ಉದಯಪುರ, ಫೆ. 26: ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ಕೊಡಗಿನ ಚೆಲುವೆ, ರಾಷ್ಟ್ರೀಯ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹವು ಇಂದು ರಾಜಸ್ಥಾನದ ಉದಯಪುರದ ಐಶಾರಾಮಿ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಈ ಜೋಡಿ ಇಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ತೆಲುಗು ಸಂಪ್ರದಾಯದಂತೆ ಸತಿ-ಪತಿಗಳಾಗಿದ್ದಾರೆ. ಸಂಜೆ ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಈ ಸಂಭ್ರಮದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ವಿರೋಶ್ ಹಂಚಿಕೊಂಡಿದ್ದು, ಅಭಿಮಾನಿಗಳು ಶುಭಕೋರಿದ್ದಾರೆ.
ಹಲವು ವರ್ಷಗಳ ಪ್ರೀತಿ
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಕಳೆದ ಹಲವು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು ಎಂಬುದು ಅಭಿಮಾನಿಗಳಿಗೆ ಹೊಸ ವಿಚಾರವಲ್ಲ, ಹಲವಾರು ಸಂದರ್ಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ತಮ್ಮ ಪ್ರೀತಿಯನ್ನು ದಾಂಪತ್ಯ ಜೀವನದ ಹಾದಿಗೆ ಕೊಂಡೊಯ್ದಿದ್ದಾರೆ.
ಹಳದಿ ಮತ್ತು ಸಂಗೀತ ಸಂಭ್ರಮ
ಮದುವೆಗೂ ಮುನ್ನ ಉದಯಪುರದಲ್ಲಿ ಎರಡು ದಿನಗಳ ಕಾಲ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ನಿನ್ನೆ ಹಳದಿ ಮತ್ತು ಸಂಗೀತ ಕಾರ್ಯಕ್ರಮಗಳು ಜರುಗಿದವು. ಕುಟುಂಬ ಸದಸ್ಯರು, ಸ್ನೇಹಿತರು ಸಂಗೀತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಹಳದಿ ಕಾರ್ಯಕ್ರಮದಲ್ಲಿ ಪರಂಪರೆಯ ಉಡುಪು ತೊಟ್ಟ ರಶ್ಮಿಕಾ ಹಾಗೂ ವಿಜಯ್ ಗಮನ ಸೆಳೆದರು.
ತೆಲಂಗಾಣದಿಂದ ವಿಶೇಷವಾಗಿ ಪುರೋಹಿತರ ತಂಡವೊಂದು ಉದಯಪುರಕ್ಕೆ ಆಗಮಿಸಿ, ಎಲ್ಲಾ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿತು. ತೆಲುಗು ಸಂಪ್ರದಾಯದ ಪ್ರತಿಯೊಂದು ಆಚರಣೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು.
ಕೊಡವ ಸಂಪ್ರದಾಯದಲ್ಲೂ ಮದುವೆ
ರಶ್ಮಿಕಾ ಮಂದಣ್ಣ ಕೊಡಗಿನ ಮೂಲದವರಾಗಿರುವುದರಿಂದ, ಇದೇ ದಿನ ಸಂಜೆ ಕೊಡವ ಸಂಪ್ರದಾಯದಂತೆ ಮದುವೆ ಮತ್ತೊಮ್ಮೆ ನಡೆಯಲಿದೆ. ಎರಡು ವಿಭಿನ್ನ ಸಂಸ್ಕೃತಿ, ಆಚರಣೆಗಳಿಗೆ ಸೇರಿದ ಕುಟುಂಬಗಳಾದ ಕಾರಣ ಎರಡೂ ಸಂಪ್ರದಾಯಗಳಿಗೆ ಗೌರವ ನೀಡುವ ಉದ್ದೇಶದಿಂದ ಎರಡು ರೀತಿಯಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
ಹೈದರಾಬಾದ್‌ನಲ್ಲಿ ಭವ್ಯ ಆರತಕ್ಷತೆ
ಮಾರ್ಚ್ 4ರಂದು ಹೈದರಾಬಾದ್‌ನ ಪ್ರಸಿದ್ಧ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಭವ್ಯ ಆರತಕ್ಷತೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು, ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜಕೀಯ ನಾಯಕರು, ಕೆಲ ಕೇಂದ್ರ ಸಚಿವರು ಹಾಗೂ ಸಂಸದರು ಸಹ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸಿನಿರಂಗದಲ್ಲಿ ಸಂಭ್ರಮ
ಟಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಈ ಮದುವೆ ಸಂಭ್ರಮದ ವಾತಾವರಣ ಮೂಡಿಸಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.





