ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಟ ಶೈನ್ ಟಾಮ್ ಚಾಕೊ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಕೇರಳ ಚಿತ್ರರಂಗವು ಆತನ ಮೇಲೆ ನಿಷೇಧ ಹೇರುವ ಸಾಧ್ಯತೆಯಿದೆ. ‘ಸೂತ್ರವಾಕ್ಯಂ’ ಚಿತ್ರದ ಚಿತ್ರೀಕರಣದ ವೇಳೆ ನಟಿ ವಿನ್ಶಿ ಅಲೋಷಿಯಸ್ಗೆ ಕಿರುಕುಳ ನೀಡಿದ್ದಾರೆ ಮತ್ತು ಸೆಟ್ನಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಆರೋಪಗಳು ಆತನ ವಿರುದ್ಧ ದಾಖಲಾಗಿವೆ.
‘ಸೂತ್ರವಾಕ್ಯಂ’ ಚಿತ್ರದಲ್ಲಿ ಶೈನ್ ಟಾಮ್ ಚಾಕೊ ಜೊತೆಗೆ ನಟಿಸುತ್ತಿರುವ ವಿನ್ಶಿ ಅಲೋಷಿಯಸ್, ಕೇರಳ ಫಿಲಂ ಛೇಂಬರ್, ಕೇರಳ ಸಿನಿಮಾ ಕಲಾವಿದರ ಸಂಘ ಮತ್ತು ಇತರ ಸಿನಿಮಾ ಸಂಘಟನೆಗಳಿಗೆ ದೂರು ಸಲ್ಲಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಶೈನ್ ಟಾಮ್ ಚಾಕೊ ತಮ್ಮೊಡನೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಸೆಟ್ನಲ್ಲಿ ಬಿಳಿ ಬಣ್ಣದ ಪೌಡರ್ (ಡ್ರಗ್ಸ್) ಸೇವಿಸುತ್ತಿರುವುದನ್ನು ಕಂಡಿದ್ದೇನೆ ಎಂದು ಆಕೆ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ವಿನ್ಶಿ ಅಲೋಷಿಯಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಶೈನ್ ಟಾಮ್ ಚಾಕೊ ಹೆಸರನ್ನು ಉಲ್ಲೇಖಿಸದೆ, “ನಟರೊಬ್ಬರು ನನಗೆ ಮತ್ತು ಸಹನಟಿಗೆ ಕಿರುಕುಳ ನೀಡಿದ್ದಾರೆ. ನನ್ನ ಉಡುಗೆಯ ಬಗ್ಗೆ ಚರ್ಚಿಸುವಾಗ ಎಲ್ಲರ ಮುಂದೆ ಕೆಟ್ಟದಾಗಿ ಮಾತನಾಡಿದರು” ಎಂದು ಆಕೆ ತಿಳಿಸಿದ್ದರು. ಇದರ ಜೊತೆಗೆ, ಸೆಟ್ನಲ್ಲಿ ಡ್ರಗ್ಸ್ ಸೇವನೆಯನ್ನು ಗಮನಿಸಿದ್ದೇನೆ ಎಂದೂ ಆಕೆ ಆರೋಪಿಸಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಆರೋಪಗಳು ಶೈನ್ ಟಾಮ್ ಚಾಕೊ ವಿರುದ್ಧ ಸ್ಪಷ್ಟವಾಗಿ ದೂರು ರೂಪದಲ್ಲಿ ಸಲ್ಲಿಕೆಯಾದವು.
ದೂರಿನ ಬೆನ್ನಿಗೆ ಕೇರಳ ಪೊಲೀಸರು ಶೈನ್ ಟಾಮ್ ಚಾಕೊ ಉಳಿದುಕೊಂಡಿದ್ದ ಹೋಟೆಲ್ನ ಮೇಲೆ ದಾಳಿ ನಡೆಸಿದರು. ಆದರೆ, ಟಾಮ್ ಚಾಕೊ ಕಿಟಕಿಯಿಂದ ಹಾರಿ, ಮೆಟ್ಟಿಲು ಇಳಿದು ಪರಾರಿಯಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಿಂದ ಡ್ರಗ್ಸ್ ಸೇವನೆ ಆರೋಪಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ. ಪೊಲೀಸರು ಆತನನ್ನು ಬಂಧಿಸಲು ತೀವ್ರ ಶೋಧ ನಡೆಸುತ್ತಿದ್ದಾರೆ.
ಕಳೆದ ವರ್ಷ ಮಲಯಾಳಂ ಚಿತ್ರರಂಗದಲ್ಲಿ ಮೂವರು ನಟರ ಮೇಲೆ ಅಶಿಸ್ತಿನ ಆರೋಪದಡಿ ನಿಷೇಧ ಹೇರಲಾಗಿತ್ತು, ಅದರಲ್ಲಿ ಡ್ರಗ್ಸ್ ಸೇವನೆಯ ಆರೋಪವೂ ಪ್ರಮುಖವಾಗಿತ್ತು. ಇದೀಗ ಶೈನ್ ಟಾಮ್ ಚಾಕೊ ಕೂಡ ಇದೇ ರೀತಿಯ ಆರೋಪಗಳಿಂದ ನಿಷೇಧದ ಭೀತಿಯನ್ನು ಎದುರಿಸುತ್ತಿದ್ದಾರೆ. ಕೇರಳ ಚಿತ್ರರಂಗದ ಸಂಘಟನೆಗಳು ಈ ಆರೋಪಗಳ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದು, ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಈ ಘಟನೆಯು ಮಲಯಾಳಂ ಚಿತ್ರರಂಗದಲ್ಲಿ ಗಮನಾರ್ಹ ಚರ್ಚೆಗೆ ಕಾರಣವಾಗಿದ್ದು, ಶೈನ್ ಟಾಮ್ ಚಾಕೊನ ಭವಿಷ್ಯದ ವೃತ್ತಿಜೀವನದ ಮೇಲೆ ಇದು ದೊಡ್ಡ ಪರಿಣಾಮ ಬೀರಲಿದೆ.