ಬೆಂಗಳೂರು, ಜುಲೈ 30: ಭಾರತೀಯ ಸಿನಿರಂಗದ ಅತ್ಯಂತ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ ಚಿತ್ರದ ಮೊದಲ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಅವರ ಕನಸಿನ ಮಹಾಕಾವ್ಯಕ್ಕೆ ಸಿನಿಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದರು. ಗುರುವಾರ ಬೆಳಿಗ್ಗೆ 4.15ರ ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆಯಾದ ನಾಲ್ಕು ನಿಮಿಷ ಒಂಬತ್ತು ಸೆಕೆಂಡುಗಳ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಪ್ರತಿಯೊಬ್ಬರ ಪಾತ್ರಕ್ಕೂ ಅದ್ಭುತ ದೃಶ್ಯ ವೈಭವ ನೀಡಲಾಗಿದ್ದು, ವಿಶೇಷವಾಗಿ ಯಶ್ ಅವರ ರಾವಣ ಅವತಾರಕ್ಕೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ಗಳಿಸಿದೆ.
ಟ್ರೈಲರ್ ಆರಂಭದಲ್ಲೇ ರಾವಣನ ಪ್ರವೇಶ ಭರ್ಜರಿಯಾಗಿ ಮೂಡಿಬರುತ್ತದೆ. ತಲೆಯನ್ನು ಮುಚ್ಚಿಕೊಂಡು ಅರಮನೆಯೊಳಗೆ ನಡೆದುಬರುವ ರಾವಣನನ್ನು “ನಿಮ್ಮ ಹೊಸ ರಾಜ” ಎಂದು ಪರಿಚಯಿಸುವ ದೃಶ್ಯ ಕುತೂಹಲ ಮೂಡಿಸುತ್ತದೆ. ಬಳಿಕ “ದೇವಲೋಕ, ಭೂಲೋಕ, ಪಾತಾಳಲೋಕ ಮೂರು ಲೋಕಗಳಿಗೂ ಒಬ್ಬನೇ ರಾಜ” ಎಂಬ ಸಂಭಾಷಣೆಯೊಂದಿಗೆ ಯಶ್ ಅವರ ಆರ್ಭಟದ ಅಭಿನಯ ಟ್ರೈಲರ್‌ನ ಅದ್ಭುತ ದೃಶ್ಯವಾಗಿದೆ. ಲಂಕೆಯ ಅದ್ಧೂರಿ ಅರಮನೆ, ಪುಷ್ಪಕ ವಿಮಾನ ಮತ್ತು ಭವ್ಯ ದೃಶ್ಯಗಳು ಚಿತ್ರದ ಗ್ರ್ಯಾಂಡ್ ಮೇಕಿಂಗ್‌ಗೆ ಸಾಕ್ಷಿಯಾಗಿವೆ.
ಇದಾದ ಬಳಿಕ ಕಥೆ ಶ್ರೀರಾಮನತ್ತ ಸಾಗುತ್ತದೆ. ಲೋಕದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮವನ್ನು ಕಾಪಾಡಲು ವಿಷ್ಣುವಿನ ಅವತಾರವಾಗಿ ರಾಮ ಜನ್ಮ ತಾಳುವ ಕಥೆಯನ್ನು ಟ್ರೈಲರ್ ಪರಿಚಯಿಸುತ್ತದೆ. ರಣಬೀರ್ ಕಪೂರ್ ಅವರ ಶ್ರೀರಾಮನ ಪಾತ್ರ ಶಾಂತ, ಗಂಭೀರ ಹಾಗೂ ಧರ್ಮನಿಷ್ಠ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಕುದುರೆಯ ಮೇಲೆ ಸವಾರಿ ಮಾಡುವ ದೃಶ್ಯಗಳು, ತಂದೆ ದಶರಥ ಹಾಗೂ ತಾಯಿ ಕೈಕೇಯಿಯೊಂದಿಗೆ ಇರುವ ಭಾವನಾತ್ಮಕ ಕ್ಷಣಗಳು ಗಮನ ಸೆಳೆಯುತ್ತವೆ.
ಸಾಯಿ ಪಲ್ಲವಿ ಸೀತೆಯಾಗಿ ತಮ್ಮ ಸಹಜ ಅಭಿನಯದಿಂದ ಮುದ ನೀಡುತ್ತಾರೆ. ರಾಮ-ಸೀತೆಯ ವಿವಾಹ, ನಂತರ ಕೈಕೇಯಿಯ ನಿರ್ಧಾರದಿಂದ ರಾಮ, ಸೀತೆ ಮತ್ತು ಲಕ್ಷ್ಮಣ ವನವಾಸಕ್ಕೆ ತೆರಳುವ ದೃಶ್ಯಗಳು ಭಾವನಾತ್ಮಕವಾಗಿ ಮೂಡಿಬಂದಿವೆ. ಲಕ್ಷ್ಮಣನಾಗಿ ರವಿ ದುಬೆ, ದಶರಥನಾಗಿ ಅರುಣ್ ಗೋವಿಲ್ ಹಾಗೂ ಕೈಕೇಯಿಯಾಗಿ ಲಾರಾ ದತ್ತಾ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಟ್ರೈಲರ್‌ನಲ್ಲಿ ಶೂರ್ಪಣಖಿಯಾಗಿ ರಾಕುಲ್ ಪ್ರೀತ್ ಸಿಂಗ್ ಅವರ ಪಾತ್ರಕ್ಕೂ ಮಹತ್ವ ನೀಡಲಾಗಿದೆ. ರಾಮನನ್ನು ಆಕರ್ಷಿಸಲು ಯತ್ನಿಸುವ ಶೂರ್ಪಣಖಿ, ನಂತರ ಲಕ್ಷ್ಮಣನಿಂದ ಮೂಗು ಕತ್ತರಿಸಿಕೊಳ್ಳುವ ದೃಶ್ಯಗಳು ಕಥೆಯ ಪ್ರಮುಖ ತಿರುವುಗಳನ್ನು ಪರಿಚಯಿಸುತ್ತವೆ. ಹನುಮಂತನ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್ ಅವರ ಸಂಪೂರ್ಣ ನೋಟವನ್ನು ಟ್ರೈಲರ್‌ನಲ್ಲಿ ತೋರಿಸದಿದ್ದರೂ, ಅವರ ಪಾತ್ರದ ಬಗ್ಗೆ ಕುತೂಹಲವನ್ನು ಉಳಿಸಿಕೊಳ್ಳಲಾಗಿದೆ.
ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಅವರ ಸಂಗೀತ ಟ್ರೈಲರ್‌ಗೆ ಭವ್ಯತೆಯ ಸ್ಪರ್ಶ ನೀಡಿದೆ. ಅದೇ ರೀತಿ, ಹಲವು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ DNEG ಸಂಸ್ಥೆಯ VFX ಕೆಲಸ ದೃಶ್ಯಗಳನ್ನು ಮತ್ತಷ್ಟು ಅದ್ಭುತಗೊಳಿಸಿದೆ.
ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ನಿರ್ಮಿಸಿದ್ದು, ಯಶ್ ಸಹ-ನಿರ್ಮಾಪಕರಾಗಿದ್ದಾರೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಮಹಾಕಾವ್ಯದ ಮೊದಲ ಭಾಗ ನವೆಂಬರ್ 5ರಂದು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.





