ಬೆಂಗಳೂರು: ಭಾರತೀಯ ಸಿನಿರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಹೊಸ ಮಾನದಂಡ ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಹಾಗೂ ಪ್ರಶಾಂತ್ ನೀಲ್ ಆಪ್ತ ಸಮಾಲೋಚನೆ ನಡೆಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.
ಕೆಜಿಎಫ್, ಕೆಜಿಎಫ್ ಚಾಪ್ಟರ್ 2 ಹಾಗೂ ಸಲಾರ್ ಮೊದಲ ಭಾಗದಂತಹ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ ಈ ಕಾಂಬಿನೇಷನ್ ಮುಂದಿನ ಯೋಜನೆ ಯಾವುದು ಎಂಬ ಪ್ರಶ್ನೆ ಹಲವು ತಿಂಗಳುಗಳಿಂದ ಕೇಳಿಬರುತ್ತಿದೆ. ವಿಶೇಷವಾಗಿ ಸಲಾರ್: ಪಾರ್ಟ್ 1 ಬಿಡುಗಡೆಯಾದ ಬಳಿಕ ಸಲಾರ್-2 ಕುರಿತು ಯಾವುದೇ ಅಧಿಕೃತ ಘೋಷಣೆ ಆಗದ ಕಾರಣ ಸಿನಿಮಾ ಕೈಬಿಡಲಾಗಿದೆ ಎಂಬ ಗಾಸಿಪ್ ಹರಡಿತ್ತು.
ಇನ್ನೊಂದೆಡೆ, ಕೆಜಿಎಫ್-3 ಸಿನಿಮಾ ಈಗಾಗಲೇ ಘೋಷಣೆಯಾಗಿದ್ದರೂ, ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರ್ ತಮ್ಮ ತಮ್ಮ ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದರಿಂದ ಆ ಚಿತ್ರದ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಹೊರಬಂದಿರಲಿಲ್ಲ. ಇದರಿಂದ ಎರಡೂ ಸೀಕ್ವೆಲ್ ಸಿನಿಮಾಗಳು ಸದ್ಯಕ್ಕೆ ಸ್ಥಗಿತಗೊಂಡಿವೆಯೇ ಎಂಬ ಅನುಮಾನ ಅಭಿಮಾನಿಗಳನ್ನು ಕಾಡುತ್ತಿತ್ತು.
ಆದರೆ ಇದೀಗ ವೈರಲ್ ಆಗಿರುವ ಈ ಭೇಟಿ ಎಲ್ಲ ಚರ್ಚೆಗಳಿಗೂ ಹೊಸ ತಿರುವು ನೀಡಿದೆ. ಸಿನಿ ವಲಯದ ಕೆಲವರ ಪ್ರಕಾರ, ಈ ಸಭೆ ಸಲಾರ್-2 ಕಥೆ ಮತ್ತು ನಿರ್ಮಾಣದ ಕುರಿತ ಚರ್ಚೆಯಾಗಿರಬಹುದು ಎನ್ನಲಾಗುತ್ತಿದೆ. ಮತ್ತೊಂದು ವಲಯದಲ್ಲಿ ಕೆಜಿಎಫ್-3ಗೆ ಸಂಬಂಧಿಸಿದ ಆರಂಭಿಕ ಯೋಜನೆಗಳ ಬಗ್ಗೆ ಮಾತುಕತೆ ನಡೆದಿರಬಹುದು ಎಂಬ ಊಹಾಪೋಹವೂ ಕೇಳಿಬರುತ್ತಿದೆ.
ಇದರ ನಡುವೆ ಮತ್ತೊಂದು ಕುತೂಹಲಕಾರಿ ಅಂಶವೂ ಇದೆ. ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ ಮತ್ತೆ ಸಂಪೂರ್ಣ ಹೊಸ ಕಥೆಯೊಂದಿಗೆ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದರೆ ಅದು ಅಭಿಮಾನಿಗಳಿಗೆ ಅತಿದೊಡ್ಡ ಸರ್ಪ್ರೈಸ್ ಆಗಲಿದೆ. ಆದರೆ, ಈ ಎಲ್ಲ ಚರ್ಚೆಗಳ ಮಧ್ಯೆ ನಿರ್ಮಾಣ ಸಂಸ್ಥೆ ಅಥವಾ ನಿರ್ದೇಶಕರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹೀಗಾಗಿ, ಅಭಿಮಾನಿಗಳು ಈಗ ಅಧಿಕೃತ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ‘ಸಲಾರ್-2 ಡ್ರಾಪ್ ಆಗಿದೆ, ಅಥವಾ ‘ಪ್ರಾಜೆಕ್ಟ್ ತಾತ್ಕಾಲಿಕವಾಗಿ ನಿಂತಿದೆ’ ಎಂಬ ಗಾಸಿಪ್‌ಗಳು ಹರಿದಾಡತೊಡಗಿದವು. ನಿರ್ಮಾಪಕರು ಅಥವಾ ನಿರ್ದೇಶಕರು ಈ ವದಂತಿಗಳಿಗೆ ಸ್ಪಷ್ಟನೆ ನೀಡದ ಕಾರಣ ಅಭಿಮಾನಿಗಳಲ್ಲೂ ಗೊಂದಲ ಮುಂದುವರಿದಿತ್ತು.





