ನಟ ಉಮೇಶ್ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು, ಎಡಗಾಲಿನ ತೊಡೆ ಸಂಧಿ ಮತ್ತು ಸೊಂಟದ ಭಾಗಕ್ಕೆ ತೀವ್ರ ನೋವುಂಟಾಗಿದೆ. ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆಗಳ ನಂತರ, ಅವರಿಗೆ ‘ನೆಕ್ ಫೀಮರ್ ಬೋನ್ ಫ್ರ್ಯಾಕ್ಚರ್’ (ತೊಡೆ ಎಲುಬಿನ ಮೂಲಭೂತ ಮುರಿತ) ಇದೆ ಎಂದು ಗುರುತಿಸಲಾಗಿದೆ. ಆರಂಭದಲ್ಲಿ ವಯಸ್ಸಿನ ಕಾರಣದಿಂದಲೇ ಸಣ್ಣ ಮುರಿತವಿರಬಹುದು ಎಂದು ಭಾವಿಸಲಾಗಿತ್ತು, ಆದರೆ ಪರೀಕ್ಷೆಯ ನಂತರ ಫ್ರ್ಯಾಕ್ಚರ್ ದೃಢಪಟ್ಟಿದೆ.
ಆಸ್ಪತ್ರೆಯ ವೈದ್ಯರು ಶಿವರಾಜ್ ಗೌಡ ಈ ಬಗ್ಗೆ ಮಾತನಾಡಿ, ಉಮೇಶ್ ಅವರನ್ನು ಆರ್ಥೋಪೆಡಿಕ್ ಶಸ್ತ್ರಚಿಕಿತ್ಸೆ (ಆರ್ಥೋ ಸರ್ಜರಿ) ಮಾಡುವ ಯೋಜನೆ ಇತ್ತು. ಆದರೆ, ಶಸ್ತ್ರಚಿಕಿತ್ಸೆಗೆ ಮುಂಚಿನ ರೂಟಿನ್ ಪರೀಕ್ಷೆಗಳಲ್ಲಿ ಅವರ ಲಿವರ್ ಭಾಗದಲ್ಲಿ ಗಂಭೀರವಾದ ಗಡ್ಡೆ ಇದೆ ಎಂದು ಪತ್ತೆಯಾಗಿದೆ. ಮುಂದಿನ ಪರೀಕ್ಷೆಗಳಲ್ಲಿ, ಈ ಗಡ್ಡೆ ಕ್ಯಾನ್ಸರ್‌ನ ನಾಲ್ಕನೇ ಹಂತದಲ್ಲಿದೆ ಮತ್ತು ಇತರೆ ಅಂಗಗಳಿಗೂ ಹರಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಪರಿಸ್ಥಿತಿಯಿಂದಾಗಿ, ಮೊದಲು ಲಿವರ್ ಗಡ್ಡೆಯ ಚಿಕಿತ್ಸೆಯನ್ನು ಆದ್ಯತೆ ನೀಡಬೇಕಾಗಿದೆ. ವೈದ್ಯರು ಉಮೇಶ್ ಅವರ ಕುಟುಂಬದವರ ಜೊತೆ ಚರ್ಚೆ ನಡೆಸಿದ್ದಾರೆ. ಕ್ಯಾನ್ಸರ್ ವಿಶೇಷಜ್ಞರ ಸಲಹೆಯ ಮೇರೆಗೆ, ಉಮೇಶ್ ಅವರಿಗೆ ಕೀಮೋಥೆರಪಿ ಮತ್ತು ಇಮ್ಯುನೋಥೆರಪಿ ಚಿಕಿತ್ಸೆಗಳನ್ನು ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ, ಗಡ್ಡೆಯನ್ನು ಇಂಜೆಕ್ಷನ್ ಮೂಲಕ ಕರಗಿಸುವ ಪ್ರಯತ್ನಗಳು ನಡೆದಿವೆ.
ನಟ ಉಮೇಶ್ ಮಾತನಾಡುತ್ತಾ, ನೆನ್ನೆ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದೆ. ಎಡಗಡೆ ಸೊಂಟ ಮತ್ತು ಬಲ ಭುಜಕ್ಕೆ ಏಟು ಬಿದ್ದಿದೆ. ಆದರೆ ಏನೂ ತೊಂದರೆ ಆಗಿಲ್ಲ ಎಂದು ನಗುತ್ತಲೇ ತಿಳಿಸಿದರು. ನಮ್ಮ ಸ್ನೇಹಿತರು ಮತ್ತು ಕಲಾವಿದರ ಸಂಘಕ್ಕೆ ನಾನು ವಿಷಯ ತಿಳಿಸಿದ್ದೇನೆ. ಡಾಕ್ಟರ್ ಬಹಳ ವರ್ಷಗಳಿಂದ ಪರಿಚಯ ಇರುವವರು, ಚೆನ್ನಾಗಿ ನೋಡಿಕೊಳ್ತಿದ್ದಾರೆ. ಅಭಿಮಾನಿಗಳು ಬೇಸರ ಪಟ್ಕೊಬೇಡಿ. ಆದಷ್ಟು ಬೇಗ ಹುಷಾರಾಗಿ, ಸಿನಿಮಾ ಮತ್ತು ಸೀರಿಸ್ ಮಾಡ್ತೀನಿ. ನಿಮ್ಮ ಸಹಕಾರ ಇರಲಿ ಎಂದು ಹೇಳಿದ್ದಾರೆ.
ಕಲಾವಿದರ ಸಂಘ ಮತ್ತು ಸಹ ನಟರು ಉಮೇಶ್ ಅವರಿಗೆ ಬೆಂಬಲವಾಗಿದ್ದಾರೆ. ವಿನೋದ್ ರಾಜ್, ಶೃತಿ, ಮತ್ತು ಗಿರಿಜಮ್ಮ ಅವರುಗಳು ಸಂಪರ್ಕಿಸಿ ಧೈರ್ಯ ಕೊಟ್ಟಿದ್ದಾರೆ. ಚಿಕಿತ್ಸೆಯ ನಂತರದ ಪರಿಸ್ಥಿತಿಯನ್ನು ಗಮನಿಸಿ, ನಾಲ್ಕೈದು ದಿನಗಳ ನಂತರ ಮುರಿತದ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ನಿರ್ಣಯಿಸಿದ್ದಾರೆ.





