ಪವನ್ ಕಲ್ಯಾಣ್ ಡಿಸಿಎಂ ಆದ್ರು.. ನಾಗಬಾಬು ಎಂಎಲ್‌ಸಿ ಆದ್ರು. ಇಡೀ ಮೆಗಾಸ್ಟಾರ್ ಫ್ಯಾಮಿಲಿ ಸಂತೋಷದ ಅಲೆಯಲ್ಲಿ ತೇಲಾಡ್ತಿತ್ತು. ಆದ್ರೀಗ ವಿಧಿ ಆ ಸಂತಸಕ್ಕೆ ಬ್ರೇಕ್ ಹಾಕಿ, ಬಿಗ್ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಪವನ್ ಕಲ್ಯಾಣ್ ಕಿರಿಮಗ ಶಾಲೆಯಲ್ಲಿ ನಡೆದ ಫೈಯರ್ ಆ್ಯಕ್ಸಿಡೆಂಟ್‌ನಿಂದ ಆಸ್ಪತ್ರೆ ಪಾಲಾಗಿದ್ದಾರೆ.
ಆಂಧ್ರ ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ್ ಲೈಫು ಹೀಗಾಗುತ್ತೆ ಅಂತ ಯಾರೂ ಯೋಚನೆ ಊಹಿಸಿರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ತನಗೆ ಡಿಸಿಎಂ ಪದವಿ, ಅಣ್ಣನಿಗೆ ಎಂಎಲ್‌ಸಿ ಹುದ್ದೆ ಎಲ್ಲವೂ ಇತ್ತು. ಆದ್ರೆ ಆ ಒಂದು ಬೆಂಕಿ ಅವಘಡ, ಇಡೀ ಮೆಗಾಸ್ಟಾರ್ ಚಿರಂಜೀವಿ ಫ್ಯಾಮಿಲಿಯನ್ನೇ ಗಡಿಬಿಡಿಗೊಳಿಸಿಬಿಟ್ಟಿತು.
ಹೌದು.. ನಿನ್ನೆ ಸಿಂಗಾಪುರದ ಶಾಲೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶಾಲೆಯ ಪಕ್ಕದಲ್ಲಿದ್ದ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅಂಟಿದೆ. ಅದು ಶಾಲೆಗೂ ಹಬ್ಬಿ, ಅಲ್ಲಿ ಸಮ್ಮರ್ ಕ್ಯಾಂಪ್‌ನಲ್ಲಿದ್ದ 30 ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಒಂದಷ್ಟು ಮಂದಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಉಳಿದಂತೆ ಎಲ್ಲಾ ವಿದ್ಯಾರ್ಥಿಗಳನ್ನ ರೆಸ್ಕ್ಯೂ ಮಾಡಲಾಗಿದೆ. ಮಕ್ಕಳು ಬೆಂಕಿಯ ಹೊಗೆ ಸೇವಿಸಿ, ಶ್ವಾಸಕೋಶಗಳು ಕೂಡ ಆ ಹೊಗೆಯಿಂದ ತುಂಬಿ ಹೋಗಿವೆ. ಅದರಲ್ಲಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮೂರನೇ ಪತ್ನಿ ಆ್ಯನಾ ಲೆಝ್ನೇವಾ ಕಿರಿಯ ಪುತ್ರ ಕೂಡ ಸಿಲುಕಿಕೊಂಡಿದ್ದಾನೆ.
ಪವನ್ ಕಲ್ಯಾಣ್ ಹಾಗೂ ಆ್ಯನಾ ಲೆಝ್ನೇವಾ ಮಗ ಮಾರ್ಕ್ ಶಂಕರ್ ಶ್ವಾಸಕೋಶಗಳು ವಿಷಪೂರಿತ ಹೊಗೆಯಿಂದ ಕೂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಕೈ ಕಾಲುಗಳು ಬೆಂಕಿಯಿಂದ ಸುಟ್ಟು ಗಾಯಗಳಾಗಿವೆ. ಚಿಕಿತ್ಸೆ ಭರದಿಂದ ಸಾಗುತ್ತಿದ್ದು, ಸದ್ಯ ಆ ಶಾಕ್‌ನಿಂದ ಹೊರಬರಲಾಗದೆ ಒದ್ದಾಡ್ತಿದ್ದಾರೆ ಪವನ್ ಪತ್ನಿ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಇಡೀ ಮೆಗಾ ಫ್ಯಾಮಿಲಿ ದಿಗ್ಭ್ರಾಂತಗೊಂಡಿದೆ. ಎಲ್ಲಾ ಕೆಲಸ ಕಾರ್ಯಗಳಿಗೆ ಬ್ರೇಕ್ ಹಾಕಿ ಡಿಸಿಎಂ ಪವನ್ ಸಿಂಗಾಪುರ್ ಫ್ಲೈಟ್ ಏರಿದ್ರೆ, ವಿಷಯ ತಿಳಿದ ಅಣ್ಣ ಚಿರಂಜೀವಿ ಹಾಗೂ ಅತ್ತಿಗೆ ಸುರೇಖಾ ಅವರು ಕೂಡ ಪವನ್‌ಗೆ ಧೈರ್ಯ ತುಂಬುವ ಮೂಲಕ ಅವರೂ ಸಿಂಗಾಪುರ್‌ಗೆ ತೆರಳಿದ್ದಾರೆ.
ಕಳೆದ ವರ್ಷ ಪದ್ಮ ವಿಭೂಷಣ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೆ ಬ್ಯಾಕ್ ಟು ಬ್ಯಾಕ್ ಸಂತಸದ ಕ್ಷಣಗಳು ಅಲೆಗಳಂತೆ ಅಪ್ಪಳಿಸಿದ್ದವು. ಪವನ್ ಕಲ್ಯಾಣ್ ಡಿಸಿಎಂ ಆದ್ರು. ರಾಮ್ ಚರಣ್ ತೇಜಾ ತ್ರಿಬಲ್ ಆರ್ ಮೂಲಕ ಗ್ಲೋಬಲ್ ಸ್ಟಾರ್ ಆದ್ರು. ನಾಗಬಾಬು ಮಗ ವರುಣ್ ತೇಜ್‌ಗೆ ಮದ್ವೆ ಆಯ್ತು. ರಾಮ್ ಚರಣ್‌ಗೆ ಮಗಳು ಹುಟ್ಟಿದ್ಲು. ಅಲ್ಲು ಅರ್ಜುನ್ ಐಕಾನ್ ಸ್ಟಾರ್ ಆಗಿ, ಪುಷ್ಪ-2ನಿಂದ ನ್ಯಾಷನಲ್ ಸ್ಟಾರ್ ಆದ್ರು. ಎಲ್ಲಕ್ಕಿಂತ ಮಿಗಿಲಾಗಿ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಅಂದ್ರೆ MLC ಆದ್ರು ಚಿರು ಸಹೋದರ ನಾಗಬಾಬು.
ಇಷ್ಟೆಲ್ಲಾ ಖುಷಿಗಳ ನಡುವೆ ಪವನ್ ಕಲ್ಯಾಣ್ ಕಿರಿಯ ಮಗ ಮಾರ್ಕ್ ಶಂಕರ್‌ಗೆ ಹೀಗಾಗಿರೋದು ಬರೀ ಚಿರು ಕುಟುಂಬಕ್ಕಷ್ಟೇ ಅಲ್ಲ, ಅವ್ರ ಅಪಾರ ಅಭಿಮಾನಿ ಬಳಗಕ್ಕೂ ಆಘಾತ ತಂದಿದೆ. ಆತಂಕದಲ್ಲಿರೋ ಚಿರು ಫ್ಯಾಮಿಲಿಗೆ ಪ್ರಧಾನಿ ಮೋದಿ ಧೈರ್ಯ ತುಂಬಿದ್ದು, ಅಲ್ಲಿರೋ ಇಂಡಿಯನ್ ಹೈ ಕಮಿಷನರ್ ಜೊತೆ ಕೂಡ ಮಾತುಕತೆ ನಡೆಸಿದ್ದಾರಂತೆ ಮೋದಿ. ಆದಷ್ಟು ಬೇಗ ಮಾರ್ಕ್ ಚೇತರಿಸಕೊಳ್ಳಲಿ ಅನ್ನೋದು ಎಲ್ಲರ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್