ಸೆಕ್ಸ್ & ವಯಲೆನ್ಸ್.. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿಬಿಟ್ಟಿದೆ. ಇದು ಕಲೆಯ ಕಗ್ಗೊಲೆಯೋ ಅಥ್ವಾ ಹಣ ಮಾಡೋಕೆ ಉಪಯೋಗಿಸ್ತಿರೋ ಟೂಲ್‌ಗಳೋ ಒಂದೂ ಗೊತ್ತಾಗ್ತಿಲ್ಲ. ಯಶ್, ರಣ್‌ಬೀರ್, ಉನ್ನಿ ಮಕುಂದನ್ ಆಯ್ತು. ಇದೀಗ ಶಾಹಿದ್ ಕಪೂರ್ ಸರದಿ.
ಇದು ಬಾಲಿವುಡ್ ಸಿನಿಮಾದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಓ ರೋಮಿಯೋ ಚಿತ್ರದ ಟೀಸರ್ ದೃಶ್ಯಗುಚ್ಚ. ನಾವು ಯಾವುದೆಲ್ಲಾ ಬಹುನಿರೀಕ್ಷಿತ ಅಂತ ಕಾತರದಿಂದ ಕಾಯ್ತಿರ್ತೀವೋ ಅವೆಲ್ಲಾ ಕೂಡ ಇದೇ ರೀತಿ ಭ್ರಮನಿರಸಗೊಳಿಸಿ ಬಿಡುತ್ತವೆ. ಹೌದು.. ಟೈಟಲ್ ನೋಡಿ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಅಂದುಕೊಂಡಿದ್ದವ್ರಿಗೆ ಇದು ಆ ರೋಮಿಯೋ-ಜೂನಿಯೆಟ್ ಕಥೆ ಅಲ್ಲ, ಇದೊಂದು ಭಯಂಕರ ಅಂಡರ್‌ವರ್ಲ್ಡ್ ಕ್ರೈಂ ಕಥಾನಕ ಅನ್ನೋದ್ರ ಹಿಂಟ್ ನೀಡಿದೆ.
ಯೆಸ್.. ಪ್ರೀತಿಗಾಗಿ ಯುದ್ಧಗಳು ನಡೆದಿವೆ ನಿಜ. ಹಾಗಂತ ಇಷ್ಟೊಂದು ಕ್ರೌರ್ಯದ ಅಗತ್ಯತೆ ಆದ್ರೂ ಏನಿತ್ತು ಅನ್ನೋ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಲಿದೆ. ಶಾಹಿದ್ ಕಪೂರ್ ಇಲ್ಲಿ ರೋಮಿಯೋ ಆಗಿ ಮಿಂಚ್ತಿದ್ರೆ, ಜೂಲಿಯೆಟ್ ಆಗಿ ದಿಶಾ ಪಟಾನಿ ಹಾಗೂ ಪ್ರಮುಖ ಪಾತ್ರಗಳಲ್ಲಿ ನಾನಾ ಪಾಟೇಕರ್ ಹಾಗೂ ತೃಪ್ತಿ ದಿಮ್ರಿ ಕೂಡ ಕಾಣಸಿಗಲಿದ್ದಾರೆ. ಸ್ಟಾರ್‌ಕಾಸ್ಟ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ವಯಲೆನ್ಸ್ ಈ ಪಾಟಿ ಇರೋದು ಸಿನಿಮಾಗೆ ಒಳಿತೇನೋ ಆದ್ರೆ ನೋಡುಗ ವರ್ಗಕ್ಕೆ, ಸಮಾಜಕ್ಕೆ ಮಾತ್ರ ಕಂಡಿತ ಶುಭವಲ್ಲ.
ಯಶ್, ರಣ್‌ಬೀರ್, ಉನ್ನಿ ಆಯ್ತು.. ಈಗ ಶಾಹಿದ್ ಸರದಿ
ಇವ್ರೇ ನೋಡಿ ಟಾಕ್ಸಿಕ್ ಕ್ರೌರ್ಯಕ್ಕೆ ಕೇರ್ ಆಫ್ ಅಡ್ರೆಸ್..!
ವಿಶಾಲ್ ಭಾರದ್ವಜ್ ನಿರ್ದೇಶನದ ಓ ರೋಮಿಯೋ ವ್ಯಾಲಂಟೈನ್ಸ್ ಡೇ ವಿಶೇಷ ಫೆಬ್ರವರಿ 13ಕ್ಕೆ ತೆರೆಗಪ್ಪಳಿಸುತ್ತಿದೆ. ಈ ಟೀಸರ್ ನೋಡಿದ್ಮೇಲೆ ಅನಿಸ್ತಿರೋದು ಒಂದೇ.. ಇತ್ತೀಚೆಗೆ ಅದ್ಯಾಕೋ ನಮ್ಮ ಪ್ಯಾನ್ ಇಂಡಿಯನ್ ಸಿನಮಾಗಳ ಕಥಾವಸ್ತು ಕ್ರೌರ್ಯ ಹಾಗೂ ಸೆಕ್ಸ್ ಮೇಲೆ ಜಾಸ್ತಿ ಫೋಕಸ್ ಆಗ್ತಿದೆಯಾ ಅನಿಸ್ತಿದೆ. ಕೆಜಿಎಫ್‌ನಲ್ಲಿ ಯಶ್, ಮಾರ್ಕೋದಲ್ಲಿ ಉನ್ನಿ ಮುಕುಂದನ್ ಹಾಗೂ ಅನಿಮಲ್‌ನಲ್ಲಿ ರಣ್‌ಬೀರ್ ಕಪೂರ್ ಬಳಿಕ ಇದೀಗ ಶಾಹಿದ್ ಕಪೂರ್ ಸರದಿ ಅನಿಸ್ತಿದೆ.
ಗನ್ ಹಿಡಿದು ಬುಲೆಟ್‌ಗಳ ಸುರಿಮಳೆಗೈದು ದೀಪಾವಳಿ ಮಾಡುವ ದೃಶ್ಯಗಳು. ಲೀಟರ್‌ಗಟ್ಟಲೆ ರಕ್ತ ಹರಿಸುವ ಬ್ಲಡಿ ಡೆಡ್ಲಿ ಫೈಟ್‌ಗಳು ಈ ಸಿನಿಮಾಗಳಲ್ಲಿರೋ ಸಾಮ್ಯತೆ ವಿಷಯಗಳು. ರಾಕಿಭಾಯ್ ಯಶ್ ತಮ್ಮ ತಾಯಿಗೆ ನೀಡಿದ ಮಾತಿನಂತೆ ಶ್ರೀಮಂತನಾಗೋಕೆ ಅಂಥದ್ದೇ ದೊಡ್ಡ ಆನೆ ಆದ್ರೂ ಹೊಡೀತಾನೆ. ಎಷ್ಟೇ ತಲೆಗಳು ಬೇಕಾದ್ರೂ ಉರುಳಿಸ್ತಾನೆ. ಕೆಜಿಎಫ್ ಮೊದಲ ಭಾಗದ ಓಪನಿಂಗ್ ಸೀನ್‌ನಲ್ಲೇ ಹ್ಯಾಪಿ ಬರ್ತ್ ಡೇ ಟು ಯು ಅಂತ ಬರೋ ಯಶ್ ರಕ್ತಸ್ನಾನ ಮಾಡಿಯೇ ಬಂದಂತಿದೆ.
ಮಲಯಾಳಂನ ಮಾರ್ಕೋ ಸಿನಿಮಾದ ವಯಲೆನ್ಸ್‌ಗೆ ಬೆಚ್ಚಿಬಿದ್ದ ಜನ, ಅದ್ರ ಸೀಕ್ವೆಲ್ ಅಂತೂ ನಿರೀಕ್ಷೆ ಮಾಡಲಿಲ್ಲ. ಪ್ರೇಕ್ಷಕರಿಂದ ಬಂದಂತಹ ಮಿಶ್ರ ಪ್ರತಿಕ್ರಿಯೆಗೆ ನಾಯಕನಟ ಉನ್ನಿ ಮುಕುಂದನ್ ಅವ್ರೇ ಎರಡನೇ ಭಾಗ ಮಾಡೋ ನಿರ್ಧಾರ ಬದಲಿಸಿಬಿಟ್ಟರು. ವುಡ್ ಕಟರ್ ಮೂಲಕ ಇಂಗ್ಲಿಷ್‌ನ ರಾಂಗ್ ಟರ್ನ್ ಮೂವಿಯಂತೆ ಮನುಷ್ಯರನ್ನ ಕತ್ತರಿಸುವ, ರಕ್ತದೋಕುಳಿ ಮಾಡುವ ಮಾರ್ಕೋ ಸಿನಿಮಾದಲ್ಲಿ ಭಯಾನಕ ವಯಲೆನ್ಸ್ ಇತ್ತು. ಮಿಗಿಲಾಗಿ ಡೆಲಿವರಿ ವೇಳೆ ಖಳನಾಯಕ ತಾಯಿಯ ಹೊಟ್ಟೆಯಿಂದ ಮಗುವನ್ನು ಹೊರತಳ್ಳಿ, ಕತ್ತಿಯಿಂದ ಆ ಮಗು ಹಾಗೂ ತಾಯಿಯ ಕರುಳಬಳ್ಳಿ ಕತ್ತರಿಸಿ, ಆ ಮಗುನ ಕೂಡ ಕೊಲ್ಲೋಕೆ ಮುಂದಾಗುವಂತಹ ನೀಚ ಕೃತ್ಯಕ್ಕೆ ಈ ಸಿನಿಮಾ ಸಾಕ್ಷಿಯಾಗಿರೋದು ಈ ಶತಮಾನದ ಬಹುದೊಡ್ಡ ದುರ್ದೈವವೇ ಸರಿ.
ಓ ರೋಮಿಯೋ ಆ ರೋಮಿಯೋ-ಜೂಲಿಯೆಟ್ ಕಥೆ ಅಲ್ಲ
ಪ್ರೀತಿಗಾಗಿ ರಕ್ತ ಹರಿಸೋ ರೋಮಿಯೋ ಈ ಶಾಹಿದ್ ಕಪೂರ್
ಇನ್ನೋ ತಂದೆಗೆ ಯಾರೋ ಗನ್‌ನಿಂದ ಶೂಟ್ ಮಾಡಿದ ಅನ್ನೋ ಕಾರಣಕ್ಕೆ ಅವನ ತಲೆ ಹೊಡೆದುರಳಿಸಿ ತಂದು ನಿಮ್ಮ ಪಾದದಡಿ ಇಡ್ತೀನಿ ಅಂತ ಶಪಥ ಮಾಡುವ ಮಗನ ಕಥೆ ಅನಿಮಲ್. ರಣ್‌ಬೀರ್ ಕಪೂರ್ ಇದೇ ಮೊದಲ ಬಾರಿಗೆ ಅಷ್ಟೊಂದು ವಯಲೆಂಟ್ ಪಾತ್ರ ಮಾಡಿದ್ರು. ಸಂದೀಪ್ ರೆಡ್ಡಿ ವಂಗಾ ಆ ಪಾತ್ರವನ್ನ ರಕ್ತದಿಂದಲೇ ಡಿಸೈನ್ ಮಾಡಿದ್ರು. ಈ ಸಿನಿಮಾದಲ್ಲಿ ಹೆಣ್ಣನ್ನ ಕೀಳಾಗಿ ತೋರಿಸಿರೋ ಪರಿ, ಸೆಕ್ಸ್ ಟೂಲ್ ಆಗಿ ಬಳಿಸಿಕೊಂಡಿರೋದು ನಿಜಕ್ಕೂ ನೀಚತನ ಅನಿಸಲಿದೆ. ಅದ್ರಲ್ಲೂ ಅಕ್ಷರಶಃ ಅನಿಮಲ್ ರೀತಿ ಬದಲಾಗೋ ಹೀರೋ ವರ್ತನೆಗಳು ನೋಡುಗರಿಗೆ ಮುಜುಗರ ತರಿಸಿದ್ದು ಸುಳ್ಳಲ್ಲ.
ಇದೀಗ ಟಾಕ್ಸಿಕ್ ಟೀಸರ್ ಕೂಡ ಅದ್ರಿಂದ ಹೊರತಾಗಿಲ್ಲ. ವಯಲೆನ್ಸ್ ಹಾಗೂ ಸೆಕ್ಸ್‌ಗೆ ಕೇರ್ ಆಫ್ ಅಡ್ರೆಸ್‌ನಂತಿರೋ ಟಾಕ್ಸಿಕ್ ಟೀಸರ್‌ಗೆ ಈಗಾಗ್ಲೇ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಮೊನ್ನೆಯಷ್ಟೇ ಟಾಕ್ಸಿಕ್ ಟೀಸರ್ ನೋಡಿ, ಇನ್ನೂ ಜನ ಅದ್ರಿಂದ ಹೊರಬರಲಾಗದೆ ಇದೇನ್ ಟಾಕ್ಸಿಕ್ ಗುರು ಅಂತಿದ್ದಾರೆ. ಅಷ್ಟರಲ್ಲೇ ಓ ರೋಮಿಯೋ ಆಟ ಶುರುವಾಗಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಗ್ಯಾಪ್ ಕೊಡದೆ ಡೋಸ್ ಮೇಲೆ ಡೋಸ್ ಕೊಟ್ರೆ ಪ್ರೇಕ್ಷಕರು ತಡೆದುಕೊಳ್ಳೋದಾದ್ರೂ ಹೇಗೆ ನೀವೇ ಹೇಳಿ..?
/newsfirstlive-kannada/media/media_files/2026/01/08/toxic-2026-01-08-14-00-09.jpg)
ಇದು ನಿಜಕ್ಕೂ ಬದಲಾಗಬೇಕಿದೆ. ಹೀಗೆ ಮಾಡಿದ ಎಲ್ಲಾ ಸಿನಿಮಾಗಳು ನಿರೀಕ್ಷೆಗೂ ಮೀರಿದ ಹಣ ಮಾಡಿದವು. ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಹಿಟ್ಸ್ ಅನಿಸಿಕೊಂಡವು. ಆದ್ರೆ ಕಿಂಚಿತ್ತಾದ್ರೂ ಮಾನವೀಯತೆ ಬೇಡವೇ..? ಸಮಾಜಕ್ಕೆ ಇಂತಹ ಚಿತ್ರಗಳಿಂದ ಸಿಗುವ ಸಂದೇಶವಾದ್ರೂ ಏನು..? ಕೆಟ್ಟದನ್ನ ಮ್ಯಾಗ್ನೆಟ್‌ನಂತೆ ಬೇಗ ಸೆಳೆಯುವ ಜನರಿಗೆ ಇಂಥದ್ದನ್ನ ತೋರಿಸಿದ್ರೆ ಅವ್ರು ಬಹುಬೇಗ ಪ್ರಭಾವಿತರಾಗ್ತಾರೆ ಅನ್ನೋ ಕನಿಷ್ಟ ಜ್ಞಾನವಾದ್ರೂ ಬೇಕಲ್ಲವೇ..? ಸಿನಿಮಾದ ಮೂಲ ಉದ್ದೇಶ ಮನರಂಜನೆ. ಎರಡನೆಯದ್ದು ವ್ಯಾಪಾರ. ಮೂರನೆಯದ್ದು ಸಂದೇಶ. ಆದ್ರೆ ಹಣಕ್ಕಾಗಿ ಏನೆಲ್ಲಾ ಆಗ್ತಿದೆ..? ಎತ್ತ ಸಾಗುತ್ತಿದೆ ಚಿತ್ರರಂಗ ಅನ್ನೋದಕ್ಕೆ ಮಾತ್ರ ಉತ್ತರ ಕಂಡುಕೊಳ್ಳಬೇಕಿದೆ. ಜನರ ಮನಸ್ಥಿತಿ ಬದಲಾಗದ ಹೊರತು ಇಂತಹ ಸಿನಿಮಾಗಳು ಮಾಡುವ ಫಿಲ್ಮ್ ಮೇಕರ್‌ಗಳ ಪರಿಸ್ಥಿತಿ ಕೂಡ ಬದಲಾಗದು ಅನ್ನೋದಷ್ಟೇ ಸ್ಪಷ್ಟ.





