ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಸೇರಿದಂತೆ ಹಲವಾರು ಸೀರಿಯಲ್‌ಗಳಲ್ಲಿ ನಟಿಸಿರುವ ನಟಿ ಶ್ರುತಿಯ ಜೀವಕ್ಕೆ ಗಂಡಾಂತರ ಎದುರಾಗಿದೆ. ಇವರ ಪತಿ ಅಮರೇಶ್‌ನಿಂದ ಚಾಕು ಇರಿತಕ್ಕೆ ಒಳಗಾಗಿರುವ ಶ್ರುತಿ ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಹಿಂದೆ ರೀಲ್ಸ್ ವಿವಾದವೇ ಕಾರಣ ಎಂದು ತಿಳಿದುಬಂದಿದೆ.
ರೀಲ್ಸ್ ವಿವಾದ
ಶ್ರುತಿ ಮತ್ತು ಅಮರೇಶ್ ದಂಪತಿಗೆ ಇಬ್ಬರು ಮಕ್ಕಳಿದ್ದು, ಹನುಮಂತನಗರದಲ್ಲಿ ಲೀಸ್‌ಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ, ಶ್ರುತಿಯ ಸಾಮಾಜಿಕ ಜಾಲತಾಣದ ಚಟುವಟಿಕೆಗಳು, ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಇತರರ ಜೊತೆ ರೀಲ್ಸ್ ಮಾಡಿ ಟ್ಯಾಗ್ ಮಾಡುವುದು, ಅಮರೇಶ್‌ಗೆ ಅನುಮಾನವನ್ನುಂಟು ಮಾಡಿತ್ತು. ಈ ಕಾರಣಕ್ಕೆ ದಂಪತಿಯ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಕಳೆದ ಏಪ್ರಿಲ್‌ನಲ್ಲಿ ಶ್ರುತಿ ತನ್ನ ಗಂಡನಿಂದ ದೂರವಾಗಿ ಅಣ್ಣನ ಮನೆಯಲ್ಲಿ ವಾಸವಾಗಿದ್ದರು. ಆದರೆ, ಕಳೆದ ಗುರುವಾರ ರಾಜಿ-ಸಂಧಾನದ ನಂತರ ಒಂದಾದ ದಂಪತಿ, ಮರುದಿನವೇ ಈ ದುರ್ಘಟನೆ ನಡೆದಿದೆ.
ಜುಲೈ 4ರಂದು ದಂಪತಿಯ ನಡುವೆ ರೀಲ್ಸ್ ವಿಷಯಕ್ಕೆ ತೀವ್ರ ಜಗಳವಾಯಿತು. ಸ್ಥಳೀಯ ನಿವಾಸಿಯೊಬ್ಬರಾದ ಕುಮಾರ್‌ರವರ ಪ್ರಕಾರ, “ಜೋರಾಗಿ ಕಿರುಚಾಟ ಕೇಳಿಸಿತ್ತು. ಹೋಗಿ ನೋಡಿದಾಗ ಶ್ರುತಿಯ ಬಟ್ಟೆಯಲ್ಲಿ ರಕ್ತ ಹರಿಯುತ್ತಿತ್ತು. ಅಮರೇಶ್ ಚಾಕುವಿನಿಂದ ಇರಿದಿದ್ದ.” ಘಟನೆಯ ಸಂದರ್ಭದಲ್ಲಿ, ಅಮರೇಶ್ ಶ್ರುತಿಯ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು, ತಲೆ ಕೂದಲನ್ನು ಹಿಡಿದು ಗೋಡೆಗೆ ಗುದ್ದಿ, ಸಿನಿಮಾ ಶೈಲಿಯಲ್ಲಿ ಹಲ್ಲೆ ನಡೆಸಿದ್ದಾನೆ. ಪಕ್ಕೆಲುಬು, ತೊಡೆ, ಮತ್ತು ಕುತ್ತಿಗೆಗೆ ಚಾಕು ಇರಿತದಿಂದ ಶೃತಿಗೆ ಗಂಭೀರ ಗಾಯಗಳಾಗಿವೆ. ಕಳೆದ ವಾರವೂ ಸಹ ರೀಲ್ಸ್ ವಿಷಯಕ್ಕೆ ಜಗಳವಾಗಿದ್ದು, ಅಮರೇಶ್ ಶ್ರುತಿಯನ್ನು ಹೊಡೆದಿದ್ದ ಎಂದು ತಿಳಿದುಬಂದಿದೆ.
ಈ ಘಟನೆಯ ಬಗ್ಗೆ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಮರೇಶ್‌ನನ್ನು ಬಂಧಿಸಿದ್ದು, ಕೊಲೆ ಯತ್ನ, ದಾಂಪತ್ಯ ಕಲಹ, ಮತ್ತು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಆರೋಪಗಳನ್ನು ಹೊರಿಸಿದ್ದಾರೆ. ಶೃತಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.





