ರೀ-ರಿಲೀಸ್ ಟ್ರೆಂಡ್‌ನಿಂದ ಕಳೆಗಟ್ಟಿರೋ ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಮತ್ತೊಂದು ದೈತ್ಯ ಕನಸು ಮರಳಿ ಬೆಳ್ಳಿಪರೆಗೆ ಅಪ್ಪಳಿಸಲು ಸಜ್ಜಾಗ್ತಿದೆ. ಕ್ರೇಜಿ ಅಭಿಮಾನಿಗಳ ದಶಕಗಳ ಕಾಯುವಿಕೆಗೆ ಕೊನೆಗೂ ಸಿಕ್ಕಿದೆ ಬಿಗ್ ಅಪ್‌ಡೇಟ್. ಗಾಂಧಿನಗರದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಸಾಹಸಕ್ಕೆ ಕೈಹಾಕಿದ್ದ ಆ ಮಹಾನ್ ಕ್ರಾಂತಿ ಯಾವುದು..? ಕ್ರೇಜಿಸ್ಟಾರ್ ಪುತ್ರ ಕೊಟ್ಟ ಆ ಸಿಹಿ ಸುದ್ದಿ ಏನು..? ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ…
- ಮೂರು ದಶಕಗಳ ಬಳಿಕ ಮರಳುತ್ತಿದೆ ಶಾಂತಿ ಕ್ರಾಂತಿ
- ರೀ-ರಿಲೀಸ್‌ಗೆ ಕ್ರೇಜಿಸ್ಟಾರ್ ಕುಟುಂಬ ಗ್ರೀನ್ ಸಿಗ್ನಲ್
- ಅಭಿಮಾನಿಗಳ ಅಭಿಯಾನಕ್ಕೆ ಸಿಕ್ತು ಬಿಗ್ ಸಕ್ಸಸ್
- ಶಾಂತಿ ಕ್ರಾಂತಿ ಜೊತೆಗೆ ಮುಧೋಳ್ ಬಿಗ್ ಅಪ್‌ಡೇಟ್
ಕನ್ನಡ ಚಿತ್ರರಂಗದಲ್ಲಿ ಹಳೆಯ ಕ್ಲಾಸಿಕ್ ಸಿನಿಮಾಗಳು ಮರುಬಿಡುಗಡೆಯಾಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಈ ಶುಭ ಘಳಿಗೆಯಲ್ಲಿ, ‘ಶಾಂತಿ ಕ್ರಾಂತಿ’ ಸಿನಿಮಾವನ್ನು ರೀ-ರಿಲೀಸ್ ಮಾಡಿ ಎಂಬ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಈ ಬೃಹತ್ ಬೇಡಿಕೆಗೆ ಕೊನೆಗೂ ಕ್ರೇಜಿಸ್ಟಾರ್ ಅವರ ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಗುಡ್‌ನ್ಯೂಸ್ ನೀಡಿದ್ದಾರೆ. ತಂದೆ ರವಿಚಂದ್ರನ್ ಅವರೊಂದಿಗೆ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದ್ದು, ಮರುಬಿಡುಗಡೆ ಯೋಜನೆಗೆ ಹಸಿರು ನಿಶಾನೆ ಸಿಗುವ ಹಂತದಲ್ಲಿದೆ ಎಂದು ತಿಳಿಸುವ ಮೂಲಕ ಪ್ರೇಕ್ಷಕರ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ.
1991ರ ಸೆಪ್ಟೆಂಬರ್ 19ರಂದು ಬಿಡುಗಡೆಯಾಗಿದ್ದ ‘ಶಾಂತಿ ಕ್ರಾಂತಿ’ ಬರೀ ಸಿನಿಮಾವಲ್ಲ, ಅದು ಭಾರತೀಯ ಚಿತ್ರರಂಗದ ಮೊದಲ ನಿಜವಾದ ಪ್ಯಾನ್-ಇಂಡಿಯಾ ಪ್ರಯೋಗ. ಯಾವುದೇ ಡಿಜಿಟಲ್ ತಂತ್ರಜ್ಞಾನವಿಲ್ಲದ ಆ ಕಾಲದಲ್ಲೇ ರವಿಚಂದ್ರನ್ ಅವರು 10 ಕೋಟಿಗೂ ಅಧಿಕ ಬೃಹತ್ ವೆಚ್ಚದಲ್ಲಿ, 50 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಿ, ರಜನಿಕಾಂತ್, ನಾಗಾರ್ಜುನ, ಜೂಲಿ ಅವರಂತಹ ಸೂಪರ್‌ಸ್ಟಾರ್‌ಗಳನ್ನು ಒಂದೇ ವೇದಿಕೆಗೆ ತಂದಿದ್ದರು. ಕಥೆ.. ಚಿತ್ರಕಥೆ.. ನಿರ್ದೇಶನ.. ನಿರ್ಮಾಣ ಓ ಮೌ ಗಾಡ್ ಎಲ್ಲವೂ ಒನ್ ಮ್ಯಾನ್ ಆರ್ಮಿ ರವಿಚಂದ್ರನ್ ಜವಾಬ್ದಾರಿ ಹೊತ್ತು ಮಾಡಿದ್ರು. ತಮ್ಮ ಸರ್ವಸ್ವವನ್ನೇ ಪಣಕ್ಕಿಟ್ಟು, ಆಸ್ತಿ-ಪಾಸ್ತಿಯನ್ನು ಈ ಸಿನಿಮಾಗಾಗಿ ಸುರಿದು ಅವರು ಪಟ್ಟ ಶ್ರಮ ಮತ್ತು ಅನುಭವಿಸಿದ ಆರ್ಥಿಕ ಸವಾಲುಗಳು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮಹತ್ವದ ಪುಟಗಳಾಗಿವೆ.
ಈ ಚಿತ್ರದ ಮತ್ತೊಂದು ಹೈಲೈಟ್ ರವಿಚಂದ್ರನ್ -ಹಂಸಲೇಖ ಕಾಂಬಿನೇಶನ್.. ಸಿನಿಮಾದ ಪ್ರತಿ ಹಾಡುಗಳು ಸೂಪರ್ ಹಿಟ್. ಈ ಕ್ರಾಂತಿಯನ್ನು ಮತ್ತೆ ಬೆಳ್ಳಿಪರದೆಯ ಮೇಲೆ ತರುವುದು ಕೇವಲ ಪ್ರೇಕ್ಷಕರ ಆಸೆ ಮಾತ್ರವಲ್ಲ, ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಅವರ ಬಹುದೊಡ್ಡ ಕನಸಾಗಿತ್ತು. “ನಮಗೆ ಜನರ ಪ್ರೀತಿ ಮತ್ತು ಸಿನಿಮಾವೇ ನಿಜವಾದ ಆಸ್ತಿ” ಎಂದು ಹೆಮ್ಮೆಯಿಂದ ಹೇಳಿದ ವಿಕ್ರಮ್, “ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಡ್ಯಾಡಿಗೆ ನಿರಂತರವಾಗಿ ಟ್ಯಾಗ್ ಮಾಡಿ ಒತ್ತಾಯಿಸುತ್ತಿದ್ದರು. ಇಂದು ಡ್ಯಾಡಿ ಜೊತೆ ಚರ್ಚಿಸಿ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದೇವೆ. ಒಂದು ಕಾಲದ ಈ ಮಹಾನ್ ತಾಂತ್ರಿಕ ವಿಸ್ಮಯವನ್ನು ಇಂದಿನ ಪೀಳಿಗೆಗೆ ಬಿಗ್ ಸ್ಕ್ರೀನ್‌ನಲ್ಲಿ ತೋರಿಸುವುದೇ ನಮ್ಮ ಮುಖ್ಯ ಉದ್ದೇಶ” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಹಲವು ದಿನಗಳ ವಿರಾಮದ ಬಳಿಕ ವಿಕ್ರಮ್ ರವಿಚಂದ್ರನ್ ತಮ್ಮ ಬಹುನಿರೀಕ್ಷಿತ ‘ಮುಧೋಳ್’ ಚಿತ್ರದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಕೌಟುಂಬಿಕ ಹಿನ್ನೆಲೆ ಹಾಗೂ ವಿಭಿನ್ನ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಮುಧೋಳ್’ ನಿರ್ಮಾಣ ಕಾರ್ಯಗಳು ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಲಿದೆ. ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಹಾಗೂ ‘ಮುಧೋಳ್’ ಅಪ್‌ಡೇಟ್ ಒಂದೇ ಬಾರಿಗೆ ಸಿಕ್ಕಿರುವುದು ರವಿಚಂದ್ರನ್ ಅಭಿಮಾನಿಗಳ ಸಂಭ್ರಮವನ್ನು ಬೆಟ್ಟದಷ್ಟು ಹೆಚ್ಚಿಸಿದೆ.
‘ಶಾಂತಿ ಕ್ರಾಂತಿ’ಯನ್ನು ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಮರುಬಿಡುಗಡೆ ಮಾಡಲು ರವಿಚಂದ್ರನ್ ಕುಟುಂಬ ಸಕಲ ಸಿದ್ಧತೆಗಳನ್ನು ಆರಂಭಿಸಿದೆ. ಮೂರು ದಶಕಗಳ ಹಿಂದೆ ಕಾಲಕ್ಕಿಂತ ಮುಂಚಿತವಾಗಿ ಮೂಡಿಬಂದಿದ್ದ ಈ ಆಕ್ಷನ್ ಎಪಿಕ್ ಸಿನಿಮಾವನ್ನು ಮತ್ತೆ ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಕ್ರೇಜಿಸ್ಟಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಶೀಘ್ರದಲ್ಲೇ ‘ಶಾಂತಿ ಕ್ರಾಂತಿ’ ಹೊಸ ಸೌಂಡ್ ಮತ್ತು ವಿಶುವಲ್ಸ್ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಮ್ಮೆ ಆರ್ಭಟಿಸುವುದು ಖಚಿತವಾಗಿದೆ.





