ರೆಸಾರ್ಟ್.. ಇಂಡಿಯಾದ ಟಾಪ್ ವೆಬ್ ಸೀರೀಸ್‌ಗಳ ದಾಖಲೆಗಳನ್ನ ಸರಿಗಟ್ಟಿ, ತನ್ನದೇ ಆದ ಸಾರ್ವಕಾಲಿಕ ದಾಖಲೆ ಬರೆಯುತ್ತಿರೋ ಸೌತ್ ಇಂಡಿಯಾದ ಪ್ಯಾನ್ ಇಂಡಿಯಾ ಸೀರೀಸ್. ಮಾರ್ಚ್‌ನಲ್ಲಿ ಓಟಿಟಿಗೆ ಲಗ್ಗೆ ಇಟ್ಟ ಈ ಸೀರೀಸ್ 100 ದಾಖಲೆ ಎಪಿಸೋಡ್‌ಗಳಿಂದ ಪ್ರೇಕ್ಷಕರ ದಿಲ್ ದೋಚಿದೆ. ಸೀಸನ್-2ಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ನಮ್ಮ ಪ್ರಚಂಡ ಕುಳ್ಳ ದ್ವಾರಕೀಶ್ ಅವರ ಮಗ ಗಿರಿ ದ್ವಾರಕೀಶ್ ಕೂಡ ಮಿಂಚು ಹರಿಸುತ್ತಿರೋದು ಇಂಟರೆಸ್ಟಿಂಗ್.
- ‘ರೆಸಾರ್ಟ್’ ಸೀರೀಸ್ ರೆಕಾರ್ಡ್.. ದ್ವಾರಕೀಶ್ ಮಗ ರಾಕ್ಸ್
- 100 ಸಂಚಿಕೆಗಳ ಬಿಗ್ಗೆಸ್ಟ್ & ಬ್ಯೂಟಿಫುಲ್ ವೆಬ್ ಸೀರೀಸ್..!
- ಫ್ಯಾಮಿಲಿಮ್ಯಾನ್, ಸ್ಕ್ಯಾಮ್, ಮಿರ್ಜಾಪುರ್‌ನ ಮೀರಿದ ಕ್ರೇಜ್
- 2ನೇ ಸೀಸನ್‌ಗೆ ತಯಾರಿ.. ವೆಟ್ರಿ v/s ನೆಡುಮಾರನ್ ಜುಗಲ್ಬಂದಿ
ಸದ್ಯ ವೆಬ್ ಸೀರೀಸ್ ಪ್ರಪಂಚದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಏಕೈಕ ಸೀರೀಸ್ ಅಂದ್ರೆ ಅದು ತಮಿಳಿನ ರೆಸಾರ್ಟ್. ಯೆಸ್.. ಜಿಯೋ ಹಾಟ್‌ಸ್ಟಾರ್‌ನಲ್ಲಿ ಇದೇ ಮಾರ್ಚ್ 13ರಂದು ಸ್ಟ್ರೀಮಿಂಗ್ ಆದ ರೆಸಾರ್ಟ್ ಅನ್ನೋ ವೆಬ್ ಸೀರೀಸ್.. ದೇಶ ವಿದೇಶಗಳಲ್ಲೆಲ್ಲಾ ನೋಡುಗರಿಂದ ಅದ್ಭುತ ಹಾಗೂ ಅನಿರೀಕ್ಷಿತ ರೆಸ್ಪಾನ್ಸ್ ಪಡೆಯುತ್ತಿದೆ. ಮಿಲಿಯನ್ ಗಟ್ಟಲೆ ವೀವ್ಸ್‌ನಿಂದ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಪಂಚಭಾಷೆಗಳಲ್ಲಿ ರಾರಾಜಿಸ್ತಿದೆ.
ಇಂಟರೆಸ್ಟಿಂಗ್ ಅಂದ್ರೆ ಇದು ಬರೋಬ್ಬರಿ 100 ಸಂಚಿಕೆಗಳಷ್ಟು ಬಿಗ್ಗೆಸ್ಟ್ ಹಾಗೂ ಅಷ್ಟೇ ಬ್ಯೂಟಿಫುಲ್ ಆಗಿರೋ ವೆಬ್ ಸೀರೀಸ್. ಈ ಸೀರೀಸ್‌ನ ಕಥೆ, ಪಾತ್ರಗಳು ಹಾಗೂ ಮೇಕಿಂಗ್ ನೋಡುಗರನ್ನ ಎಷ್ಟರ ಮಟ್ಟಿಗೆ ಮಂತ್ರಮುಗ್ಧಗೊಳಿಸಿದೆ ಅಂದ್ರೆ, ಇಲ್ಲಿಯ ತನಕ ಟಾಪ್ ಲಿಸ್ಟ್‌ನಲ್ಲಿ ರಾರಾಜಿಸ್ತಿದ್ದ ದಿ ಫ್ಯಾಮಿಲಿ ಮ್ಯಾನ್, ಸ್ಕ್ಯಾಮ್ ಹಾಗೂ ಮಿರ್ಜಾಪುರ್ ಸೀರೀಸ್‌ಗಳ ಪಾಪ್ಯುಲಾರಿಟಿಯನ್ನೇ ಮೀರಿಸೋ ರೇಂಜ್‌ಗೆ ಅಂದ್ರೆ ನೀವು ನಂಬಲೇಬೇಕು.
ಮಹಾಬಲಿಪುರಂನಲ್ಲಿರೋ ಆರ್ ಆರ್ ಅನ್ನೋ ರೆಸಾರ್ಟ್ ಹಾಗೂ ಅದರಲ್ಲಿ ಕೆಲಸ ಮಾಡುವ ಕೆಲಸಗಾರರು, ಅದ್ರ ಮಾಲೀಕರು, ಇನ್ವೆಸ್ಟರ್ಸ್, ಕೆಲಸಗಾರರ ಲೈಫ್‌ಗಳಲ್ಲಿ ನಡೆಯೋ ಇನ್ಸಿಡೆಂಟ್‌ಗಳು.. ಇವೇ ಈ ಸೀರೀಸ್‌ನ ಜೀವಾಳ. ಅದರಲ್ಲೂ ರೂಮ್ ಸರ್ವೀಸ್ ಬಾಯ್ ಆಗಿ ಕೆಲಸಕ್ಕೆ ಬರುವ ವೆಟ್ರಿ ಚಿದಂಬರಮ್ ಹಾಗೂ ಅಲ್ಲಿರೋ ಚೆಫ್ ನೆಡುಮಾರನ್ ನಡುವಿನ ಶೀತಲ ಸಮರದ ಕಥಾನಕವಿದು. ಹೌದು.. ಚೆನ್ನಾಗಿ ಓದಿಕೊಂಡು ಕಿಚನ್‌ನಲ್ಲಿ ಚೆಫ್ ಆಗಿ ಕೆಲಸ ಮಾಡುವ ಜಂಗಲ್ ಕಾ ರಾಜ ನೆಡುಮಾರನ್ ಹಾಗೂ ಓದದೇನೇ ರೆಸಾರ್ಟ್‌ಗೆ ಬರೋ ಪ್ರವಾಸಿಗರ ಮನಸ್ಸು ಗೆಲ್ಲೋ ವೆಟ್ರಿಯ ನಡುವಿನ ವೈರುಧ್ಯಗಳ ಕಥೆಯಿದು. ಇನ್ ಫ್ಯಾಕ್ಟ್ ಆರ್ಗ್ಯಾನಿಕ್ ಫುಡ್ ವರ್ಸಸ್ ದುಬಾರಿ ಫೈವ್ ಸ್ಟಾರ್ ರೇಟಿಂಗ್ ಫುಡ್ ನಡುವಿನ ಜಿದ್ದಾಜಿದ್ದಿನ ಕಥೆ ಅಂದ್ರೂ ತಪ್ಪಾಗಲ್ಲ.
ಅದರ ನಡುವೆ ಚೆಫ್ ನೆಡುಮಾರನ್ ಮಗಳು ಸು ಚೆಫ್ ಐಶ್ವರ್ಯಾ ಹಾಗೂ ವೆಟ್ರಿ ನಡುವಿನ ಲವ್ ಟ್ರ್ಯಾಕ್. ವಿಕ್ಕಿ-ವೇಣಿ ನಡುವಿನ ಲವ್ ಸ್ಟೋರಿ. ಚೀಕ ಅಲಿಯಾಸ್ ಚಿದಂಬರಂ ಆ ರೆಸಾರ್ಟ್‌ನಿಂದ ಕಾಣೆಯಾದ ಪರಿ. ರೆಸಾರ್ಟ್ ಮಾಲೀಕ ರಘುಪತಿಯ ಕಮಾಂಡಿಂಗ್. ವೆಟ್ರಿ ಆಪ್ತ ಗೆಳೆಯ ಪಾಂಡಿ. ಭವಾನಿ ಅಕ್ಕ. ಆಕೆಯ ಮಗಳು ರಮ್ಯಾ.. ಹೀಗೆ ಒಂದೊಂದು ಪಾತ್ರ ಕೂಡ ವ್ಹಾವ್ ಫೀಲ್ ತರಿಸುತ್ತೆ. ಅದ್ರಲ್ಲೂ ಸಾಮಾನ್ಯ ರೂಮ್ ಸರ್ವೀಸ್ ಬಾಯ್ ವೆಟ್ರಿ ಸ್ಟಾರ್ ಚೆಫ್ ಅವಾರ್ಡ್ ಪಡೆಯುವ ಸುದೀರ್ಘ ಪಯಣ ವೆರಿ ವೆರಿ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿದೆ.
ವಿಜಯ್ ಕುಮಾರ್ ರಾಜೇಂದ್ರನ್ ಇಲ್ಲಿ ವೆಟ್ರಿ ಪಾತ್ರಕ್ಕೆ ಜೀವ ತುಂಬಿದ್ದು, ಈ ಅದ್ಭುತ ಕಥೆಯನ್ನ ಅವರೇ ಬರೆದಿರೋದು ವಿಶೇಷ. ಹತ್ತು ಹದಿನೈದು ಎಪಿಸೋಡ್‌ಗಳಿಗಾಗಿ ವರ್ಷಾನುಗಟ್ಟಲೆ ಕಾಯಿಸೋ ಡೈರೆಕ್ಟರ್‌ಗಳ ನಡುವೆ, ನಿರ್ದೇಶಕ ಪ್ರವೀಣ್ ಬೆನ್ನೆಟ್ ನೂರು ಎಪಿಸೋಡ್‌ಗಳನ್ನ ಎಲ್ಲೂ ಬೋರ್ ಆಗದಂತೆ ಕ್ಯೂರಿಯಾಸಿಟಿ ಬ್ಯುಲ್ಡ್ ಮಾಡ್ತಾ ಕಟ್ಟಿರೋದು ಗಮನಾರ್ಹ ವಿಷಯ. ಅದ್ರಲ್ಲೂ ಸ್ಟಾರ್ ಚೆಫ್ ಕಾಂಪಿಟೇಷನ್‌ಗೂ ಮೊದಲು ವೆಟ್ರಿ ತಯಾರಿ ನಡೆಸೋ ದೃಶ್ಯಗಳಲ್ಲಿ ಕೆಲವೊಂದನ್ನ ಸಮುದ್ರದ ಮಧ್ಯೆ ರಿಯಲ್ ವಾಟರ್‌ನಲ್ಲಿ ಸಣ್ಣ ಬೋಟ್‌ಗಳಲ್ಲಿ ಚಿತ್ರಿಸಿರೋದು ಗ್ರೇಟ್.
ವೆಟ್ರಿ-ಐಶು ಪ್ರೇಮ ನಿವೇದನೆ ಆಗುತ್ತಾ ಇಲ್ವಾ..? ಮತ್ತೆ ರೆಸಾರ್ಟ್‌ಗೆ ವಾಪಸ್ ಆಗಿರೋ ನೆಡುಮಾರನ್ ವೆಟ್ರಿಗೆ ಕಾಟ ಕೊಡೋಕೆ ಶುರು ಮಾಡ್ತಾನಾ..? ವೆಟ್ರಿ ತಂದೆ ಚಿದಂಬರಂ ವಾಪಸ್ ಆಗ್ತಾರಾ..? ವಿಕ್ಕಿ-ವೇಣಿ ಮದ್ವೆ ಆಗ್ತಾರಾ..? ಇವೇ ಮೊದಲಾದ ವಿಷಯಗಳು ಕ್ಯೂರಿಯಾಸಿಟಿ ಹುಟ್ಟಿಸಿದ್ದು, ಎರಡನೇ ಸೀಸನ್‌ಗೆ ಟೀಂ ತಯಾರಿ ನಡೆಸ್ತಿದೆ. ಪ್ರೇಕ್ಷಕರೆಲ್ಲಾ ಆದಷ್ಟು ಬೇಗ ಸೆಕೆಂಡ್ ಸೀಸನ್ ರಿಲೀಸ್ ಮಾಡಲು ಟೀಂ ಮೇಲೆ ಒತ್ತಡ ಏರುತ್ತಿರೋದು ಅಚ್ಚರಿ.
- ನೆಡುಮಾರನ್ ಅಸಿಸ್ಟೆಂಟ್ ಚೆಫ್ ಜಾನ್ ಗಿರಿ ದ್ವಾರಕೀಶ್
- ಕನ್ನಡಿಗನ ನಟನೆಗೆ ಇಡೀ ದೇಶ ಕ್ಲೀನ್ ಬೋಲ್ಡ್ ಗುರು..!!
ಯೆಸ್.. ಈ ರೆಸಾರ್ಟ್ ವೆಬ್ ಸೀರೀಸ್‌ನ ಪಾತ್ರ ವರ್ಗದಲ್ಲಿ ಗಮನ ಸೆಳೆಯುವ ಮತ್ತೊಂದು ಪಾತ್ರ ಅಂದ್ರೆ ಅದು ಚೆಫ್ ಜಾನ್. ಈತ ಖಳನಾಯಕ ನೆಡುಮಾರನ್‌ನ ಅಸಿಸ್ಟೆಂಟ್. ಕಿಚನ್‌ಗೆ ಟೀಂ ಪಾಲಿಗೆ ಒಂಥರಾ ಜೂನಿಯರ್ ಲಯನ್. ಅಂದಹಾಗೆ ಈ ಚೆಫ್ ಜಾನ್ ಪಾತ್ರ ಮಾಡಿರೋದು ಬೇರಾರೂ ಅಲ್ಲ ನಮ್ಮ ಕನ್ನಡದ ಪ್ರಚಂಡ ಕುಳ್ಳ.. ವೆಟೆರನ್ ಆ್ಯಕ್ಟರ್, ಡೈರೆಕ್ಟರ್, ಪ್ರೊಡ್ಯೂಸರ್ ದ್ವಾರಕೀಶ್ ಅವರ ಮಗ ಗಿರಿ ದ್ವಾರಕೀಶ್.
ಬಾಲ್ಯದಿಂದಲೇ ನಟನೆಯನ್ನ ಮೈಗೂಡಿಸಿಕೊಂಡಿರೋ ಗಿರಿ ದ್ವಾರಕೀಶ್, 25ಕ್ಕೂ ಅಧಿಕ ಸಿನಿಮಾಗಳು, 40ಕ್ಕೂ ಅಧಿಕ ಸೀರಿಯಲ್ಸ್, 3 ವೆಬ್ ಸೀರೀಸ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡಕ್ಕಿಂತ ತಮಿಳಲ್ಲಿ ಇವರಿಗೆ ವಿಶೇಷವಾದ ಫ್ಯಾನ್ ಬೇಸ್ ಇದೆ. ಕನ್ನಡದ ಆಪ್ತಮಿತ್ರ, ಚೌಕ, ಅಮ್ಮ ಐ ಲವ್ ಯೂ ಸಿನಿಮಾಗಳು ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ತಮ್ಮ ನಟನಾ ಗತ್ತು ತೋರಿದ್ದಾರೆ ಗಿರಿ ದ್ವಾರಕೀಶ್. ಸದ್ಯ ಈ ಬ್ಲಾಕ್‌ಬಸ್ಟರ್ ತಮಿಳು ವೆಬ್ ಸೀರೀಸ್ ರೆಸಾರ್ಟ್ ಸಕ್ಸಸ್ ಹಿಂದೆ ಗಿರಿ ದ್ವಾರಕೀಶ್ ಪಾತ್ರ ಕೂಡ ಸಾಕಷ್ಟಿದೆ ಅನ್ನೋದು ಕನ್ನಡಿಗರಾದ ನಾವೆಲ್ಲಾ ಹೆಮ್ಮೆ ಪಡುವ ವಿಷಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





