ಸಾಮಾನ್ಯವಾಗಿ ಕಳ್ಳರನ್ನ ಪೊಲೀಸರು ಹಿಡಿಯಬೇಕು. ಅದು ಅವರ ಆದ್ಯ ಕರ್ತವ್ಯವೂ ಹೌದು. ಆದ್ರೆ ನಿಜವಾದ ಕಳ್ಳ ಕಾಕರನ್ನ ಹಿಡ್ಕೊಟ್ಟ ವ್ಯಕ್ತಿಯನ್ನೇ ವಿಚಾರಣೆಗೆ ಕರೆಯುತ್ತಾರೆ ಪೊಲೀಸರು. ಇದು ನಿಜಕ್ಕೂ ದೊಡ್ಡ ವಿಪರ್ಯಾಸವೇ ಸರಿ. ಯೆಸ್.. ಅವ್ಯವಹಾರಗಳ ಆಗರ ಆಗಿರೋ ಪರಪ್ಪನ ಅಗ್ರಹಾರ ಅಕ್ರಮಗಳನ್ನ ಬಯಲಿಗಿಟ್ಟ ದರ್ಶನ್ ಆಪ್ತ ಧನ್ವೀರ್ ಗೌಡನ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.
- ಜೈಲಾಧಿಕಾರಿಗಳ ಉತ್ತರ ಪೌರುಷ.. ಧನ್ವೀರ್ ವಿಚಾರಣೆ ಏಕೆ?
- ಜೈಲಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಡಿಯೋ ವೈರಲ್ ಪ್ರಕರಣ..!
- ಕಳ್ಳರನ್ನ ಹಿಡಿದುಕೊಟ್ಟ ಹೀರೋ ಮೇಲೆ ಪೊಲೀಸರ ದರ್ಪ..?
- ಜೈಲಾಧಿಕಾರಿಗಳನ್ನ ಹಿಡಿಯಲಿ CCB.. ತಲೆದಂಡ ಯಾರು..?
ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಸದ್ಯ ಮರ್ಡರ್ ಕೇಸ್‌ವೊಂದರಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೆಲ್ಲಾ ಗೊತ್ತಿರುವ ವಿಷಯವೇ ಆದ್ರೂ, ಇತ್ತೀಚೆಗೆ ಜೈಲಿನ ಅಧಿಕಾರಿಗಳ ಬಳಿ ಹೆಚ್ಚುವರಿ ಬೆಡ್ ಹಾಗೂ ತಲೆದಿಂಬು ನೀಡಲು ದರ್ಶನ್ ಕೋರ್ಟ್ ಮೂಲಕ ಮನವಿ ಮಾಡಿದ್ರು. ನಟ ದರ್ಶನ್‌ಗೆ ಬೆನ್ನು ನೋವು ಇದೆ ಅಂದ್ರೂ ಸಹ ಒಂದು ಹೆಚ್ಚುವರಿ ಬೆಡ್ ನೀಡ್ತಿಲ್ಲ. ಅಷ್ಟೇ ಅಲ್ಲ, ಒಂದೇ ಒಂದು ತಲೆದಿಂಬಿಗಾಗಿ ಕೋರ್ಟ್ ವರೆಗೂ ಹೋಗುವಂತಹ ಪ್ರಮೇಯ ಬಂತು.
ಆದ್ರೆ ಪರಪ್ಪನ ಅಗ್ರಹಾರದಲ್ಲಿರೋ ಜೈಲಾಧಿಕಾರಿಗಳು ಮಾತ್ರ ಅಲ್ಲಿರೋ ಸಾಕಷ್ಟು ಮಂದಿ ಕೈದಿಗಳಿಗೆ ರಾಜಾತಿಥ್ಯ ನೀಡ್ತಿದ್ದಾರೆ. ವಿಕೃತಕಾಮಿ ಉಮೇಶ್ ರೆಡ್ಡಿ, ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ನಲ್ಲಿ ಜೈಲು ಸೇರಿರುವ ಉಗ್ರ ಸೇರಿದಂತೆ ಎಲ್ಲರೂ ರಾಜಾರೋಷವಾಗಿ ಮೊಬೈಲ್ ಬಳಕೆ ಮಾಡ್ತಿದ್ದಾರೆ. ಒಂದಷ್ಟು ಮಂದಿ ಎಣ್ಣೆ ಪಾರ್ಟಿ ಮಾಡಿ, ಪಬ್‌ನಲ್ಲಿ ಕುಣಿದಂತೆ ಕುಣಿಯುತ್ತಿದ್ದಾರೆ. ಕೈದಿಗಳು ನೀಡುವ ಎಂಜಲು ಕಾಸಿಗೆ ಆಸೆ ಬಿದ್ದು, ಜೈಲಾಧಿಕಾರಿಗಳು ಕಾನೂನನ್ನ ಗಾಳಿಗೆ ತೂರಿ, ಈ ರೀತಿ ರಾಜಾತಿಥ್ಯ ನೀಡುವುದು ಎಷ್ಟು ಸರಿ ಅನ್ನೋದನ್ನ ನೀವೇ ಹೇಳಿ.
ಈ ಕುರಿತ ವಿಡಿಯೋಗಳನ್ನ ವೈರಲ್ ಮಾಡಿದ ವ್ಯಕ್ತಿಯನ್ನ ಪೊಲೀಸರು ಹಿಡಿದು ವಿಚಾರಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ..? ಕಳ್ಳ ಕಾಕರಿಗೆ ನೀಡಿರೋ ರಾಜಾತಿಥ್ಯದ ವಿಡಿಯೋಗಳನ್ನ ದರ್ಶನ್ ಆಪ್ತ ನಟ ಧನ್ವೀರ್ ಗೌಡ ವೈರಲ್ ಮಾಡಿದ್ರು ಎನ್ನಲಾಗ್ತಿದೆ. ಒಂದು ವೇಳೆ ಧನ್ವೀರ್ ಮಾಡಿದ್ರೆ ಆತನನ್ನ ಪೊಲೀಸ್ ಇಲಾಖೆ ಪ್ರಶಂಸಿಸಬೇಕೇ ಹೊರತು ಶಿಕ್ಷಿಸಬಾರದು. ಎಂಜಲು ಕಾಸಿಗೆ ತಮ್ಮ ತನ ಬಿಟ್ಟು ಕೆಲಸ ಮಾಡ್ತಿರೋ ಜೈಲಾಧಿಕಾರಿಗಳನ್ನ ಸಸ್ಪೆಂಡ್ ಮಾಡಲಿ, ಅವ್ರ ಮೇಲೆ ಕ್ರಮ ಕೈಕೊಳ್ಳಲಿ ಸಿಸಿಬಿ. ಅದು ಬಿಟ್ಟು, ಕಳ್ಳರನ್ನ ಹಿಡಿದುಕೊಟ್ಟ ರಿಯಲ್ ಹೀರೋ ಮೇಲೆಯೇ ಪೊಲೀಸರ ದರ್ಪ ಎಷ್ಟು ಸರಿ..?!
ತಾಕತ್ತು ಇದ್ರೆ ಸಿಸಿಬಿ ಅವರು ಅಕ್ರಮವಾಗಿ ದುಡ್ಡು ಮಾಡ್ತಿರೋ ಜೈಲು ಅಧಿಕಾರಿಗಳನ್ನ ಹಿಡಿದು, ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ನೀಡಲಿ. ಬೇಕು ಅಂತ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ತಿರೋರ ಮೇಲೆ ಕಾನೂನು ಕ್ರಮ ಜರುಗಿಸಲಿ. ಅದು ಬಿಟ್ಟು ನಟ ಧನ್ವೀರ್‌ರನ್ನ ವಿಚಾರಣೆಗೆ ಕರೆಸಿ, ಗಂಟೆಗಟ್ಟಲೆ ವಿಚಾರಣೆ ನಡೆಸಿ, ನಂತ್ರ ಇಲ್ಲಿಂದ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಅಧಿಕಾರಿಗಳಿಗೆ ಹಸ್ತಾಂತರ ಮಾಡಿ, ಅಲ್ಲಿಯೂ ವಿಚಾರಣೆ ನಡೆಸುವಂತಹ ಅಗತ್ಯತೆಯಾದ್ರೂ ಏನಿದೆ..?
ಜೈಲಾಧಿಕಾರಿಗಳು ಆಡುವ ಎಲ್ಲಾ ಆಟಗಳನ್ನ ನೋಡ್ತಾ ಕಿವಿ, ಕಣ್ಣು ಹಾಗೂ ಬಾಯಿ ಮುಚ್ಕೊಂಡು ಸುಮ್ಮನಿದ್ದುಬಿಡಬೇಕಾ..? ಇಲ್ಲ ಅಂದ್ರೆ ಈ ರೀತಿ ವಿಚಾರಣೆಗೆ ಕರೆಸಿ ಹೆದರಿಸೋದು ಒಂದು ಮಾರ್ಗನಾ..? ಈ ಬಗ್ಗೆ ಕೂಡಲೇ ಹೋಮ್ ಮಿನಿಸ್ಟರ್ ಗಮನ ಹರಿಸಬೇಕು. ಇದನ್ನ ಸೀರಿಯಸ್ ಅಗಿ ಪರಿಗಣಿಸಿ, ಕಳ್ಳರನ್ನ ಹಿಡಿದುಕೊಟ್ಟವರಿಗೆ ಸನ್ಮಾನಿಸಬೇಕು. ಜೊತೆಗೆ ಜೈಲಾಧಿಕಾರಿಗಳು ಯಾರಿದ್ದಾರೋ ಅವ್ರನ್ನ ಸಸ್ಪೆಂಡ್ ಮಾಡುವ ಕಾರ್ಯ ತುರ್ತಾಗಿ ಆಗಬೇಕಿದೆ. ಇಲ್ಲವಾದಲ್ಲಿ ಪೊಲೀಸ್ ಹಾಗೂ ಗೃಹ ಇಲಾಖೆಯ ಘನತೆ, ಗೌರವಕ್ಕೆ ಚ್ಯುತಿ ಬರೋದು ಗ್ಯಾರಂಟಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





