ದಕ್ಷಿಣ ಭಾರತದ ಖ್ಯಾತ ನಟಿ ನವ್ಯಾ ನಾಯರ್ ಅವರು ವಿಶೇಷ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕೇರಳದ ಕೊಚ್ಚಿಯಿಂದ ಓಣಂ ಹಬ್ಬದ ಆಚರಣೆಗಾಗಿ ಆಸ್ಟ್ರೇಲಿಯಾದ ಮೆಲ್ಬರ್ನ್ ಏರ್ಪೋರ್ಟ್‌ಗೆ ತೆರಳಿದ್ದ ಅವರು, ತಮ್ಮ ಕೈಚೀಲದಲ್ಲಿ ಮಲ್ಲಿಗೆ ಹೂವನ್ನು ತೆಗೆದುಕೊಂಡು ಹೋಗಿದ್ದರು. ಆದರೆ, ಈ ಸಣ್ಣ ತಪ್ಪಿಗೆ ಆಸ್ಟ್ರೇಲಿಯಾದ ವಿಮಾನ ನಿಲ್ದಾಣದ ಅಧಿಕಾರಿಗಳು ಬರೋಬ್ಬರಿ 1.14 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಈ ಘಟನೆಯ ಬಗ್ಗೆ ಸ್ವತಃ ನವ್ಯಾ ನಾಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ನವ್ಯಾ ನಾಯರ್ ಓಣಂ ಆಚರಣೆಗಾಗಿ ವಿಕ್ಟೋರಿಯಾದ ಮಲಯಾಳಿ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ತಂದೆ ಕೊಟ್ಟ ಮಲ್ಲಿಗೆ ಹೂವನ್ನು ಧರಿಸಿ ವಿಮಾನದಲ್ಲಿ ಪ್ರಯಾಣಿಸಿದ್ದರು. ಆದರೆ, ಆಸ್ಟ್ರೇಲಿಯಾದ ಕಟ್ಟುನಿಟ್ಟಾದ ಜೈವಿಕ ಭದ್ರತಾ ನಿಯಮಗಳ ಪ್ರಕಾರ, ಯಾವುದೇ ಸಸ್ಯದ ಭಾಗವನ್ನು ವಿದೇಶದಿಂದ ತರುವ ಮುನ್ನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಈ ನಿಯಮದ ಬಗ್ಗೆ ಅರಿವಿಲ್ಲದೇ ಇದ್ದ ನವ್ಯಾ, ಮೆಲ್ಬರ್ನ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅಧಿಕಾರಿಗಳು ಹೂವನ್ನು ಗಮನಿಸಿ ದಂಡ ವಿಧಿಸಿದರು. “ನಾನು 1 ಲಕ್ಷ ರೂಪಾಯಿ ಮೌಲ್ಯದ ಹೂವನ್ನು ಧರಿಸಿದ್ದೆ!” ಎಂದು ತಮಾಷೆಯಾಗಿ ನವ್ಯಾ ಈ ಘಟನೆಯನ್ನು ವಿವರಿಸಿದ್ದಾರೆ.
ಆಸ್ಟ್ರೇಲಿಯಾದ ಜೈವಿಕ ಭದ್ರತಾ ನಿಯಮಗಳು ಕೀಟಗಳು, ರೋಗಕಾರಕಗಳು ಮತ್ತು ಇತರ ಜೈವಿಕ ಅಪಾಯಗಳನ್ನು ತಡೆಗಟ್ಟಲು ಕಠಿಣವಾಗಿವೆ. ಈ ನಿಯಮದ ಉಲ್ಲಂಘನೆಗೆ ಭಾರೀ ದಂಡ ವಿಧಿಸಲಾಗುತ್ತದೆ. “ವಿಮಾನದಿಂದ ಇಳಿದಾಗ ಏರ್‌ಪೋರ್ಟ್ ಸಿಬ್ಬಂದಿ ದಂಡ ವಿಧಿಸಿದಾಗ ಶಾಕ್ ಆಯಿತು. ಇದೊಂದು ಹೊಸ ಅನುಭವವಾಯಿತು,” ಎಂದು ನವ್ಯಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.





