ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಏಪ್ರಿಲ್ 19ರಂದು ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ಈ ಹಿನ್ನೆಲೆ ಆಂಧ್ರದ ಅರಾಕು ಮತ್ತು ದುಂಬ್ರಿಗುಡ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಹಲವಾರು ಕುಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯ ಜನರ ಬದುಕಿನ ಬಗ್ಗೆ ಮಾಹಿತಿ ಪಡೆದರು. ವಿಶೇಷವಾಗಿ ಪೆಡಪಾಡು ಎಂಬ ಅತೀ ಹಿಂದುಳಿದ ಗ್ರಾಮದಲ್ಲಿ ಭೇಟಿ ನೀಡಿದಾಗ ಗ್ರಾಮದವರು ಬರಿಗಾಲಲ್ಲೇ ಓಡಾಡುತ್ತಿರುವುದನ್ನು ಪವನ್ ಕಲ್ಯಾಣ್ ಗಮನಿಸಿದ್ದಾರೆ. ತಕ್ಷವೇ ಸಿಬ್ಬಂದಿಗೆ ಕರೆ ಮಾಡಿ ಗ್ರಾಮಕ್ಕೆ ಚಪ್ಪಲಿ ಕೊಡೊಸಲು ಸೂಚಿಸಿದ್ದಾರೆ.
ಪೆಡಪಾಡು ಗ್ರಾಮವು ತುಂಬಾ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಜೀವನೋಪಾಯದ ಸೌಲಭ್ಯಗಳು ಬಹಳ ಕಡಿಮೆಯಿವೆ. ಈ ಗ್ರಾಮದಲ್ಲಿ ಹೆಚ್ಚಿನವರು ಬರಿಗಾಲಲ್ಲೇ ಓಡಾಡುತ್ತಿದ್ದಾರೆ ಎಂಬುದನ್ನು ಪವನ್ ಕಲ್ಯಾಣ್ ಸ್ಥಳದಲ್ಲಿಯೇ ಕಂಡು ಮರುಗಿದರು. ಗ್ರಾಮದಲ್ಲಿ ಹಿರಿಯ ಮಹಿಳೆಯರೊಬ್ಬರಾದ ಪಂಗಿ ಮಿತ್ತು ಅವರು ಬರಿಗಾಲಲ್ಲಿ ನಡೆದುಕೊಳ್ಳುತ್ತಿರುವ ದೃಶ್ಯ ಪವನ್ ಅವರು ಗಮನಿಸಿದ್ದಾರೆ.
ಇದನ್ನು ಕಂಡ ತಕ್ಷಣವೇ ಅವರು ತಮ್ಮ ಸಿಬ್ಬಂದಿಗೆ ಕರೆಮಾಡಿ, ಈ ಗ್ರಾಮದಲ್ಲಿರುವ ಎಲ್ಲ ಜನರಿಗೆ ಹೊಸ ಚಪ್ಪಲಿ ಪೂರೈಸಲು ಸೂಚಿಸಿದರು. ಗ್ರಾಮದ ಮನೆ ಮನೆಗೆ ಹೋಗಿ, ಪ್ರತಿ ವ್ಯಕ್ತಿಗೆ, ಬಾಲಕರಿಂದ ಹಿಡಿದು ವೃದ್ಧರ ತನಕ, ಹೊಸ ಚಪ್ಪಲಿಗಳನ್ನು ವಿತರಿಸಲು ನೇರ ಆದೇಶ ನೀಡಿದರು.
ಗ್ರಾಮದಲ್ಲಿ 350 ಜನರಿಗೆ ಹೊಸ ಚಪ್ಪಲಿ
ಪವನ್ ಕಲ್ಯಾಣ್ ಈ ವೇಳೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಂದ ದೊರೆತ ಮಾಹಿತಿಯ ಪ್ರಕಾರ, ಪೆಡಪಾಡು ಗ್ರಾಮದಲ್ಲಿ ಸುಮಾರು 350 ಮಂದಿ ನಿವಾಸಿಸುತ್ತಿದ್ದಾರೆ. ಇದನ್ನು ತಿಳಿದ ಅವರು, ತಕ್ಷಣವೇ ಈ 350 ಜನರಿಗೆ ಹೊಸ ಚಪ್ಪಲಿ ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಈ ನಿರ್ಧಾರದಿಂದ ಗ್ರಾಮಸ್ಥರಲ್ಲಿ ಸಂತೋಷದ ಸಾಗರವೇ ಹರಿದಂತಾಯಿತು. “ನಮ್ಮ ಗ್ರಾಮಕ್ಕೆ ಇದುವರೆಗೆ ಯಾವುದೇ ಮುಖ್ಯಸ್ಥರು ಬಂದಿರಲಿಲ್ಲ. ನಮ್ಮ ಸಮಸ್ಯೆಗಳಿಗೆ ಯಾರೂ ಕೇಳಲಿಲ್ಲ. ಆದರೆ ಪವನ್ ಸರ್ ಸ್ವತಃ ಬಂದು ನಮ್ಮ ಬದುಕನ್ನು ನೋಡಿ, ನಮ್ಮ ಮನದಾಳದ ನೋವನ್ನು ಅರಿತು, ಪರಿಹಾರವನ್ನು ಸ್ಥಳದಲ್ಲೇ ಕೊಟ್ಟಿದ್ದಾರೆ,” ಎಂದು ಗ್ರಾಮಸ್ಥರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪವನ್ ಕಲ್ಯಾಣ್ ನ್ನು ಹೊಗಳಿದ ಗ್ರಾಮಸ್ಥರು
“ಪವನ್ ಕಲ್ಯಾಣ್ ಸರ್ ನಮ್ಮ ಪುಟ್ಟ ಗ್ರಾಮಕ್ಕೆ ಬಂದು ನಮ್ಮ ಬದುಕಿನ ಕಷ್ಟಗಳನ್ನು ನೋಡಿ ತಕ್ಷಣದ ಪರಿಹಾರ ನೀಡಿದ್ದು ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಚಪ್ಪಲಿಯೊಂದಿಗೆ ಇತರ ಮೂಲಭೂತ ಸೌಲಭ್ಯಗಳ ಭರವಸೆಯನ್ನೂ ನೀಡಿದ್ದಾರೆ,” ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಪವನ್ ಕಲ್ಯಾಣ್ ಅವರ ಈ ನಡೆ ಕೇವಲ ಚಪ್ಪಲಿ ವಿತರಣೆಗಷ್ಟೆ ಸೀಮಿತವಾಗಿರದೇ, ಜನರ ನೈಜ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಒಂದು ಪ್ರಮುಖ ಹೆಜ್ಜೆಯಾಗಿ ಪರಿಣಮಿಸಿದೆ.





