ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಆಯೋಜಿಸಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಅಧಿಕೃತ ಚಾಲನೆ ನೀಡಿದರು. ಸ್ವಾತಂತ್ರೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಈ ವರ್ಷದ ಪ್ರದರ್ಶನವು “ಶ್ರೀ ಗಂಗ ಸಾಮ್ರಾಜ್ಯ ವೈಭವ” ಎಂಬ ವಿಶಿಷ್ಟ ವಿಷಯಾಧಾರಿತ ಪರಿಕಲ್ಪನೆಯೊಂದಿಗೆ ರೂಪುಗೊಂಡಿದ್ದು, ಆಗಸ್ಟ್ 6ರಿಂದ 17ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಿದೆ.
ಕರ್ನಾಟಕದ ಪ್ರಾಚೀನ ಹಾಗೂ ವೈಭವಶಾಲಿ ರಾಜಮನೆತನಗಳಲ್ಲಿ ಒಂದಾದ ಪಶ್ಚಿಮ ಗಂಗರ ಸಾಮ್ರಾಜ್ಯದ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪ ಮತ್ತು ಕನ್ನಡಕ್ಕೆ ನೀಡಿದ ಕೊಡುಗೆಗಳನ್ನು ಹೂಗಳ ಕಲಾಕೃತಿಗಳ ಮೂಲಕ ಜೀವಂತವಾಗಿ ಪರಿಚಯಿಸುವ ಪ್ರಯತ್ನ ಈ ಬಾರಿಯ ಪ್ರದರ್ಶನದ ಪ್ರಮುಖ ವಿಶೇಷತೆಯಾಗಿದೆ. ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಈ ಪ್ರದರ್ಶನವನ್ನು ಅತ್ಯಂತ ವೈಭವದಿಂದ ಸಿದ್ದಪಡಿಸಿದೆ.
ಈ ವರ್ಷದ ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 26 ಲಕ್ಷಕ್ಕೂ ಹೆಚ್ಚು ಹೂಗಳು ಹಾಗೂ 130ಕ್ಕೂ ಅಧಿಕ ಅಪರೂಪದ ಹೂವಿನ ತಳಿಗಳನ್ನು ಬಳಸಿ ಆಕರ್ಷಕ ಪುಷ್ಪ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಹೂಗಳ ಮೂಲಕ ಬೇಗೂರಿನ ಪಂಚಲಿಂಗೇಶ್ವರ ದೇವಾಲಯ, ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಪ್ರತಿಮೆ, ತಲಕಾಡಿನ ಐತಿಹಾಸಿಕ ದೇವಾಲಯಗಳು, ಗಂಗರ ಗಜಸೇನೆ, ಯುದ್ಧದ ದೃಶ್ಯಗಳು ಸೇರಿದಂತೆ ಗಂಗರ ಸಾಮ್ರಾಜ್ಯದ ಹಲವು ಐತಿಹಾಸಿಕ ಘಟನೆಗಳನ್ನು ಅತ್ಯಂತ ಮನಮೋಹಕವಾಗಿ ರೂಪಿಸಲಾಗಿದೆ.
ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಸುಮಾರು 50 ಅಡಿ ಎತ್ತರದ ಬೇಗೂರಿನ ಪಂಚಲಿಂಗೇಶ್ವರ ದೇವಾಲಯದ ಹೂವಿನ ಪ್ರತಿಕೃತಿ ನಿರ್ಮಿಸಲಾಗಿದ್ದು, ಸಾವಿರಾರು ಪ್ರವಾಸಿಗರ ಗಮನ ಸೆಳೆಯುವಂತಿದೆ. ಇದಲ್ಲದೆ ಬೆಂಗಳೂರು ಶಾಸನ, ಬ್ರಹ್ಮಸ್ತಂಭ, ಗಂಗರ ಅರಸರ ಪ್ರತಿಮೆಗಳು ಹಾಗೂ ಕನ್ನಡ ಸಾಹಿತ್ಯ, ಶಿಕ್ಷಣ, ನೀರಾವರಿ, ಶಿಲ್ಪಕಲೆ ಮತ್ತು ಧಾರ್ಮಿಕ ಪರಂಪರೆಗೆ ಗಂಗರ ಕೊಡುಗೆಯನ್ನು ಪರಿಚಯಿಸುವ ವಿಶೇಷ ವಿಭಾಗಗಳನ್ನು ಸಹ ಪ್ರದರ್ಶನದಲ್ಲಿ ಅಳವಡಿಸಲಾಗಿದೆ.
ಉದ್ಘಾಟನೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರದರ್ಶನವನ್ನು ವೀಕ್ಷಿಸಿ ವಿವಿಧ ಪುಷ್ಪ ಕಲಾಕೃತಿಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಪ್ರದರ್ಶನವು ಕೇವಲ ಹೂಗಳ ಪ್ರದರ್ಶನವಲ್ಲ, ಕರ್ನಾಟಕದ ಐತಿಹಾಸಿಕ ಪರಂಪರೆಯನ್ನು ಜನರಿಗೆ ಪರಿಚಯಿಸುವ ಸಾಂಸ್ಕೃತಿಕ ಉತ್ಸವವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ “ಶ್ರೀ ಗಂಗ ಸಾಮ್ರಾಜ್ಯ ವೈಭವ”
ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾದ “ಶ್ರೀ ಗಂಗ ಸಾಮ್ರಾಜ್ಯ ವೈಭವ” ಕರ್ನಾಟಕದ ಮೊದಲ ರಾಜಮನೆತನಗಳಲ್ಲೊಂದಾದ ಗಂಗರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಇಂದು ಉದ್ಘಾಟಿಸಲಾಯಿತು.
ಕನ್ನಡ ನಾಡಿನ ಪ್ರಾಚೀನ ರಾಜಮನೆತನವಾದ ಗಂಗರ… pic.twitter.com/lu4M7tYHXD
— DK Shivakumar (@DKShivakumar) August 6, 2026
ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆ ಹಲವು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ, ಹೆಚ್ಚುವರಿ ವಾಹನ ನಿಲುಗಡೆ, ಸೆಲ್ವಿ ಪಾಯಿಂಟ್‌ಗಳು, ಕೃತಕ ಜಲಪಾತ, ವಿಶ್ರಾಂತಿ ಪ್ರದೇಶಗಳು ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರದಲ್ಲಿ ಉಚಿತ ಪ್ರವೇಶ ನೀಡಲಾಗಿದ್ದು, ಕುಟುಂಬ ಸಮೇತರಾಗಿ ಭೇಟಿ ನೀಡುವವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ.
ಭದ್ರತಾ ದೃಷ್ಟಿಯಿಂದ ಲಾಲ್‌ಬಾಗ್ ಆವರಣದಲ್ಲಿ 136 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರದರ್ಶನದ ಅವಧಿಯಲ್ಲಿ ಲಕ್ಷಾಂತರ ಪ್ರವಾಸಿಗರು ಹಾಗೂ ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆ ಇರುವುದರಿಂದ ಜನಸಂದಣಿ ನಿರ್ವಹಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.





