ಪ್ರೊಡ್ಯೂಸರ್ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಸ್ ಬ್ಯಾಕ್. ಯೆಸ್.. ಸಾಲು ಸಾಲು ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ ಈ ಅನ್ನದಾತ ಇದೀಗ ಬಣ್ಣದಲೋಕದಲ್ಲಿ ಹೊಚ್ಚ ಹೊಸ ಇನ್ನಿಂಗ್ಸ್ ಕಟ್ಟಲು ಮುಂದಾಗಿದ್ದಾರೆ. ವಿಜಯನಗರ ಸಾಮ್ರಾಜ್ಯದ ಗತವೈಭವವನ್ನ ಇಂದಿನ ಪೀಳಿಗೆಗೆ ಸಾರುವ ನಿಟ್ಟಿನಲ್ಲಿ, ತಾವೇ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಅಡ್ವಾನ್ಸ್ಡ್ ಟೆಕ್ನಾಲಜಿಯನ್ನ ಬಳಸಿ, ಹಂಪಿ ಸಾಮ್ರಾಜ್ಯವನ್ನ ರೀ-ಕ್ರಿಯೇಟ್ ಮಾಡಿ ಬೆಳ್ಳಿತೆರೆಗೆ ತರ್ತಿದ್ದಾರೆ.
ಅನ್ನದಾತ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಸ್ ಬ್ಯಾಕ್..!
2 ಯುಗ.. 2 ಕಾಲಘಟ್ಟದಲ್ಲಿ ‘ವಿಜಯನಗರ ಸಾಮ್ರಾಜ್ಯ’
ಅನ್‌ರಿಯಲ್ ಇಂಜಿನ್ ಟಚ್.. ವರ್ಚುವಲ್ ಪ್ರೊಡಕ್ಷನ್
ಚಿತ್ರಕ್ಕೆ ದುಬೈ ಮತ್ತು ಮುಂಬೈ ಮೂಲದ ತಂತ್ರಜ್ಞರ ಕೈಚಳಕ
ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನ ರಾಶಿ ರಾಶಿಯಾಗಿ ಮಾರಾಟ ಮಾಡುತ್ತಿದ್ದ ಏಕೈಕ ಸಾಮ್ರಾಜ್ಯ ಅಂದ್ರೆ ಅದು ವಿಜಯನಗರ ಸಾಮ್ರಾಜ್ಯ. ದಕ್ಷಿಣ ಭಾರತದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ ಸಾಮ್ರಾಜ್ಯವಿದು. ಕ್ರಿಸ್ತಶಕ 1336ರಲ್ಲಿ ಹರಿಹರ & ಬುಕ್ಕ.. ಅಂದ್ರೆ ಹಕ್ಕ-ಬುಕ್ಕ ಸಹೋದರರು ತುಂಗಭದ್ರಾ ನದಿಯ ದಂಡೆಯಲ್ಲಿ ಈ ವಿಜಯನಗರ ಸಾಮ್ರಾಜ್ಯವನ್ನ ಕಟ್ಟಿದ್ರು. ಅದರ ರಾಜಧಾನಿ ಹಂಪಿಯಾಗಿತ್ತು.
ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಅದೊಂಥರಾ ಸ್ವರ್ಣಯುಗವಾಗಿತ್ತು. ಕಲೆ, ಸಾಹಿತ್ಯ, ವಾಸ್ತುಶಿಲ್ಪ ಹಾಗೂ ಮಂಟಪಗಳ ನಿರ್ಮಾಣಕ್ಕೆ ಹೆಚ್ಚು ಪ್ರಶಾಸ್ತ್ಯ ನೀಡಲಾಗಿತ್ತು. ಹಂಪಿಯ ವಿರೂಪಾಕ್ಷ ಹಾಗೂ ವಿಜಯ ವಿಠಲ ಆಲಯಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಅಂತ ಗುರ್ತಿಸಿರುವುದಕ್ಕೆ ನಿದರ್ಶನವಾಗಿವೆ. ಅಂದಹಾಗೆ ನಟಸಾರ್ವಭೌಮ ಡಾ. ರಾಜ್‌ಕುಮಾರ್ ನಟನೆಯ ಶ್ರೀಕೃಷ್ಣ ದೇವರಾಯ ಸಿನಿಮಾ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನ ಸಾರಿತ್ತು. 1970ರಲ್ಲಿ ತೆರೆಕಂಡ ಆ ಚಿತ್ರ ಅಣ್ಣಾವ್ರ ಮೊದಲ ಕನ್ನಡ ಸಿನಿಮಾ ಕೂಡ ಆಗಿತ್ತು. ಅದಕ್ಕೂ ಮುನ್ನ ಆರ್ ನಾಗೇಂದ್ರ ರಾವ್ ನಿರ್ದೇಶನದಲ್ಲಿ ಆರ್ ಎನ್ ಸುದರ್ಶನ್ ಹಾಗೂ ಬಿ ಸರೋಜಾದೇವಿ ಲೀಡ್‌ನಲ್ಲಿ ವಿಜಯನಗರದ ವೀರಪುತ್ರ ಸಿನಿಮಾ ತಯಾರಾಗಿತ್ತು. ಇದೀಗ ಮೂರನೇ ಮಹತ್ವದ ಪ್ರಯತ್ನ ಅಂದ್ರೆ ಅದು ಪುಷ್ಕರ್ ಮಲ್ಲಿಕಾರ್ಜುನಯ್ಯರದ್ದು.
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಅವತಾರ ಪುರುಷ ಸೇರಿದಂತೆ ಸಾಕಷ್ಟು ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ತಮ್ಮ ಕರಿಯರ್‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅದಕ್ಕೆ ಬೇಕಾದ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ ಅವರು, ಇದೀಗ ಶೇಕಡಾ 50ರಷ್ಟು ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರಂತೆ. ಇಂಟರೆಸ್ಟಿಂಗ್ ಅಂದ್ರೆ ವಿಜಯನಗರ ಸಾಮ್ರಾಜ್ಯದ ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನ ಅವ್ರೇ ಬರೆದು, ಲೀಡ್‌ನಲ್ಲಿ ನಟಿಸುವುದರ ಜೊತೆ ನಿರ್ದೇಶನದ ಜವಾಬ್ದಾರಿ ಕೂಡ ನಿರ್ವಹಿಸುತ್ತಿದ್ದಾರೆ. ಫ್ಲೋ…
ಬಣ್ಣ ಹಚ್ಚಿದ ಚೊಚ್ಚಲ ಚಿತ್ರದಲ್ಲೇ ಬೃಹತ್ ವೆಚ್ಚದ, ಕರುನಾಡ ಮಹಿಮೆ ಸಾರುವ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ತೆರೆಯ ಮೇಲೆ ಕಟ್ಟಿ ಕೊಡಲು ಮುಂದಾಗಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ. ಎರಡು ಯುಗಗಳಲ್ಲಿ ನಡೆಯುವ ಕಥೆ ಇದಾಗಿದ್ದು, ಎರಡು ಕಾಲಘಟ್ಟದ ಅಸ್ಮಿತೆಯನ್ನು ತೆರೆದಿಡುವ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದಾರೆ. ಹಂಪಿಯ ಸುತ್ತಮುತ್ತಲು ಬೃಹತ್ ಸೆಟ್‌ಗಳನ್ನ ನಿರ್ಮಿಸಿ ಚಿತ್ರೀಕರಿಸಲಾಗುತ್ತಿದೆ. ಹೀಗಾಗಿ ಈ ಸಿನಿಮಾಕ್ಕೆ ವಿಜಯನಗರ ಸಾಮ್ರಾಜ್ಯ ಎಂದೇ ಹೆಸರಿಡಲಾಗಿದೆ.
ರಾಜಮೌಳಿ ವಾರಣಾಸಿಗೆ ಬಳಸಿದ ಅಡ್ವಾನ್ಸ್ಡ್ ಟೆಕ್ನಾಲಜಿ
10 ವರ್ಷದ ಸಿನಿರಂಗದ ಅನುಭವಕ್ಕೆ ಇದು ಮುನ್ನುಡಿ..!
ಹಕ್ಕ-ಬುಕ್ಕರು ಕಟ್ಟಿದ ಈ ಸಾಮ್ರಾಜ್ಯ.. 1565ರ ತಾಳಿಕೋಟೆ ಕದನದಲ್ಲಿ ಪಥನವಾಗುವವರೆಗೂ ಸುಮಾರು 250 ವರ್ಷಗಳ ಕಾಲ ನಡೆದ ಕೆಲವು ಮಹತ್ತರ ಘಟನೆಗಳ ಕಥಾನಕ ಹೊಂದಿರಲಿದೆ. ಅಂದಹಾಗೆ ಈ ಚಿತ್ರವನ್ನು ವರ್ಚುವಲ್ ಪ್ರೊಡಕ್ಷನ್ ಮೂಲಕ ಚಿತ್ರಿಸಲಾಗುತ್ತಿದೆ. ಅಂದ್ರೆ ಅನ್‌ರಿಯಲ್ ಇಂಜಿನ್ ತಂತ್ರಜ್ಞಾನ ಬಳಸಿಕೊಂಡು ಸೆರೆಹಿಡಿಯಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಈ ಅಡ್ವಾನ್ಸ್ಡ್ ಟೆಕ್ನಾಲಜಿಯನ್ನ ಬಳಸಿದ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಇದು ಪಾತ್ರವಾಗ್ತಿದೆ. ದುಬೈ ಹಾಗೂ ಮುಂಬೈ ಮೂಲದ ತಂತ್ರಜ್ಞರ ಕೈಚಳಕ ಚಿತ್ರಕ್ಕಿದ್ದು, ಔಟ್‌ಪುಟ್ ಮಾತ್ರ ರಾಜಮೌಳಿಯ ಬಾಹುಬಲಿಯಷ್ಟೇ ವೈಭವೋಪೇತವಾಗಿರಲಿದೆ. ಇಂಟರೆಸ್ಟಿಂಗ್ ಅಂದ್ರೆ ಮೌಳಿ ಸದ್ಯ ತಮ್ಮ ವಾರಣಾಸಿ ಚಿತ್ರಕ್ಕೂ ಇದೇ ಅನ್‌ರಿಯಲ್ ಇಂಜಿನ್ ಟೆಕ್ನಾಲಜಿ ಬಳಸ್ತಿದ್ದಾರೆ.
ಕಲಾವಿದರು, ತಂತ್ರಜ್ಞರು ಯಾರೆಲ್ಲಾ ಕೆಲಸ ಮಾಡ್ತಿದ್ದಾರೆ..? ಎಷ್ಟು ಬಜೆಟ್‌ನಲ್ಲಿ ವಿಜಯನಗರ ಸಾಮ್ರಾಜ್ಯ ದೃಶ್ಯರೂಪ ಪಡೆಯುತ್ತಿದೆ..? ಎಷ್ಟು ಭಾಗಗಳಲ್ಲಿ ಸಿನಿಮಾ ಬರ್ತಿದೆ..? ಸಿನಿಮಾಗಾಗಿ ಪುಷ್ಕರ್ ಮಾಡಿದ ಕಸರತ್ತು ಎಂಥದ್ದು..? ಹೀಗೆ ಹತ್ತಾರು ಪ್ರಶ್ನೆಗಳಿಗೆ ಸದ್ಯದಲ್ಲೇ ಜಗಮಗಿಸೋ ಟೀಸರ್ ಲಾಂಚ್ ಇವೆಂಟ್ ಮೂಲಕ ಉತ್ತರ ನೀಡಲಿದ್ದಾರೆ ಪುಷ್ಕರ್. ಫಾರಿನ್‌ನಲ್ಲಿ ಓದಿಕೊಂಡು ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪುಷ್ಕರ್, ಎಲ್ಲಾ ತೊರೆದು ಬಣ್ಣದಲೋಕಕ್ಕೆ ಕಾಲಿಟ್ಟಿದ್ರು. ಗೋಧಿಬಣ್ಣದಿಂದ ಅವ್ರ ಸಿನಿಕರಿಯರ್ ಶುರು ಆಗಿ ದಶಕ ಕಳೆಯುತ್ತಿದೆ. ಆ ಹತ್ತೂ ವರ್ಷದ ಅನುಭವಗಳನ್ನ ಈ ವಿಜಯನಗರ ಚಿತ್ರದ ಮೇಲೆ ಹಾಕಿ, ತನ್ನದೇ ಹೊಸ ಸಾಮ್ರಾಜ್ಯ ಕಟ್ಟುವ ಪ್ರಾಮಾಣಿಕ ಪ್ರಯತ್ನ ಅವರದ್ದಾಗಿದೆ.





