ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ಕರ್ನಾಟಕವನ್ನೇ ನಡುಗಿಸಿದೆ. ಈ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅತೀಂದ್ರಿಯ ಶಕ್ತಿ ಮತ್ತು ಭವಿಷ್ಯವಾಣಿಗೆ ಹೆಸರಾದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ನಟ ದರ್ಶನ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ‘ಸಿಂಹಪುರಿಯ ಸಿಂಹ’ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೋಡಿಮಠದ ಶ್ರೀಗಳ ಬಳಿ ಮಾಧ್ಯಮದವರು ದರ್ಶನ್ ಅವರ ಭವಿಷ್ಯದ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಅತ್ಯಂತ ಸಂಯಮದಿಂದ ಉತ್ತರಿಸಿದ ಶ್ರೀಗಳು, ಈ ಪ್ರಕರಣವು ಸದ್ಯ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ನಾವು ಈ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ಈಗ ದರ್ಶನ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದರೂ ಅದು ನ್ಯಾಯಾಲಯದ ವಿರುದ್ಧ ಮಾತನಾಡಿದಂತಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ದರ್ಶನ್ ಅವರ ಜೀವನದಲ್ಲಿ ಎದುರಾಗಿರುವ ಈ ಸಂಕಷ್ಟದ ಬಗ್ಗೆ ಮರುಗಿದ ಶ್ರೀಗಳು, ದರ್ಶನ್ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸುವ ಹಾರೈಸಿದರು.
ಕಳೆದ ಕೆಲವು ವರ್ಷಗಳಿಂದ ನಟ ದರ್ಶನ್ ರಾಜಕೀಯ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಹೀಗಾಗಿ, ಅವರು ಜೈಲಿನಿಂದ ಬಿಡುಗಡೆಯಾದ ಮೇಲೆ ನೇರವಾಗಿ ರಾಜಕೀಯಕ್ಕೆ ಪ್ರವೇಶಿಸುತ್ತಾರಾ ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಕುರಿತು ಶ್ರೀಗಳನ್ನು ಪ್ರಶ್ನಿಸಿದಾಗ, ದರ್ಶನ್ ಅವರು ಮೊದಲು ಜೈಲಿನಿಂದ ಹೊರಬರಲಿ, ಆಮೇಲೆ ಅದರ ಬಗ್ಗೆ ನೋಡೋಣ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಆದರೆ, ದರ್ಶನ್ ಯಾವಾಗ ಬಿಡುಗಡೆಯಾಗುತ್ತಾರೆ ಅಥವಾ ಈ ಕೇಸ್ನಲ್ಲಿ ಅವರಿಗೆ ಶಿಕ್ಷೆಯಾಗುತ್ತದೆಯೇ ಎಂಬ ಬಗ್ಗೆ ಶ್ರೀಗಳು ಯಾವುದೇ ಸ್ಪಷ್ಟ ಭವಿಷ್ಯ ನುಡಿಯಲು ನಿರಾಕರಿಸಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಗೆ ಗೌರವ ನೀಡಿರುವ ಶ್ರೀಗಳು, ಕಾಲವೇ ಎಲ್ಲವನ್ನೂ ನಿರ್ಧರಿಸಲಿದೆ ಎಂಬ ಸಂದೇಶ ನೀಡಿದ್ದಾರೆ.





