ದಿ ವೆಯ್ಟ್ ಈಸ್ ಓವರ್. ಬ್ಯಾಂಗಲ್ ಬಂಗಾರಿ ಸಾಂಗ್, ಅಪ್ಪು ಜಾಕಿ ಫ್ಲೇವರ್‌ನಲ್ಲಿನ ಯುವ ಸ್ಟೈಲು, ಖದರ್‌ನಿಂದ ಹಲ್‌ಚಲ್ ಎಬ್ಬಿಸಿದ್ದ ಎಕ್ಕ ಮೂವಿ ಪ್ರೇಕ್ಷಕರ ಮುಂದೆ ಬಂದಾಯ್ತು. 75 ದಿನ, 65 ಲೊಕೇಷನ್ಸ್, 3 ಪ್ರೊಡಕ್ಷನ್ ಬ್ಯಾನರ್‌ಗಳಿಂದ ಆಗಿರೋ ಎಕ್ಕ ಕಥೆ ಏನು..? ಯುವ ಪರ್ಫಾಮೆನ್ಸ್ ಹೇಗಿದೆ..? ಚಿತ್ರಪ್ರೇಮಿಗಳು ಶಿಳ್ಳೆ, ಚಪ್ಪಾಳೆ ಹೊಡೆದ್ರಾ..?
ದೊಡ್ಮನೆ ಹುಡ್ಗ ಯುವರಾಜ್‌ಕುಮಾರ್ ನಟನೆಯ ಎರಡನೇ ಸಿನಿಮಾ ಎಕ್ಕ. ಯುವ ಚಿತ್ರದ ಬಳಿಕ ಯುವರಾಜ್ ಮತ್ತಷ್ಟು ಪಳಗಿ, ಮಾಗಿ, ಪಕ್ವತೆಯಿಂದ ಮಾಡಿರೋ ಸಿನಿಮಾ ಎಕ್ಕ. ಒಂದಲ್ಲ ಎರಡಲ್ಲ ಮೂರು ಬಿಗ್ ಪ್ರೊಡಕ್ಷನ್ ಬ್ಯಾನರ್‌ಗಳು ಕೂಡ ಮಾಡಿರೋ ಸಿನಿಮಾ ಇದಾಗಿದ್ದು, ಅತೀವ ನಿರೀಕ್ಷೆ ಮೂಡಿಸಿತ್ತು. ಸುಮಾರು 75 ದಿನಗಳ ಕಾಲ, 65 ಲೊಕೇಷನ್ಸ್‌ನಲ್ಲಿ ಚಿತ್ರಿತಗೊಂಡ ಎಕ್ಕ ಸದ್ಯ ಬೆಳ್ಳಿತೆರೆ ಬೆಳಗುತ್ತಿದೆ.
ಬ್ಯಾಂಗಲ್ ಬಂಗಾರಿ ಸಾಂಗ್ ಹಾಗೂ ಅಪ್ಪು ಜಾಕಿ ಖದರ್‌ನಲ್ಲಿರೋ ಯುವ ಸ್ಯಾಂಪಲ್ಸ್‌ನಿಂದಲೇ ಎಕ್ಕ ಸಂಥಿಂಗ್ ಇಂಟರೆಸ್ಟಿಂಗ್ ಅನಿಸಿತ್ತು. ಇದೀಗ ಎಲ್ಲೆಡೆ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಅದ್ರಲ್ಲೂ ಅಪ್ಪು ಟೆರಿಟರಿ ಆಗಿರೋ ಬಳ್ಳಾರಿಯಲ್ಲಿ ಮುಂಜಾನೆ 6 ಗಂಟೆಯಿಂದಲೇ ಶೋಗಳು ಬಿಗಿನ್ ಆಗಿವೆ. ಯುವರಾಜನನ್ನ ರಾಜರತ್ನನಂತೆ ಅಭಿಮಾನಿ ದೇವರುಗಳು ಬರಮಾಡಿಕೊಂಡಿರೋ ಪರಿ ಸಖತ್ ಇಂಟರೆಸ್ಟಿಂಗ್ ಆಗಿದೆ.
ಕಟೌಟ್‌ಗಳಿಗೆ ಹಾಲಿನ ಅಭಿಷೇಕ, ಹೂಮಾಲೆಗಳನ್ನ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ದೊಡ್ಮನೆಯ ಫೇವರಿಟ್ ಥಿಯೇಟರ್ ಸಂತೋಷ್‌ನಲ್ಲೇ ಎಕ್ಕ ತೆರೆಕಂಡಿದ್ದು, ಹಬ್ಬದ ರೀತಿ ಸೆಲೆಬ್ರೇಟ್ ಮಾಡಿದ್ದಾರೆ ದೊಡ್ಮನೆ ಡೈ ಹಾರ್ಡ್ ಫ್ಯಾನ್ಸ್. ಹಾಗಾದ್ರೆ ಸಿನಿಮಾ ಹೇಗಿದೆ..? ಪ್ಲಸ್ ಏನು ಮೈನಸ್ ಏನು..? ಬನ್ನಿ ರಿವ್ಯೂ ನೋಡ್ಕೊಂಡ್ ಬರೋಣ.
ಬೆಂಗಳೂರು ಭೂಗತಲೋಕದಲ್ಲಿ ಗುರ್ತಿಸಿಕೊಂಡ ಮುತ್ತು ವಾರಣಾಸಿಯಲ್ಲಿ ತಲೆಮರೆಸಿಕೊಂಡಿರುತ್ತಾನೆ. ಪ್ರೇಯಸಿಯಿಂದಲೇ ಪೊಲೀಸರ ಕೈಗೆ ಸಿಕ್ಕಿಬೀಳುವಂತಾಗುತ್ತದೆ. ಬಳಿಕ ಅವನ ಹಳೆಯ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತೆ. ಪಾರ್ವತಿಪುರದ ಮುತ್ತು ದೊಡ್ಡ ಸಂಕಷ್ಟದಿಂದ ಪಾರಾಗಿ ನೆಮ್ಮದಿ ಜೀವನ ನಡೆಸಲು ಬೆಂಗಳೂರಿಗೆ ಬರಬೇಕಾಗುತ್ತದೆ. ಮಗುವಿನಂತ ಮನಸ್ಸಿನ ಮುತ್ತು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಮೃಗದಂತಾಗುತ್ತಾನೆ. ಅದಕ್ಕೆ ಕಾರಣ ಏನು? ಪೊಲೀಸರಿಂದ ಬಂಧನವಾದ ಆತನ ಮುಂದಿನ ಕಥೆ ಏನು ಅಂತ ತೆರೆಮೇಲೆ ನೋಡಬೇಕು.
ನಟನೆ ವಿಚಾರದಲ್ಲಿ ಯುವರಾಜ್‌ಕುಮಾರ್ ಮೊದಲ ಚಿತ್ರಕ್ಕಿಂತ ಮಾಗಿದ್ದಾರೆ. ಆದ್ರೆ ಯುವ ಇನ್ನಷ್ಟು ಚೆನ್ನಾಗಿ ಅಭಿನಯಿಸಬಹುದಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ. ಯುವ ಕ್ಯಾಬ್ ಡ್ರೈವರ್ ಮುತ್ತು ಆಗಿ ಇಷ್ಟವಾಗುತ್ತಾರೆ. ಇನ್ನು ಡ್ಯಾನ್ಸ್ ಹಾಗೂ ಫೈಟ್ಸ್ ವಿಚಾರದಲ್ಲಿ ಜಬರ್ದಸ್ತ್ ಪರ್ಫಾರ್ಮನ್ಸ್ ನೀಡಿದ್ದಾರೆ. ನಂದಿನಿ ಆಗಿ ಸಂಜನಾ ಆನಂದ್ ಇಷ್ಟವಾಗುತ್ತಾರೆ. ಬಾರ್ ಗರ್ಲ್ ಮಲ್ಲಿಕಾ ಪಾತ್ರದಲ್ಲಿ ಸಂಪದಾ ಕಾಣಿಸಿಕೊಂಡಿದ್ದಾರೆ. ಡಾನ್ ಮಸ್ತಾನ್ ಭಾಯ್ ಆಗಿ ಅತುಲ್ ಕುಲಕರ್ಣಿ, ಮುತ್ತು ತಾಯಿ ರತ್ನ ಪಾತ್ರದಲ್ಲಿ ಶ್ರುತಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಖಡಕ್ ಪೋಲಿಸ್ ಆಫೀಸರ್ ಆಗಿ ಆದಿತ್ಯಾ ಅಬ್ಬರಿಸಿದ್ದರೂ ಆ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ನಾಯಕಿ ನಂದಿನಿ ಸಹೋದರ ಒಂಟೆ ಪಾತ್ರದಲ್ಲಿ ಜಾಕಿ ತಿಮ್ಮೇಗೌಡ ನೆನಪಿನಲ್ಲಿ ಉಳಿಯುತ್ತಾರೆ.