ಬೆಂಗಳೂರು,(ಜುಲೈ.17) : ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಹಾಗೂ ಕಿರುತೆರೆ ಕಲಾವಿದೆ ಶೈಲಜಾ ಶ್ರೀಶೈಲನ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರ ಬೆನ್ನಲ್ಲೇ ಗುರುವಾರ ಮಧ್ಯಾಹ್ನ ಬೆಂಗಳೂರಿನ ವೈಯ್ಯಾಲಿಕಾವಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ವಲಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಹಿರಿಯ ನಟ ಶ್ರೀಶೈಲನ್ ಅವರ ಪತ್ನಿಯಾಗಿದ್ದ ಶೈಲಜಾ ಶ್ರೀಶೈಲನ್ ಅವರು ಸುಮಾರು ಮಧ್ಯಾಹ್ನ 2 ಗಂಟೆಯ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಶೈಲಜಾ ಶ್ರೀಶೈಲನ್ ಅವರು ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ನೂರಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ತಮ್ಮ ಸಹಜ ಅಭಿನಯ, ಭಾವಪೂರ್ಣ ಪಾತ್ರ ನಿರ್ವಹಣೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಅವರು ಅನೇಕ ನಿರ್ದೇಶಕರು ಮತ್ತು ನಟರ ಮೆಚ್ಚುಗೆಗೆ ಪಾತ್ರರಾಗಿದ್ದರು.
ವಿಶೇಷವಾಗಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹಲವು ಚಿತ್ರಗಳಲ್ಲಿ ಅವರು ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದರು. ‘ಎ’, ‘ಉಪ್ಪಿ 2’, ‘ಅನಂತನ ಅವಾಂತರ’, ‘ಪುಟ್ಟ ಹೆಂಡ್ತಿ’, ‘ಗೃಹಪ್ರವೇಶ’, ‘ಬಾರೆ ನನ್ನ ಮುದ್ದಿನ ರಾಣಿ’ ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿಪ್ರೇಕ್ಷಕರ ನೆನಪಿನಲ್ಲಿ ಉಳಿದಿದ್ದಾರೆ.
ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಜನಪ್ರಿಯ ಧಾರಾವಾಹಿಗಳಾದ ‘ಮಾಯಾಮೃಗ’ ಹಾಗೂ ‘ಮುಕ್ತ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದರು. ಅವರ ಪಾತ್ರಗಳು ಕುಟುಂಬ ಪ್ರೇಕ್ಷಕರಲ್ಲಿ ವಿಶೇಷ ಮೆಚ್ಚುಗೆ ಪಡೆದಿದ್ದವು.
ಶೈಲಜಾ ಶ್ರೀಶೈಲನ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಅನೇಕ ಕಲಾವಿದರು, ನಿರ್ದೇಶಕರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಹಲವರು ಭಾವುಕ ನುಡಿಗಳನ್ನು ಹಂಚಿಕೊಂಡಿದ್ದಾರೆ.
ಇಂದು ಬೆಂಗಳೂರಿನ ಶ್ರೀರಾಂಪುರದ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಟುಂಬ ಸದಸ್ಯರು, ಬಂಧುಗಳು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.





