ಸ್ಪೈಡರ್ ಮ್ಯಾನ್ ಅಂದ್ರೆ ಬರೀ ಬಲೆಯಿಂದ ಶತ್ರುಗಳನ್ನ ಬಂಧಿಸೋ ಸೂಪರ್ ಹೀರೋ ಮಾತ್ರವಲ್ಲ, ವಿಶ್ವಾದ್ಯಂತ ಪ್ರೇಕ್ಷಕರ ಜೇಬಿನಿಂದ ಕೋಟಿ ಕೋಟಿ ಲೂಟಿ ಮಾಡೋ ಅದ್ಭುತ ಜಾದೂಗಾರ ಎಂಬುದು ಮತ್ತೆ ಸಾಬೀತಾಗಿದೆ. ಥಿಯೇಟರ್‌ಗಳಲ್ಲಿ ಈಗ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಸ್ಪೈಡರ್ ಮ್ಯಾನ್ ಹೊಡೆತಕ್ಕೆ ಹಳೆಯ ಹೆಗ್ಗುರುತುಗಳೆಲ್ಲ ಧೂಳೀಪಟವಾಗಿವೆ.
ಟಾಮ್ ಹಾಲೆಂಡ್ ಬೇಟೆಗೆ ವಿಶ್ವವೇ ಶರಣು..!
7 ದಿನದಲ್ಲಿ 10 ಸಾವಿರ ಕೋಟಿ ಬಾಚಿದ ಸ್ಪೈಡರ್ ಮ್ಯಾನ್
400 ಕೋಟಿ ಕ್ಲಬ್‌ಗೆ ಸ್ಪೈಡರ್ ಮ್ಯಾನ್ ಜಿಗಿತ..!
ಮಾರ್ವೆಲ್ ಸೂಪರ್ ಹೀರೋ ಹೊಡೆತಕ್ಕೆ ದಾಖಲೆಗಳೆಲ್ಲ ಔಟ್
ಹಾಲಿವುಡ್ ಮೋಡಿಗಾರ ಟಾಮ್ ಹಾಲೆಂಡ್ ಮತ್ತು ಸೌಂದರ್ಯದ ಗಣಿ ಝಂಡಾಯಾ ಜೋಡಿಯ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾ ಬೆಳ್ಳಿಪರದೆಯ ಮೇಲೆ ಲಗ್ಗೆಯಿಡುತ್ತಿದ್ದಂತೆಯೇ ಜಾಗತಿಕ ಬಾಕ್ಸ್ ಆಫೀಸ್ ಅಂಗಳದಲ್ಲಿ ಅಕ್ಷರಶಃ ಪ್ರಳಯವೇ ಸೃಷ್ಟಿಯಾಗಿದೆ. ಪ್ರದರ್ಶನ ಕಾಣಲು ಶುರುವಾಗಿ ಕೇವಲ ಐದೇ ದಿನಗಳಲ್ಲಿ 9,550 ಕೋಟಿ ಬಾಚಿಕೊಂಡಿದ್ದ ಈ ಸಿನಿಮಾ, ಇದೀಗ ಮೊದಲ ವಾರ ಮುಗಿಯುವಷ್ಟರಲ್ಲಿಯೇ ಜಾಗತಿಕವಾಗಿ ಬರೋಬ್ಬರಿ 10,000 ಕೋಟಿ ಬಿಸಿನೆಸ್ ಗಡಿಯನ್ನು ಅತ್ಯಂತ ಸುಲಭವಾಗಿ ದಾಟಿ ಐತಿಹಾಸಿಕ ಕ್ರಾಂತಿ ಸೃಷ್ಟಿಸಿದೆ. ಡೆಸ್ಟಿನ್ ಡೇನಿಯಲ್ ಕ್ರೆಟ್ಟನ್ ನಿರ್ದೇಶನದ ಈ ದೃಶ್ಯಕಾವ್ಯವನ್ನು ನೋಡಿ ಮಾರ್ವೆಲ್ ಪ್ರೇಮಿಗಳು ಥಿಯೇಟರ್‌ಗಳಲ್ಲೇ ಶಿಳ್ಳೆ, ಚಪ್ಪಾಳೆ ತಟ್ಟಿ ಹುಚ್ಚೆದ್ದು ಕುಣಿಯುತ್ತಿದ್ದಾರೆ.
ಕೇವಲ ವಿದೇಶಗಳಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರಪ್ರೇಮಿಗಳಿಗೂ ಈ ಸ್ಪೈಡರ್ ಮ್ಯಾನ್ ಎಂದರೆ ಸಾಕು ಮೈಯೆಲ್ಲ ರೋಮಾಂಚನ. ದೇಶಾದ್ಯಂತ 16,874ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾ, ಕೇವಲ ಐದು ದಿನಗಳಲ್ಲಿ ಭಾರತದಲ್ಲೇ 336.91 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಬಾಲಿವುಡ್‌ನ ಘಟಾನುಘಟಿ ಚಿತ್ರಗಳ ದಾಖಲೆಯನ್ನು ಪುಡಿಪುಡಿ ಮಾಡಿದೆ. ಇಂಗ್ಲಿಷ್ ಆವೃತ್ತಿಯ ಮಾಸ್ ಹವಾ ಒಂದೆಡೆಯಾದರೆ, ಹಿಂದಿ ಡಬ್ಬಿಂಗ್ ಆವೃತ್ತಿ ಏಕಾಂಗಿಯಾಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲೂ ಪ್ರೇಕ್ಷಕರು ಸಾಲು ಗಟ್ಟಿ ನಿಂತು ಟಿಕೆಟ್ ಪಡೆಯುತ್ತಿರುವುದು ಈ ಚಿತ್ರದ ಕಲೆಕ್ಷನ್ ಜಾದೂಗೆ ಹಿಡಿದ ಕೈಗನ್ನಡಿಯಾಗಿದೆ.
ಬಾಕ್ಸ್ ಆಫೀಸ್ ಬೇಟೆಯಲ್ಲಿ ಸ್ಪೈಡರ್ ಮ್ಯಾನ್ ಜಿಗಿತಕ್ಕೆ ರಜಾದಿನ, ವಾರದ ದಿನ ಎಂಬ ಯಾವುದೇ ಭೇದಭಾವವಿಲ್ಲದಂತಾಗಿದೆ. ಭಾನುವಾರ ಒಂದೇ ದಿನ ಭಾರತದಾದ್ಯಂತ ಭರ್ಜರಿ 77.75 ಕೋಟಿ ಕೊಳ್ಳೆಹೊಡೆದಿದ್ದ ಈ ಬೆಳ್ಳಿತೆರೆಯ ಸೂಪರ್ ಹೀರೋ, ಸಾಮಾನ್ಯವಾಗಿ ತಣ್ಣಗಿರೋ ವಾರದ ಮೊದಲ ಕೆಲಸದ ದಿನವಾದ ಸೋಮವಾರವೂ ಭರ್ಜರಿ 23.80 ಕೋಟಿ ರೂ. ನಿವ್ವಳ ಗಳಿಕೆ ಕಂಡಿದೆ. ವಾರದ ದಿನಗಳಲ್ಲೂ ಪ್ರೇಕ್ಷಕರು ಥಿಯೇಟರ್‌ಗಳತ್ತ ಹರಿದುಬರುತ್ತಿರುವುದು ಈ ಸಿನಿಮಾನ ಗಲ್ಲಾಪೆಟ್ಟಿಗೆಯಲ್ಲಿ ಯಾರೂ ತಡೆಯಲು ಸಾಧ್ಯವಿಲ್ಲ.
ಟ್ರೇಡ್ ಪಂಡಿತರ ಲೆಕ್ಕಾಚಾರದ ಪ್ರಕಾರ, ಮೊದಲ ವಾರದ ಅಂತ್ಯಕ್ಕೆ ಈ ಸಿನಿಮಾ ಭಾರತದ ಮಾರುಕಟ್ಟೆಯಲ್ಲೇ 400 ಕೋಟಿ ಗಡಿಯನ್ನು ಅತ್ಯಂತ ಸುಲಭವಾಗಿ ದಾಟುವುದು ಖಚಿತವಾಗಿದೆ. ಆ ಮೂಲಕ 2026ರ ಅತ್ಯಂತ ಯಶಸ್ವಿ ಹಾಗೂ ಗರಿಷ್ಠ ಗಳಿಕೆ ಕಂಡ ಹಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಪೀಟರ್ ಪಾರ್ಕರ್ ಹಾಗೂ ಎಂಜೆ ನಡುವಿನ ಕಣ್ಣೀರು ತರಿಸೋ ಪ್ರೇಮಕಥೆಯ ಜೊತೆಗೆ, ಮೈ ನವಿರೇಳಿಸುವ ಹೈ-ವೋಲ್ಟೇಜ್ ಆಕ್ಷನ್ ಸೀನ್‌ಗಳು ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನು ಅಕ್ಷರಶಃ ಮಂತ್ರಮುಗ್ಧರನ್ನಾಗಿಸಿವೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಾಲಿವುಡ್ ಸಿನಿಮಾವೊಂದು ಈ ಮಟ್ಟದ ಕಲೆಕ್ಷನ್ ಸುನಾಮಿ ಎಬ್ಬಿಸಿರುವುದು ಇಂಡಸ್ಟ್ರಿ ದಿಗ್ಗಜರನ್ನೇ ಬೆರಗುಗೊಳಿಸಿದೆ. ಸ್ವದೇಶಿ ಸಿನಿಮಾಗಳನ್ನೇ ಹಿಂದಿಕ್ಕಿ ಮುನ್ನುಗ್ಗುತ್ತಿರುವ ‘ಬ್ರಾಂಡ್ ನ್ಯೂ ಡೇ’, ಮುಂಬರುವ ದಿನಗಳಲ್ಲಿ ಭಾರತೀಯ ಬೆಳ್ಳಿಪರದೆಯ ಸರ್ವ ಸಾರ್ವಕಾಲಿಕ ದಾಖಲೆಗಳನ್ನು ಉಡಾಯಿಸಿ ಹೊಸ ಇತಿಹಾಸ ಬರೆಯುವುದು ಖಂಡಿತ. ಒಟ್ಟಿನಲ್ಲಿ ಸ್ಪೈಡರ್ ಮ್ಯಾನ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಸುಟ್ಟು ಬೂದಿಯಾಗುತ್ತಿರುವುದಂತೂ ಸತ್ಯ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





