ಕನ್ನಡ ಚಿತ್ರರಂಗದಲ್ಲಿ ಹೊಸಬರ ಪ್ರಯತ್ನಗಳು ಸದ್ದು ಮಾಡುತ್ತಿರುವ ಸಂದರ್ಭದಲ್ಲಿ, ವಿಭಿನ್ನ ಶೀರ್ಷಿಕೆಯೊಂದಿಗೆ ‘ಸರ್ಕಾರಿ ಶಾಲೆ- H 8’ ಎಂಬ ಚಲನಚಿತ್ರವು ತೆರೆಗೆ ಬರಲು ಸಿದ್ಧವಾಗುತ್ತಿದೆ. ಶೀರ್ಷಿಕೆಯಲ್ಲೇ ಒಂದು ರೀತಿಯ ಸಸ್ಪೆನ್ಸ್ ಮತ್ತು ಕುತೂಹಲವನ್ನು ಹುಟ್ಟು ಹಾಕಿರುವ ಈ ಚಿತ್ರವು, ಪ್ರೇಕ್ಷಕರನ್ನು ಹಿಡಿದಿಡುವಂತಹ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ.
ಸದ್ಯ ಬಿಗ್ ಬಾಸ್ ಮನೆಯೊಳಗೆ ಪ್ರಮುಖ ಸ್ಪರ್ಧಿಯಾಗಿರುವ ಗಿಲ್ಲಿ ನಟ (Gilli Nata) ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಗುಣ ಹರಿಯಬ್ಬೆ ಅವರು ಹೊತ್ತಿದ್ದಾರೆ. ಸಂಪೂರ್ಣವಾಗಿ ಹೊಸಬರ ತಂಡದ ಈ ಪ್ರಯತ್ನಕ್ಕೆ ಗಿರಿಚಂದ್ರ ಪ್ರೊಡಕ್ಷನ್ಸ್ ಮೂಲಕ ತೇಜಸ್ವಿನಿ ಎಸ್. ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗೆ ಚಿತ್ರದ ನೂತನ ಪೋಸ್ಟರನ್ನು ಅತ್ಯಂತ ವಿಭಿನ್ನ ಶೈಲಿಯಲ್ಲಿ ಬಿಡುಗಡೆ ಮಾಡಲಾಯಿತು. ನಟ ಗಿಲ್ಲಿ ಅವರ ತವರೂರು ಎನಿಸಿರುವ ಮಳವಳ್ಳಿ ತಾಲೂಕಿನ ದಡದಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿಯೇ ಈ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಗಿಲ್ಲಿ ನಟ ಓದಿದ ಇದೇ ಶಾಲೆಯಲ್ಲಿ ಅವರ ತಂದೆ ಮತ್ತು ತಾಯಿಯವರು ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ, ತಮ್ಮ ಮಗನ ಚಿತ್ರತಂಡಕ್ಕೆ ಶುಭ ಕೋರಿದರು. ಈ ಮೂಲಕ ಚಿತ್ರತಂಡವು ‘ಸರ್ಕಾರಿ ಶಾಲೆ’ ಎಂಬ ಶೀರ್ಷಿಕೆ ಮತ್ತು ಭಾವನಾತ್ಮಕ ನಂಟಿಗೆ ಹೆಚ್ಚಿನ ಮಹತ್ವ ನೀಡಿದೆ.
‘ಸರ್ಕಾರಿ ಶಾಲೆ- H 8’ ಚಿತ್ರದ ಬಗ್ಗೆ ನಿರ್ದೇಶಕ ಗುಣ ಹರಿಯಬ್ಬೆ ಮಾತನಾಡುತ್ತಾ, ಈ ಚಿತ್ರದ ಕಥೆಯು ಆರಂಭದಲ್ಲಿಯೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಸಂಪೂರ್ಣ ಕಥೆಯು ಒಂದು ವಿಗ್ರಹದ (Idol) ಸುತ್ತ ನಿಂತಿರುತ್ತೆ ಎಂದು ತಿಳಿದು ಬಂದಿದೆ. ಕಥೆಯು ಒಟ್ಟು ನಾಲ್ಕು ವಿಭಿನ್ನ ಕಡೆಗಳಲ್ಲಿ ಸಾಗಲಿದ್ದು, ಪ್ರತಿಯೊಂದು ಭಾಗವೂ ಸಸ್ಪೆನ್ಸ್‌ನಿಂದ ಕೂಡಿದೆ ಎಂದು ತಿಳಿಸಿದ್ದಾರೆ.
ಚಿತ್ರದ ಬಹುತೇಕ ಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದ್ದು, ಉಳಿದಂತೆ ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರತಂಡದ ಶ್ರಮದ ಫಲವಾಗಿ, ಈಗಾಗಲೇ ಚಿತ್ರೀಕರಣದ ಎಲ್ಲಾ ಕೆಲಸಗಳು ಪೂರ್ಣಗೊಂಡಿವೆ. ಪ್ರಸ್ತುತ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಮತ್ತು ಸೆನ್ಸಾರ್ ಪ್ರಕ್ರಿಯೆಯನ್ನು ಕೂಡ ಯಶಸ್ವಿಯಾಗಿ ಮುಗಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರ ಫೆಬ್ರವರಿಯಲ್ಲಿ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಬೃಹತ್ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಜೊತೆಗೆ, ಚಿತ್ರಕ್ಕೆ ಉತ್ತಮ ತಾಂತ್ರಿಕ ಹಿನ್ನೆಲೆ ಕೂಡ ಇದೆ. ವಿಜೇತ್ ಮಂಜಯ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಒಟ್ಟು 3 ಹಾಡುಗಳಿವೆ. ವಿಶೇಷವಾಗಿ, ಜನಪ್ರಿಯ ಹಾಸ್ಯನಟ ಶರಣ್ ಮತ್ತು ಗಾಯಕರಾದ ಮೆಹಬೂಬ್ ಸಾಬ್ ಅವರು ತಲಾ ಒಂದು ಹಾಡನ್ನು ಹಾಡುವ ಮೂಲಕ ಚಿತ್ರಕ್ಕೆ ಸಂಗೀತದ ಮೆರುಗು ನೀಡಿದ್ದಾರೆ. ಹಾಡುಗಳಿಗೆ ಹೆಸರಾಂತ ಗೀತರಚನಾಕಾರ ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ರಚಿಸಿದ್ದಾರೆ.
ಚಿತ್ರದಲ್ಲಿ ಗಿಲ್ಲಿ ನಟ ಅವರ ಜೊತೆಗೆ ನಿರ್ದೇಶಕ ಗುಣ ಹರಿಯಬ್ಬೆ ಮತ್ತು ನಟಿ ಮೇಘಶ್ರೀ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ, ಹಿರಿಯ ಕಲಾವಿದರಾದ ಸುಚೇಂದ್ರ ಪ್ರಸಾದ್, ರಾಘವೇಂದ್ರ ರಾವ್, ಕುಮಾರ್, ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿಪುಡಿ, ಜೋತಿರಾಜ್, ನಮ್ರತಾ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಹುತೇಕ ಹೊಸ ಮತ್ತು ಹಳೆಯ ಕಲಾವಿದರ ಮಿಶ್ರಣದ ಈ ಚಿತ್ರವು ಪ್ರೇಕ್ಷಕರನ್ನು ರಂಜಿಸುವ ಭರವಸೆ ಮೂಡಿಸಿದೆ.





