ಮುಂಬೈ, ಆಗಸ್ಟ್ 16: ಬಾಲಿವುಡ್‌ನ ಹಿರಿಯ ಮತ್ತು ಜನಪ್ರಿಯ ನಟ ಗೋವಿಂದ (Govinda) ಮತ್ತು ಅವರ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈವಾಹಿಕ ಕಲಹವು ಇದೀಗ ಮತ್ತೆ ಸುದ್ದಿಯಲ್ಲಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಿರಿಯ ವಯಸ್ಸಿನ ನಟಿ ಕೋಮಲ್ ರಾಣಿ (Komal Rani) ಜೊತೆ ಕಾಣಿಸಿಕೊಂಡಿದ್ದ ಗೋವಿಂದ ಅವರನ್ನು ಸುನೀತಾ ಅವರು ‘ಶುಗರ್ ಡ್ಯಾಡಿ’ (Sugar Daddy) ಎಂದು ಕಾಲೆಳೆದು ಟೀಕಿಸಿದ್ದರು. ಈ ಟೀಕೆಗೆ ಈಗ ತಿರುಗೇಟು ನೀಡಿರುವ ಗೋವಿಂದ, ಪತ್ನಿ ಸುನೀತಾಗೆ ‘ನಿಮ್ಮ ಮಿತಿಯಲ್ಲಿ ಇರಿ’ ಎಂದು ಎಚ್ಚರಿಕೆ ನೀಡಿ, ತಮ್ಮ ಗೌರವ ಮತ್ತು ವ್ಯವಹಾರಕ್ಕೆ ಧಕ್ಕೆ ತರಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಸುನೀತಾ ಅವರ ವ್ಯಂಗ್ಯವೇನು?
ಪಾಪರಾಜಿಗಳ ಮುಂದೆ ಮಾತನಾಡಿದ್ದ ಸುನೀತಾ, “ಮೊದಲು ಸಿನಿಮಾ ನಿರ್ಮಾಣವಾಗಲಿ, ಪ್ರಚಾರ ಆಮೇಲೆ. ಆದರೆ ಈಗಿನಿಂದಲೇ ತನ್ನ ಮಗಳ ವಯಸ್ಸಿನ ಹುಡುಗಿಯ ಜೊತೆ ಸುತ್ತಾಡುತ್ತಿದ್ದಾರೆ. ಅವರಿಗೆ ಕೊಂಚವೂ ಮಾನಮರ್ಯಾದೆ ಇಲ್ಲವೇ? ಕನಿಷ್ಠ ಉಡುಪು ಧರಿಸುವ ಪ್ರಜ್ಞೆಯಾದರೂ ಇರಬೇಕು. ನಿಮ್ಮ ಶುಗರ್ ಡ್ಯಾಡಿ ಅಷ್ಟೊಂದು ಶ್ರೀಮಂತನಾಗಿದ್ದರೆ ಸರಿಯಾಗಿ ಬಟ್ಟೆ ಧರಿಸಿ. ನಮ್ಮನ್ನು ನೋಡಿ, ಎಷ್ಟು ಸ್ಟೈಲಿಶ್ ಆಗಿ ಡ್ರೆಸ್ ಮಾಡಿಕೊಂಡಿದ್ದೇವೆ. ಅವರು ತಲೆ ಕೆಡಿಸಿಕೊಂಡಿದ್ದಾರೆ” ಎಂದು ವ್ಯಂಗ್ಯವಾಗಿ ಹೇಳಿದ್ದರು. ಈ ಹೇಳಿಕೆಯು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
ಗೋವಿಂದ ಅವರ ಖಡಕ್ ತಿರುಗೇಟು
ಸುನೀತಾ ಅಹುಜಾ ಅವರು ಆಡಿದ ಮಾತುಗಳನ್ನು ಗೋವಿಂದ ತೀವ್ರವಾಗಿ ಖಂಡಿಸಿದ್ದಾರೆ. ಇದು ತಮ್ಮ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಎಂದು ಅವರು ಹೇಳಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಗೋವಿಂದ, “ನಾನೀಗ ಹೊಸ ಸಿನಿಮಾವನ್ನು ಪ್ರಾರಂಭಿಸಿದ್ದೇನೆ. ಆದರೆ ನೀವು ನನ್ನ ಗೌರವವನ್ನು ಹಾಳುಮಾಡಲು, ಸಾರ್ವಜನಿಕವಾಗಿ ನನ್ನ ಇಮೇಜ್ ಹಾಳುಮಾಡಲು ಮತ್ತು ನನ್ನ ವ್ಯವಹಾರಕ್ಕೆ ಹಾನಿ ಮಾಡಲು ಸಕಲ ಪ್ರಯತ್ನ ನಡೆಸುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನನ್ನನ್ನು ಸಾರ್ವಜನಿಕವಾಗಿ ಅವಮಾನಿಸುವುದು ಸರಿಯಲ್ಲ. ನಮ್ಮ ಕೌಟುಂಬಿಕ ವಿಚಾರಗಳನ್ನು ಮಾಧ್ಯಮದ ಮುಂದೆ ತಂದು ಸಾರ್ವಜನಿಕ ಚರ್ಚೆಗೆ ಗುರಿಪಡಿಸುವುದು ಅನುಚಿತ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಬಡ ಕುಟುಂಬಗಳ ನಟರ ನಿಂದನೆ ಬೇಡ’
ಚಿತ್ರರಂಗಕ್ಕೆ ಬಡ ಕುಟುಂಬಗಳಿಂದ ಅನೇಕರು ಬರುತ್ತಾರೆ ಎಂದು ಹೇಳಿದ ಗೋವಿಂದ, “ಅವರ ಬಳಿ ಅಧಿಕಾರ ಅಥವಾ ಹಣ ಇಲ್ಲದಿರಬಹುದು. ಆದರೆ ದೇವರು ನಿಮಗೆ ಎಲ್ಲವನ್ನೂ ನೀಡಿದ್ದಾನೆ ಎಂದಮಾತ್ರಕ್ಕೆ ಬೇರೆಯವರನ್ನು ಈ ಮಟ್ಟಕ್ಕೆ ಅವಮಾನಿಸುವುದು ಶೋಭೆಯಲ್ಲ” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
“ದೇಶದ ಅನೇಕ ಹಿರಿಯ ನಟರು ತಮಗಿಂತ ಕಿರಿಯ ನಟಿಯರ ಜೊತೆ ನಟಿಸಿದ್ದಾರೆ. ಇದರಿಂದ ಅವರಿಗೆ ಯಶಸ್ಸು ಮತ್ತು ಯಂಗ್ ಲುಕ್ ಸಿಕ್ಕಿದೆ. ಆದರೆ ನಾನು ಯಂಗ್ ಆಗಿ ಕಾಣಿಸಿಕೊಳ್ಳುವುದು ನಿಮಗೆ ಇಷ್ಟವಿಲ್ಲದಂತಿದೆ” ಎಂದು ಗೋವಿಂದ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ತನಗೆ 50 ವರ್ಷ ವಯಸ್ಸಾದರೂ, ತಾನು ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ತಮ್ಮ ವೃತ್ತಿಪರ ಜೀವನದ ಭಾಗವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
‘ನಿಮ್ಮ ಬೆನ್ನ ಹಿಂದಿರುವ ಗ್ಯಾಂಗ್ ಶೀಘ್ರವೇ ಬಯಲಾಗಲಿದೆ’
ಸುನೀತಾಗೆ ವಾರ್ನಿಂಗ್ ನೀಡಿದ ಗೋವಿಂದ, “ನಿಮ್ಮ ಪಾಡ್ಕಾಸ್ಟ್ ಹಾಗೂ ಹೇಳಿಕೆಗಳ ಹಿಂದೆ ಯಾವ ಗುಂಪು ಅಥವಾ ಗ್ಯಾಂಗ್ ಕೆಲಸ ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಶೀಘ್ರದಲ್ಲೇ ಅವರೆಲ್ಲರೂ ಹೊರಬರಲಿದ್ದಾರೆ. ಭವಿಷ್ಯದಲ್ಲಿ ನಿಮಗೂ ನನ್ನ ಅಗತ್ಯ ಬರಬಹುದು. ಆದ್ದರಿಂದ ನನ್ನನ್ನು ನಿಂದಿಸುವುದನ್ನು ನಿಲ್ಲಿಸಿ, ನಿಮ್ಮ ಮಿತಿಯಲ್ಲಿರಿ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದಲ್ಲದೆ, ತಮ್ಮ ಹೊಸ ಸಿನಿಮಾದ ಶೂಟಿಂಗ್ ಮತ್ತು ವ್ಯಾಪಾರದ ಮೇಲೆ ಪರಿಣಾಮ ಬೀರುವಂತಹ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದೂ ಅವರು ಪತ್ನಿಯನ್ನು ಎಚ್ಚರಿಸಿದ್ದಾರೆ.





