ಬೆಳಗಾವಿ: ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡಿತ್ತು. ನಟಿ ಪವಿತ್ರಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ್ದಕ್ಕೆ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಬೀಕರವಾಗಿ ಹತ್ಯೆಗೈದು ಸಂಕಷ್ಟದಲ್ಲಿದ್ದಾರೆ. ಅದೇ ರೀತಿ ಪ್ರಕರಣವೊಂದು ಈಗ ಬೆಳಗಾವಿ ನಡೆದಿದೆ.
ಘಟನೆಯ ವಿವರ
ವಿಜಯನಗರ ಮೂಲದ ಮನೋಜ್ ಎಂಬ ಪಿಯುಸಿ ವಿದ್ಯಾರ್ಥಿಯು ನಟಿ ಪಲ್ಲವಿ ಸಂಜು ಬಸಯ್ಯ ಅವರ ಇನ್ಸ್ಟಾಗ್ರಾಮ್ ಖಾತೆಗೆ ಅಶ್ಲೀಲ ಸಂದೇಶಗಳು ಮತ್ತು ಫೋಟೊಗಳನ್ನು ಕಳುಹಿಸಿದ್ದ. ಈ ಘಟನೆಯಿಂದ ಕೋಪಗೊಳ್ಳದೆ, ಸಂಜು ಬಸಯ್ಯ ಅವರು ಸಂಯಮದಿಂದ ವರ್ತಿಸಿ, ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರು ದಾಖಲಾದ ತಕ್ಷಣ, ಪೊಲೀಸರು ಯುವಕನನ್ನು ವಿಚಾರಣೆಗೆ ಕರೆಸಿದರು. ಪೊಲೀಸರು ಯುವಕನಿಗೆ ತಪ್ಪಿನ ಅರಿವು ಮೂಡಿಸಿ, ಬುದ್ಧಿ ಕಲಿಸಿ ಕಳುಹಿಸಿದರು.
ಸಂಜು ಬಸಯ್ಯ ಅವರು ಯುವಕನ ಭವಿಷ್ಯ ಹಾಳಾಗದಂತೆ ಎಚ್ಚರಿಕೆಯಿಂದ ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಯನ್ನು ಬಗೆಹರಿಸಿದರು. ಈ ವಿಷಯದಲ್ಲಿ ಅವರು ತೋರಿದ ಸಂಯಮ ಮತ್ತು ಕಾನೂನು ಮಾರ್ಗವು ಎಲ್ಲರಿಗೂ ಮಾದರಿಯಾಗಿದೆ. ಯುವಕನು ತನ್ನ ತಪ್ಪನ್ನು ಒಪ್ಪಿಕೊಂಡು, ಇನ್ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕೆ ಕ್ಷಮೆಯಾಚಿಸಿದ್ದಾನೆ. “ನಾನು ತಪ್ಪು ಮಾಡಿದ್ದೇನೆ, ಇನ್ಯಾರೂ ಈ ರೀತಿ ಮಾಡಬೇಡಿ,” ಎಂದು ಅವನು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಈ ಘಟನೆಯನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೋಲಿಸಲಾಗುತ್ತಿದೆ. ಆ ಪ್ರಕರಣದಲ್ಲಿ, ನಟ ದರ್ಶನ್ ಮತ್ತು ಅವರ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯನ್ನು ದರ್ಶನ್ ತಂಡ ಭೀಕರವಾಗಿ ಹತ್ಯೆ ಮಾಡಿದ ಆರೋಪವಿದೆ. ಈ ಘಟನೆಯು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ, ಸಂಜು ಬಸಯ್ಯ ಅವರು ಇದೇ ರೀತಿಯ ಪರಿಸ್ಥಿತಿಯನ್ನು ಸಂಯಮದಿಂದ ಮತ್ತು ಕಾನೂನಿನ ಮೂಲಕ ಬಗೆಹರಿಸಿದ್ದಾರೆ. ಇದರಿಂದ ಅವರು ದರ್ಶನ್‌ಗೆ ಮಾದರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಯುವಕ ಕ್ಷಮಾಪಣೆ
ಯುವಕನು ತನ್ನ ತಪ್ಪನ್ನು ಒಪ್ಪಿಕೊಂಡು, “ನಾನು ಬಹಳ ದಿನಗಳಿಂದ ಇನ್ಸ್ಟಾಗ್ರಾಮ್ ಬಳಸುತ್ತಿದ್ದೆ. ಪಲ್ಲವಿ ಸಂಜು ಅವರ ಅಧಿಕೃತ ಖಾತೆಗೆ ಕೆಟ್ಟ ಕಾಮೆಂಟ್‌ಗಳು ಮತ್ತು ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದೆ. ಪೊಲೀಸರು ನನ್ನನ್ನು ಕರೆಸಿ ಬುದ್ಧಿ ಕಲಿಸಿದ್ದಾರೆ. ನನಗೆ ನನ್ನ ತಪ್ಪಿನ ಅರಿವಾಗಿದೆ,” ಎಂದು ಕ್ಷಮೆ ಯಾಚಿಸಿದ್ದಾನೆ. ಈ ಘಟನೆಯಿಂದ ಇತರರಿಗೂ ಒಂದು ಪಾಠವಾಗಿದೆ ಎಂದು ತಪ್ಪು ಒಪ್ಪಿಕೊಂಡಿದ್ದಾನೆ.





