತನೆ ಮತ್ತು ಶ್ರೇಷ್ಠಳೊಂದಿಗಿನ ಮದುವೆಯ ಸತ್ಯ ಬಹಿರಂಗವಾದಾಗ, ಭಾಗ್ಯ “ನಾನು ಭಾಗ್ಯ” ಎಂಬ ಹೋರಾಟದ ಧ್ವನಿಯನ್ನು ಎತ್ತಿಹಿಡಿಯುತ್ತಾಳೆ. ಇದಕ್ಕೆ ಪ್ರತಿಯಾಗಿ, ತನ್ನ ಕುತ್ತಿಗೆಯ ತಾಳಿಯನ್ನು ತೆಗೆದು ತಾಂಡವ್ ಕೈಗೆ ಒಪ್ಪಿಸುವ ದೃಶ್ಯವು ಎಪಿಸೋಡ್ ಹೃದಯಸ್ಪರ್ಶಿ ಕ್ಷಣವಾಗಿದೆ. “ಗಂಡನೇ ಬೆಲೆ ಕೊಡದ ತಾಳಿ ನನಗೆ ಭಾರವಾಗಿದೆ!” ಎಂದು ಅತ್ತೆ ಕುಸುಮಾಳಿಗೆ ಸ್ಪಷ್ಟವಾಗಿ ಹೇಳುವ ಭಾಗ್ಯಳ ದೃಢತೆ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿ ನೀಡುತ್ತದೆ.
ಈ ನಿರ್ಧಾರವು ಕೇವಲ ತಾಳಿ ಕಿತ್ತು ಎಸೆಯುವುದಕ್ಕಿಂತ ಹೆಚ್ಚು. ಇದು ಸಾಮಾಜಿಕವಾಗಿ ಹೆಣ್ಣಿನ ಸ್ವಾತಂತ್ರ್ಯ, ಗೌರವ ಮತ್ತು ಸ್ವಯಂ ನಿರ್ಧಾರದ ಬಗ್ಗೆ ಸಾರುತ್ತದೆ. ಧಾರಾವಾಹಿಯ ಅಭಿಮಾನಿಗಳು ಈ ಘಟನೆಯನ್ನು ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳನ್ನು ಬೆಳೆಸಲು ಸಿದ್ಧರಾಗಿದ್ದಾರೆ. “ಭಾಗ್ಯ ತನ್ನ ತಾಳಿಯನ್ನು ತೆಗೆದು ಹೇಗೆ ಹೊಸ ಜೀವನವನ್ನು ಆರಂಭಿಸುತ್ತಾಳೆ?”ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಲು ವೀಕ್ಷಕರು ಕಾತುರದಿಂದ ನೋಡುತ್ತಿದ್ದಾರೆ.