ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿ ‘ಮಂತ್ರಾಲಯ’ದೊಳಗೆ ಚಿತ್ರೀಕರಣ ಮಾಡಿದೆ. ಹಾಗೂ ಪ್ರಪ್ರಥಮ ಬಾರಿಗೆ ಮಂತ್ರಾಲಯ ಮಠದ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಸೀರಿಯಲ್ ನಲ್ಲಿ ತಾವೇ ಹರಸಿ ಆಶೀರ್ವದಿಸಿದ್ದಾರೆ.
ಹೌದು, ಇದುವರೆಗೆ ಯಾವುದೇ ಮನರಂಜನಾ ವಾಹಿನಿಯಲ್ಲಿ ಮಂತ್ರಾಲಯವನ್ನು ಸಂಪೂರ್ಣವಾಗಿ ತೋರಿಸಿರಲಿಲ್ಲ. ಆದರೆ ಕಲರ್ಸ್ ಕನ್ನಡ ವಾಹಿನಿ ‘ನೂರು ಜನ್ಮಕೂ’ ಚಿತ್ರೀಕರಣವನ್ನು ಮಂತ್ರಾಲಯದಲ್ಲಿ ಮಾಡಿ, ಪ್ರೇಕ್ಷಕರಿಗೆ ಮಂತ್ರಾಲಯದ ದರ್ಶನವನ್ನು ಮಾಡಿಸಲಿದೆ.
‘ನೂರು ಜನ್ಮಕೂ’ ಧಾರಾವಾಹಿ ಕಥಾನಾಯಕಿ ಮೈತ್ರಿಯ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ತುಂಬಿದೆ. ಅವಳ ತಂದೆ ತಾಯಿ – ರಮೇಶ್ -ರಾಣಿ ಇದಕ್ಕೆಲ್ಲಾ ಏನು ಕಾರಣ ಎಂದು ಯೋಚಿಸುತ್ತ ಕೂತಾಗ ಅವರಿಗೆ ಮೈತ್ರಿ ಹುಟ್ಟುವ ಮುನ್ನ ತಾವು ಹೊತ್ತ ಹರಕೆ ನೆನಪಾಗುತ್ತದೆ. ಆ ಕಾರಣಕ್ಕೆ ಮೈತ್ರಿಗೆ ಕೆಟ್ಟದ್ದು ಆಗ್ತಿರಬಹುದು ಅಂತ ನಿರ್ಧರಿಸಿ ಮಂತ್ರಾಲಯಕ್ಕೆ ಮಗಳು ಹಾಗೂ ಅಳಿಯ ಚಿರಂಜೀವಿಯನ್ನು ಕರೆದುಕೊಂಡು ಹೋಗುವ ನಿರ್ಧಾರ ಮಾಡುತ್ತಾರೆ.
ಹರಕೆಯ ಕಾರಣಕ್ಕೆ ಮಂತ್ರಾಲಯಕ್ಕೆ ಭೇಟಿ ನೀಡುವ ಮೈತ್ರಿಗೂ ಹಾಗೂ ಮಂತ್ರಾಲಯಕ್ಕೂ ಇರುವ ಆ ಜನ್ಮ ಸಂಬಂಧ ಇಲ್ಲಿ ಬಯಲಾಗುತ್ತದೆ. ಮೈತ್ರಿ ಮಂತ್ರಾಲಯದಲ್ಲಿ ಹೆಜ್ಜೆ ಇಡುತ್ತಿದ್ದ ಹಾಗೆ ಅಲ್ಲಿದ್ದ ಸಾಧು ಒಬ್ಬರಿಗೆ ಮೈತ್ರಿ ಬಂದಳು ಅನ್ನೋ ಸೂಚನೆ ಸಿಗುತ್ತೆ. ಮೈತ್ರಿಗೂ ಮಂತ್ರಾಲಯಕ್ಕೂ ಒಂದು ‘ಪೂರ್ವ ಜನ್ಮದ ಸಂಬಂಧ’ ಇರುವ ಹಾಗೆ ಕಥೆ ಸಾಗುತ್ತದೆ. ನಂತರ ಗುರುರಾಯರ ಪವಾಡಗಳು ನಡೆಯುತ್ತಾ ಹೋಗಿ, ಮೈತ್ರಿ ಮತ್ತು ಚಿರಂಜೀವಿಯ ಬದುಕಿನಲ್ಲಿ ಏನೆಲ್ಲಾ ಬದಲಾವಣೆ ಆಗ್ತಾವೆ ಅನ್ನೋದನ್ನ ಸೀರಿಯಲ್ ನಲ್ಲಿ ತೋರಿಸಲಾಗಿದೆ.
ಸೀರಿಯಲ್ ಚಿತ್ರೀಕರಣದ ಸಂದರ್ಭದಲ್ಲಿ ಮಂತ್ರಾಲಯದ ಸ್ವಾಮೀಜಿ ಸುಬುಧೇಂದ್ರ ತೀರ್ಥರು ಚಿರಂಜೀವಿ ಹಾಗೂ ಮೈತ್ರಿಗೆ ಆಶೀರ್ವಾದವನ್ನು ಮಾಡಿದ್ದು, ಸುಬುಧೇಂದ್ರ ತೀರ್ಥರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಕಲರ್ಸ್ ವಾಹಿನಿ ನಿಜಕ್ಕೂ ಹೆಮ್ಮೆ ಪಡುವ ವಿಷಯ.
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಯವರ ಬೃಂದಾವನದ ಎದುರಿಗೆ ನಾಯಕಿ ಪ್ರಾರ್ಥನೆ ಮಾಡುವ ಸನ್ನಿವೇಶವೊಂದರ ಚಿತ್ರೀಕರಣವಾಗಿದೆ. ಮಂತ್ರಾಲಯದ ಪ್ರಮುಖ ಆಕರ್ಷಣೆ ದೇವಾಲಯ ಮತ್ತು ಮಠದ ಭಾಗಗಳಲ್ಲಿ ಹಾಗೂ ಮಂತ್ರಾಲಯದ ಮೂಲೆ ಮೂಲೆಯಲ್ಲೂ ಸತತ ಮೂರು ದಿನಗಳ ಕಾಲ ಧಾರಾವಾಹಿ ಚಿತ್ರೀಕರಣಗೊಂಡಿದ್ದು, ಈ ಮೂರು ದಿನಗಳ ನೆನಪು ‘ನೂರು ಜನ್ಮಕೂ ‘ ಉಳಿಯುವಂಥದ್ದು ಎನ್ನುವುದು ಧಾರಾವಾಹಿ ತಂಡದ ಅಭಿಮತ.
ಇದೇ ಶನಿವಾರ ಮತ್ತು ಭಾನುವಾರ (ಮಾರ್ಚ್ 22, 23) ಸಂಜೆ 6:30 ಕ್ಕೆ ಮನೆಯಲ್ಲಿಯೇ ಕುಳಿತು ನೂರು ಜನ್ಮಕ್ಕೂ ಸೀರಿಯಲ್ ನೋಡ್ತಾ ಮಂತ್ರಾಲಯದ ದರ್ಶನ ಮಾಡುವ ಅವಕಾಶ ವೀಕ್ಷಕರಿಗೆ ಸಿಗಲಿದೆ. ಕಲರ್ಸ್ ಕನ್ನಡ ವಾಹಿನಿಗೂ ‘ನೂರು ಜನ್ಮಕೂ ‘ ಧಾರಾವಾಹಿ ಮೂಲಕ ವೀಕ್ಷಕರಿಗೆ ನಿಜ ಮಂತ್ರಾಲಯ ದರ್ಶನ ಮಾಡಿಸಿದ ತೃಪ್ತಿಯ ಅನುಭವ ಸಿಗಲಿದೆ.





