‘ಮಲ್ಲಿಗೆ ಹೂ’ ಮುಡಿದಿದ್ದಕ್ಕೆ ನಟಿ ನವ್ಯಾ ನಾಯರ್‌ಗೆ ಬಿತ್ತು 1.14 ಲಕ್ಷ ರೂ. ಫೈನ್!

Untitled design 2025 09 08t125205.328

ದಕ್ಷಿಣ ಭಾರತದ ಖ್ಯಾತ ನಟಿ ನವ್ಯಾ ನಾಯರ್ ಅವರು ವಿಶೇಷ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕೇರಳದ ಕೊಚ್ಚಿಯಿಂದ ಓಣಂ ಹಬ್ಬದ ಆಚರಣೆಗಾಗಿ ಆಸ್ಟ್ರೇಲಿಯಾದ ಮೆಲ್ಬರ್ನ್‌ ಏರ್ಪೋರ್ಟ್‌ಗೆ ತೆರಳಿದ್ದ ಅವರು, ತಮ್ಮ ಕೈಚೀಲದಲ್ಲಿ ಮಲ್ಲಿಗೆ ಹೂವನ್ನು ತೆಗೆದುಕೊಂಡು ಹೋಗಿದ್ದರು. ಆದರೆ, ಈ ಸಣ್ಣ ತಪ್ಪಿಗೆ ಆಸ್ಟ್ರೇಲಿಯಾದ ವಿಮಾನ ನಿಲ್ದಾಣದ ಅಧಿಕಾರಿಗಳು ಬರೋಬ್ಬರಿ 1.14 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಈ ಘಟನೆಯ ಬಗ್ಗೆ ಸ್ವತಃ ನವ್ಯಾ ನಾಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ನವ್ಯಾ ನಾಯರ್ ಓಣಂ ಆಚರಣೆಗಾಗಿ ವಿಕ್ಟೋರಿಯಾದ ಮಲಯಾಳಿ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ತಂದೆ ಕೊಟ್ಟ ಮಲ್ಲಿಗೆ ಹೂವನ್ನು ಧರಿಸಿ ವಿಮಾನದಲ್ಲಿ ಪ್ರಯಾಣಿಸಿದ್ದರು. ಆದರೆ, ಆಸ್ಟ್ರೇಲಿಯಾದ ಕಟ್ಟುನಿಟ್ಟಾದ ಜೈವಿಕ ಭದ್ರತಾ ನಿಯಮಗಳ ಪ್ರಕಾರ, ಯಾವುದೇ ಸಸ್ಯದ ಭಾಗವನ್ನು ವಿದೇಶದಿಂದ ತರುವ ಮುನ್ನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಈ ನಿಯಮದ ಬಗ್ಗೆ ಅರಿವಿಲ್ಲದೇ ಇದ್ದ ನವ್ಯಾ, ಮೆಲ್ಬರ್ನ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅಧಿಕಾರಿಗಳು ಹೂವನ್ನು ಗಮನಿಸಿ ದಂಡ ವಿಧಿಸಿದರು. “ನಾನು 1 ಲಕ್ಷ ರೂಪಾಯಿ ಮೌಲ್ಯದ ಹೂವನ್ನು ಧರಿಸಿದ್ದೆ!” ಎಂದು ತಮಾಷೆಯಾಗಿ ನವ್ಯಾ ಈ ಘಟನೆಯನ್ನು ವಿವರಿಸಿದ್ದಾರೆ.

ಆಸ್ಟ್ರೇಲಿಯಾದ ಜೈವಿಕ ಭದ್ರತಾ ನಿಯಮಗಳು ಕೀಟಗಳು, ರೋಗಕಾರಕಗಳು ಮತ್ತು ಇತರ ಜೈವಿಕ ಅಪಾಯಗಳನ್ನು ತಡೆಗಟ್ಟಲು ಕಠಿಣವಾಗಿವೆ. ಈ ನಿಯಮದ ಉಲ್ಲಂಘನೆಗೆ ಭಾರೀ ದಂಡ ವಿಧಿಸಲಾಗುತ್ತದೆ. “ವಿಮಾನದಿಂದ ಇಳಿದಾಗ ಏರ್‌ಪೋರ್ಟ್ ಸಿಬ್ಬಂದಿ ದಂಡ ವಿಧಿಸಿದಾಗ ಶಾಕ್ ಆಯಿತು. ಇದೊಂದು ಹೊಸ ಅನುಭವವಾಯಿತು,” ಎಂದು ನವ್ಯಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Exit mobile version