ವಿಶ್ವ ಸಿನಿದುನಿಯಾ ಇಂದು ನಮ್ಮ ಕರ್ನಾಟಕದತ್ತ ತಿರುಗಿ ನೋಡುತ್ತಿದೆ. ಅದಕ್ಕೆ ಕಾರಣಕರ್ತರಾಗಿರೋದು ಒನ್ & ಓನ್ಲಿ ರಾಕಿಂಗ್ ಸ್ಟಾರ್ ಯಶ್. ಯೆಸ್.. ಟಾಕ್ಸಿಕ್ ಹಾಗೂ ರಾಮಾಯಣದಂತಹ ವರ್ಲ್ಡ್ ಕ್ಲಾಸ್ ಸಿನಿಮಾಗಳು ಗ್ಲೋಬಲ್ ಮಾರ್ಕೆಟ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಹಾಲಿವುಡ್ ಮಂದಿ ಕೂಡ ಬೆಚ್ಚಿ ಬೀಳುವಂತಹ ಕಂಟೆಂಟ್, ಮೇಕಿಂಗ್ ಹಾಗೂ ವಿಷನ್‌ನೊಂದಿಗೆ ಬೆಳ್ಳಿತೆರೆ ಬೆಳಗಲು ಸಜ್ಜಾಗ್ತಿವೆ. 300 ರೂಪಾಯಿ ಇಟ್ಕೊಂಡು ಬೆಂಗಳೂರಿಗೆ ಬಂದಿದ್ದ ಹಾಸನ ಹೈದ ಯಶ್, ಇಂದು 4 ಸಾವಿರ ಕೋಟಿ ಸಿನಿಮಾದ ಪ್ರೊಡ್ಯೂಸರ್ ಅಂದ್ರೆ ನೀವು ನಂಬಲೇಬೇಕು. ಆದ್ರೆ ಅದ್ರ ಹಿಂದೆ ಆ ಪರಮೇಶ್ವರ ಶಿವನ ಕೃಪಾಕಟಾಕ್ಷವಿದೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.
- ರಾಕಿಂಗ್‌ಸ್ಟಾರ್‌ಗಿದೆ ಆ ಪರಮ ಈಶ್ವರನ ಕೃಪಾಕಟಾಕ್ಷ..!
- ಧರ್ಮಸ್ಥಳ ಫೇವರಿಟ್.. ತೆರೆ ಮೇಲೂ ಶಿವಭಕ್ತ ರಾವಣ
- ಅಮೆರಿಕಾಗೆ ಹೋದ್ರೂ ಸೂಟ್ ಮೇಲೆ ಶಿವನ ‘ತ್ರಿಶೂಲ’
- ಅಜ್ಜ ಹೇಳಿದ್ರು ಕಥೆ.. ಯಶ್ ಬಿಚ್ಚಿಟ್ರು ಆ ಟಾಪ್ ಸೀಕ್ರೆಟ್
ಕಿರುತೆರೆಯಿಂದ ನ್ಯಾಷನಲ್ ಸ್ಟಾರ್ಡಮ್ವರೆಗೆ ರಾಕಿಂಗ್ ಸ್ಟಾರ್ ಯಶ್ ರಾಕಿಂಗ್ ಜರ್ನಿ ಸಖತ್ ಇಂಟರೆಸ್ಟಿಂಗ್. ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ನ ಆಲ್‌ಟೈಮ್ ಕಿಂಗ್. ಯೂತ್ ಐಕಾನ್. ಹಗಲಿರುಳು ಸಿನಿಮಾ ಕನಸು ಕಾಣೋ ಸಿನಿಸಂತ. ಸ್ವಾಭಿಮಾನಿ ಕನ್ನಡಿಗರ ಹೆಮ್ಮೆಯ ಕನ್ನಡಿಗ. ಇಟ್ಟ ಹೆಜ್ಜೆಯತ್ತ ದಿಟ್ಟವಾಗಿ ಸಾಗೋ ಸೆಲ್ಫ್ ಮೇಡ್ ಶಹಜಾದ.. ಕನ್ನಡಿಗರ ಆಲ್‌ಟೈಮ್ ಅಣ್ತಮ್ಮ ಯಶ್.
ನವೀನ್ ಅನ್ನೋ ಸಾಮಾನ್ಯ ಹಾಸನ ಹೈದನೊಬ್ಬ ಇವತ್ತು ರಾಕಿಂಗ್ ಸ್ಟಾರ್ ಆಗಿ ರಾಕಿಭಾಯ್ ಅಂತ ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಕರೆಸಿಕೊಳ್ತಿದ್ದಾರೆ ಅಂದ್ರೆ ಅದ್ರ ಹಿಂದೆ ಸಾಕಷ್ಟು ಶ್ರಮವಿದೆ. ಬೆವರಿನ ಹೊಳೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ, ದೊಡ್ಡ ಕನಸಿದೆ. ಕೇವಲ 300 ರೂಪಾಯಿ ಇಟ್ಕೊಂಡು ಬೆಂಗಳೂರಿಗೆ ಬಂದಂತಹ ಯಶ್, ಇಂದು ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ ಸಿನಿಮಾಗಳನ್ನ ನಿರ್ಮಾಣ ಮಾಡುವ ಹಂತಕ್ಕೆ ಬೆಳೆದಿರೋದೇ ರೋಚಕ.
ಕೆಜಿಎಫ್ ಸಿನಿಮಾಗಳ ಬಳಿಕ ಹೆಮ್ಮೆಯ ಕನ್ನಡಿಗ ಯಶ್ ಟಾಕ್ಸಿಕ್ ಹಾಗೂ ರಾಮಾಯಣ ಅನ್ನೋ ಎರಡೆರಡು ವರ್ಲ್ಡ್ ಕ್ಲಾಸ್ ಸಿನಿಮಾಗಳನ್ನ ಮಾಡ್ತಿದ್ದಾರೆ. ಎರಡೂ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಸ್ಯಾಂಪಲ್ಸ್‌ನಿಂದ ನೋಡುಗರ ನಾಡಿಮಿಡಿತ ಅಕ್ಷರಶಃ ಹೆಚ್ಚಿಸಿವೆ. ಅದ್ರಲ್ಲೂ ರಾಮಾಯಣ ಸಿನಿಮಾ ಇತ್ತೀಚೆಗೆ ಅಮೆರಿಕಾದ ಸ್ಯಾಡ್ ಡಿಯಾಗೋ ಕಾಮಿಕ್ ಕಾನ್‌ನಲ್ಲಿ ನಡೆದ ಟ್ರೈಲರ್ ಲಾಂಚ್ ಇವೆಂಟ್‌ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಆ ಶಿವನ ಆಜ್ಞೆ ಇಲ್ಲದೆ ಒಂದು ಹುಲ್ಲು ಕಟ್ಟಿ ಕೂಡ ಅಲುಗಾಡಲ್ಲ ಅನ್ನೋ ಮಾತಿದೆ. ಅದು ನಿಜವೂ ಹೌದು. ಯಾಕಂದ್ರೆ ಯಶ್ ಸಕ್ಸಸ್ ಹಿಂದಿರೋ ದೈವ ಆ ಪರಮೇಶ್ವರ ಶಿವ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಮಹಾನ್ ಶಿವಭಕ್ತವಾಗಿರೋ ರಾಕಿಂಗ್ ಸ್ಟಾರ್ ಯಶ್‌ಗೆ ಈಶ್ವರನ ಕೃಪಾಕಟಾಕ್ಷ ಶಾಲಾ ದಿನಗಳಿಂದಲೂ ಇದ್ದೇ ಇದೆ. ಕೋ ಇನ್ಸಿಡೆಂಟ್ ಏನಪ್ಪಾ ಅಂದ್ರೆ ಸದ್ಯ ತೆರೆ ಮೇಲೆ ಕೂಡ ಲಾರ್ಡ್ ಶಿವನ ಮಹಾ ಭಕ್ತ ಲಂಕಾಧಿಪತಿ ರಾವಣನಾಗಿಯೇ ಕಾಣಸಿಗಲಿದ್ದಾರೆ ಯಶ್. ಹೌದು.. ನಿತೇಶ್ ತಿವಾರಿ-ನಮಿತ್ ಮಲ್ಹೋತ್ರಾರ ರಾಮಾಯಣ ಚಿತ್ರದಲ್ಲಿ ನಮ್ಮ ಯಶ್ ಲಂಕೇಶ್ವರನಾಗಿ ಅಬ್ಬರಿಸಿ, ಆರ್ಭಟಿಸಲಿದ್ದಾರೆ.
- ಯಶ್ ಆರಾಧ್ಯ ದೈವ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ
- ಚಿಕ್ಕ ವಯಸ್ಸಿನಲ್ಲಿ ಧೈರ್ಯ ತುಂಬಿ, ದಾರಿ ತೋರಿದ್ದ ಶಿವ..!
- ಕಣ್ಣು ತುಂಬಿ ಬರುತ್ತೆ.. ನನ್ನ ಪ್ರತಿ ಸಕ್ಸಸ್ ಹಿಂದೆ ದೇವರಿದ್ದಾರೆ
- ನಾ ನಂಬಿದ ದೈವ ನನ್ನ ಎಂದೂ ಕೈ ಬಿಟ್ಟಿಲ್ಲ ಎಂದಿದ್ದ ಯಶ್
ಯೆಸ್.. ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ನಟ ಯಶ್‌ರ ಆರಾಧ್ಯ ದೈವ. ಆ ಶ್ರೀಕ್ಷೇತ್ರ ಧರ್ಮಸ್ಥಳ ರಾಕಿಂಗ್ ಸ್ಟಾರ್‌ಗೆ ಬಹಳ ಇಷ್ಟವಾಗುವ ಪುಣ್ಯಕ್ಷೇತ್ರ ಕೂಡ ಹೌದು. ಅದಕ್ಕೆ ಅವರು ಧರ್ಮಸ್ಥಳಕ್ಕೆ ಆಗಾಗ ಹೋಗ್ತಾ ಇರ್ತಾರೆ ಅನ್ನೋದೇ ಸಾಕ್ಷಿ. ಅಷ್ಟೇ ಅಲ್ಲ.. ಒಮ್ಮೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಯಶ್ ನುಡಿದ ಒಂದೊಂದು ಮಾತು ಕೂಡ ಮೈ ರೋಮಾಂಚನಗೊಳಿಸುವಂತಿವೆ. ಚಿಕ್ಕ ವಯಸ್ಸಿನಲ್ಲಿ ಭಯಗೊಂಡಿದ್ದ ಯಶ್‌ಗೆ ಧೈರ್ಯ ತುಂಬಿ, ದಾರಿ ತೋರಿದ್ದೇ ಧರ್ಮಸ್ಥಳ ಮಂಜುನಾಥಸ್ವಾಮಿಯಂತೆ.
ನನಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಗಳು ಅಂದ್ರೆ ಕಣ್ಣು ತುಂಬಿ ಬರುತ್ತೆ. ನನ್ನ ಪ್ರತಿ ಸಕ್ಸಸ್ ಹಿಂದೆ ಮಂಜುನಾಥ ಸ್ವಾಮಿ ಇದ್ದಾರೆಡ. ನಾನು ನಂಬಿದ ಆ ದೈವ ಎಂದೂ ನನ್ನ ಕೈಬಿಟ್ಟಿಲ್ಲ. ನನ್ನ ತಾಯಿ ಕೂಡ ಆಗಾಗ ನನಗೆ ಹೇಳ್ತಿರ್ತಾರೆ.. ಮಂಜುನಾಥಸ್ವಾಮಿಯನ್ನ ನೆನೆಸಿಕೋ ಅಂತ ಅದು ನಿಜವಾಗಿದೆ ಅಂತ ಹೇಳಿದ್ದರು.
- ನಂಜನಗೂಡಿನ ಶ್ರೀಕಂಠೇಶ್ವರನ ಮಹಾಭಕ್ತ ಈ ಯಶ್..!
- ಸೂಪರ್ ಸ್ಟಾರ್ ಮನೆ ದೇವ್ರು ಕೂಡ ಇದೇ ಶ್ರೀಕಂಠೇಶ್ವರ
ಮೈಸೂರಿನ ನಂಜನಗೂಡಿನಲ್ಲಿರೋ ಶ್ರೀಕಂಠೇಶ್ವರನ ಮಹಾಭಕ್ತ ಯಶ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳು ಐರಾ ಹಾಗೂ ಯಥರ್ವ್ ಜೊತೆ ಯಶ್ ಆಗಾಗ ನಂಜನಗೂಡಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಆ ಶ್ರೀಕಂಠೇಶ್ವರನ ಕೃಪೆಗೆ ಪಾತ್ರರಾಗುತ್ತಾ ಇರ್ತಾರೆ. ಇತ್ತೀಚೆಗೆ ಒಮ್ಮೆ ಅವರು ತೆರಳಿದ್ದನ್ನ ನಾವಿಲ್ಲಿ ಸ್ಮರಿಸಿಕೊಳ್ಳಬಹುದು.
ಇಂಟರೆಸ್ಟಿಂಗ್ ಅಂದ್ರೆ ನಟ ಯಶ್ ಮನೆ ದೇವರು ಇದೇ ನಂಜನಗೂಡಿನಲ್ಲಿರೋ ಶ್ರೀಕಂಠೇಶ್ವರ ಸ್ವಾಮಿ. ಬಹುಶಃ ಅದೇ ಕಾರಣದಿಂದ ಇರಬಹುದು, ಧರ್ಮಸ್ಥಳ ಮಂಜುನಾಥ ಸ್ವಾಮಿ ಕೂಡ ಯಶ್ ಶಾಲಾ ದಿನಗಳಿಂದಲೇ ಅವರಿಗೆ ಫೇವರಿಟ್ ಅನಿಸಿದೆ.
- ರಾವಣನಾಗೋಕೆ ಮುನ್ನ ‘ಮಹಾಕಾಳೇಶ್ವರ’ನ ದರ್ಶನ..!
- ಉಜ್ಜಯಿನಿ ಮಹಾಕಾಲನಿಗೆ ಯಶ್ ಮಹಾ ಮಂಗಳಾರತಿ
ನಟ ಯಶ್ ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ರಣ್‌ಬೀರ್ ಕಪೂರ್ ಶ್ರೀರಾಮನಾದ್ರೆ, ಸಾಯಿ ಪಲ್ಲವಿ ಸೀತೆಯಾಗಿ ಬಣ್ಣ ಹಚ್ಚಿದ್ದಾರೆ. ಆದ್ರೆ ಲಂಕೇಶ್ವರನ ಪಾತ್ರಕ್ಕೆ ಯಶ್ ಬಣ್ಣ ಹಚ್ಚೋಕೆ ಮುನ್ನ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರೋ ಪವರ್‌ಫುಲ್ ಮಹಾಕಾಳೇಶ್ವರನ ದರ್ಶನ ಪಡೆದು, ನಂತ್ರ ರಾಮಾಯಣ ಶೂಟಿಂಗ್ ಸೆಟ್‌ಗೆ ಕಾಲಿಟ್ಟಿದ್ರು ಯಶ್.
ಭಾರತದ ಸುಪ್ರಸಿದ್ದ 12 ಜ್ಯೋತಿರ್ಲಿಂಗಗಳಲ್ಲಿ ಶಿವನು ದಕ್ಷಿಣ ದಿಕ್ಕಿಗೆ ಅಭಿಮುಖನಾಗಿರೋ ಏಕೈಕ ಸ್ಥಳವಿದು. ಇಲ್ಲಿ ಚಿತಾಭಸ್ಮದಿಂದ ನಡೆಸೋ ಭಸ್ಮ ಆರತಿ ತುಂಬಾ ವಿಶೇಷವಾಗಿದ್ದು, ನಟ ಯಶ್ ಹಣೆಗೆ ಭಸ್ಮ ಹಚ್ಚಿ, ಕೊರಳಿಗೆ ರುದ್ರಾಕ್ಷಿ ಮಾಲೆ ಧರಿಸಿ, ಆ ಮಹಾಕಾಲನಿಗೆ ಮಹಾ ಆರತಿ ಬೆಳಗಿದ್ರು.
ಅಂದು ಯಶ್ ಅಲ್ಲಿ ಮಾಡಿದ್ದ ಆ ಸಂಕಲ್ಪ ನೆರವೇರಿದೆ. ಯಾವುದೇ ಅಡ್ಡಿ ಆತಂಕಗಳಿಲ್ಲದೆ ರಾಮಾಯಣ ಸಿನಿಮಾ ಒಂದಲ್ಲ ಎರಡೆರಡು ಭಾಗಗಳಲ್ಲಿ ರಿಲೀಸ್‌ಗೆ ತಯಾರಾಗ್ತಿದೆ. ಸುಮಾರು 4 ಸಾವಿರ ಕೋಟಿ ಬಿಗ್ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾದ ಮೊದಲ ಭಾಗ ಇದೇ ದೀಪಾವಳಿಗೆ ತೆರೆಗೆ ಬಂದ್ರೆ, 2027ರ ದೀಪಾವಳಿ ಹಬ್ಬಕ್ಕೆ 2ನೇ ಭಾಗ ಬಿಡುಗಡೆ ಆಗಲಿದೆ. ಇದು ನಮ್ಮ ಸಾಂಸ್ಕೃತಿಕತೆಯ ತಾಯಿ ಬೇರಾಗಿದ್ದು, ಅದನ್ನ ಗ್ಲೋಬಲ್ ಪ್ಲಾಟ್‌ಫಾರ್ಮ್‌ಗೆ ಕೊಂಡೊಯ್ಯುವ ಮಹದಾಸೆ ಯಶ್ ಹೊಂದಿದ್ದಾರೆ.
-
ಅಮೆರಿಕ ಸ್ಯಾನ್ ಡಿಯಾಗೋನಲ್ಲಿ ರಾಮಾಯಣ ಇವೆಂಟ್
-
ಬ್ಲ್ಯಾಕ್ ದುಬಾರಿ ಸೂಟ್ ಮೇಲೆ ಶಿವನ ತ್ರಿಶೂಲದ ಹೊಳಪು
ಡೆಲ್ಲಿಯ ಭಾರತ್ ಮಂಟಪದಲ್ಲಿ ರಾಮಾಯಣ ಸಿನಿಮಾದ ಟ್ರೈಲರ್ ಪ್ರದರ್ಶನಗೊಂಡಿತ್ತು. ಪ್ರಥಮ ಸಂಕಲ್ಪ ಅನ್ನೋ ಹೆಸರಲ್ಲಿ ಜುಲೈ 18ರಂದು ಟ್ರೈಲರ್ ದರ್ಶನ ಮಾಡಿಸಿತ್ತು ಚಿತ್ರತಂಡ. ಆದ್ರೆ ಜುಲೈ 24ರಂದು ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ಗ್ಲೋಬಲ್ ಇವೆಂಟ್ ನಡೆಯಿತು. ಅಲ್ಲಿ ಯಶ್, ರಣ್‌ಬೀರ್ ಕಪೂರ್, ನಿತೇಶ್ ತಿವಾರಿ ಹಾಗೂ ನಮಿತ್ ಮಲ್ಹೋತ್ರಾ ಭಾಗಿಯಾಗಿದ್ರು. ಇಂಟರೆಸ್ಟಿಂಗ್ ಅಂದ್ರೆ ಯಶ್ ಬ್ಲ್ಯಾಕ್ & ಬ್ಲ್ಯಾಕ್‌ನಲ್ಲಿ ಮಿಂಚಿದ್ರು.
ಯಶ್ ಕಾಸ್ಟ್ಯೂಮ್‌ನಲ್ಲಿ ಹೈಲೈಟ್ ಆಗಿದ್ದು ಮಾತ್ರ ಲಾರ್ಡ್ ಶಿವನ ತ್ರಿಶೂಲ ಆಯುಧ. ಯೆಸ್.. ಗೋಲ್ಡ್ ಕಲರ್ ತಿಶ್ರೂಲವನ್ನ ತಮ್ಮ ದುಬಾರಿ ಸೂಟ್ ಮೇಲೆ ಧರಿಸಿದ್ದ ಯಶ್, ತಾನು ಆ ಶಿವನ ಎಷ್ಟು ದೊಡ್ಡ ಭಕ್ತ ಅನ್ನೋದನ್ನ ಆ ಗ್ಲೋಬಲ್ ವೇದಿಕೆ ಮೂಲಕ ವಿಶ್ವಕ್ಕೆ ಸಾರಿದ್ರು. ಸದ್ಯ ಜನಗತ್ತಿನ ಮೂಲೆ ಮೂಲೆಯಲ್ಲಿ ಯಶ್ ಧರಿಸಿ ಬಂದಂತಹ ಈ ತ್ರಿಶೂಲದ ಬಗ್ಗೆ ಚರ್ಚೆ ನಡೆಯುತ್ತಿರೋದು ವಿಶೇಷ.
ಅಲ್ಲದೆ, ಅಲ್ಲಿ ನೀಡಿದ ಸಂದರ್ಶನಗಳಲ್ಲಿ ಮಾತನಾಡುತ್ತಾ.. ನನಗೆ ರಾಮಾಯಣದ ಕಥೆಯನ್ನ ಮೊದಲು ಹೇಳಿದ್ದೇ ನನ್ನ ಅಜ್ಜ ಎಂದರು. ಅವರು ಕಥೆ ಹೇಳಿದಾಗ ನಾವೆಲ್ಲಾ ಆ ಪಾತ್ರ ಅಥ್ವಾ ಆ ವ್ಯಕ್ತಿ ಹೇಗಿರಬಹುದು ಅನ್ನೋದನ್ನ ಊಹಿಸಿಕೊಳ್ಳುತ್ತಿದ್ದೆವು. ಆದ್ರೆ ರಾಮ ಹುಟ್ಟುತ್ತಲೇ ಸಾಮ್ರಾಜ್ಯ ಇದ್ದವರು. ನಂತರ ಕಾರಣಾಂತರಗಳಿಂದ ಅದನ್ನ ಬಿಟ್ಟುಕೊಟ್ಟು ಹೊರಬರ್ತಾರೆ. ಆದಾಗ್ಯೂ ಕೂಡ ಅವರ ಆದರ್ಶಗಳು, ಸರಳತೆ, ನಡೆ, ನುಡಿ, ಆಚಾರಗಳು ಮತ್ತೆ ಅವ್ರನ್ನ ಸಾಮ್ರಾಜ್ಯಕ್ಕೆ ಹಿಂದಿರುಗುವಂತೆ ಮಾಡುತ್ತವೆ. ಆದ್ರೆ ರಾವಣ ಝೀರೋದಿಂದ ಶುರು ಮಾಡಿ ಸಕಲ ಕಲಾ ಪಾರಂಗತವಾಗಿ, ಪ್ರತೀಕಾರದಿಂದ ಬದುಕಲು ಹೋಗ್ತಾನೆ ಅಂತ ತಮ್ಮದೇ ಶೈಲಿಯಲ್ಲಿ ಯಶ್ ವಿವರಿಸಿದ್ದಾರೆ.
ರಣ್‌ಬೀರ್ ಕಪೂರ್ ಕೂಡ ಯಶ್ ಸ್ವ್ಯಾಗ್ ಹಾಗು ನಟನೆ ಬಗ್ಗೆ ಕಮೆಂಟ್ ಮಾಡಿದ್ದು, ಬಹಳ ಸ್ವ್ಯಾಗ್‌ನಿಂದ ಯಶ್ ಅವರು ಆ ಪಾತ್ರ ನಿಭಾಯಿಸಿದ್ದಾರೆ ಎಂದಿದ್ದಾರೆ. ಇತ್ತ ಯಶ್ ಕೂಡ ರಣ್‌ಬೀರ್ ಕಪೂರ್ ಶ್ರೀರಾಮನ ಪಾತ್ರಕ್ಕಾಗಿ ಎಷ್ಟು ಡೆಡಿಕೇಟೆಡ್ ಆಗಿ ಇದ್ರು ಅನ್ನೋದನ್ನ ಬಣ್ಣಿಸುತ್ತಾ, ಹೊಗಳಿರೋದು ಇಂಟರೆಸ್ಟಿಂಗ್.
ಒಟ್ಟಾರೆ.. ವಿದ್ಯಾರ್ಥಿಗಳು ಡೆಲ್ಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿದ್ದ ಪ್ರೊಟೆಸ್ಟ್‌ನಿಂದಾಗಿ ರಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆ ಮುಂದೂಡಲಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ರಾಮಾಯಣ ಟ್ರೈಲರ್ ದರ್ಶನದ ಜೊತೆ ರಾಕಿಂಗ್ ರಾವಣದ ಅತ್ಯದ್ಭುತ ಲೋಕ ಕೂಡ ಅನಾವರಣಗೊಳ್ಳಲಿದೆ ಎನ್ನಲಾಗ್ತಿದೆ. ಆದ್ರೆ ಟಾಕ್ಸಿಕ್ ಟ್ರೈಲರ್ ಮೊದಲು ಬರುತ್ತಾ ಅಥವಾ ರಾಮಾಯಣ ಮೊದಲು ಬರುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





