ದತ್ತಾಭಾಯ್ ಅವರು ‘ಸುಂದರವಾಗಿರುವ ಹುಡುಗಿಯರು ಮೋಸ ಮಾಡುತ್ತಾರೆ’ ಎಂಬ ನಂಬಿಕೆಯನ್ನು ಗಟ್ಟಿಯಾಗಿ ಹಿಡಿದಿದ್ದಾರೆ. ಈ ನಂಬಿಕೆಗೆ ವಿರುದ್ಧವಾಗಿ, ಅವರ ಜೀವನದಲ್ಲಿ ಪ್ರವೇಶಿಸಿದವಳು ದೃಷ್ಟಿ. ತನ್ನ ನೈಜ ಸೌಂದರ್ಯವನ್ನು ಮರೆಮಾಚಲು ಕಪ್ಪು ಬಣ್ಣ ಹಚ್ಚಿಕೊಳ್ಳುವ ಈ ಹುಡುಗಿಯೊಂದಿಗೆ ವಿಧಿ ಒಂದುಗೂಡಿಸಿತು. ಜೀವ ಕಾಪಾಡಿದ ಸನ್ನಿವೇಶ, ಅನುಬಂಧ ಮತ್ತು ಅವಿಭಾಜ್ಯ ಪ್ರೀತಿಯಿಂದ ದತ್ತ-ದೃಷ್ಟಿಯರ ಬಾಳ್ವೆ ಜೊತೆಜೊತೆಯಾಗಿ ಹೆಣೆದುಕೊಂಡಿತು.
ಆದರೆ, ದತ್ತನ ಜೀವನಕ್ಕೆ ದೃಷ್ಟಿ ಬಂದಿದ್ದು ಶರಾವತಿಗೆ ಸಹಿಸಲಾಗದ ವಿಷಯ. ಅವಳ ಎಲ್ಲ ಕುತಂತ್ರಗಳನ್ನೂ ಮುರಿದು, ದತ್ತನ ರಕ್ಷಣೆಯ ಗೋಡೆಯಾಗಿ ನಿಂತ ದೃಷ್ಟಿಗೆ ಸಮಸ್ಯೆಗಳು ಅಡ್ಡಲಾಗಿವೆ. ಎಲ್ಲ ತೊಂದರೆಗಳನ್ನೂ ದಾಟಿ, ದತ್ತನೊಂದಿಗೆ ಸುಖದ ಸಂಸಾರವನ್ನು ಶುರು ಮಾಡಲು ಸಿದ್ಧಳಾಗುತ್ತಿದ್ದ ಅವಳ ಮುಂದೆ ಈಗ ಜೀವನದ ಅತಿದೊಡ್ಡ ಸವಾಲು ನಿಂತಿದೆ.
ಶರಾವತಿಯ ದುಷ್ಟ ಯೋಜನೆಗೆ ಬಲಿಯಾದವಳು ದೃಷ್ಟಿಯ ಅಕ್ಕ ಸೀಮಾ. ದೃಷ್ಟಿ ಎಲ್ಲರಿಂದ ದಾಚಿಟ್ಟಿದ್ದ ರಹಸ್ಯ ಈಗ ಶರಾವತಿಗೆ ತಿಳಿದುಹೋಗಿದೆ. ಸೀಮಾಗೆ ತಂಗಿಯ ಜೀವನ ನಾಶವಾಗಬೇಕೆಂದು ಇಲ್ಲದಿದ್ದರೂ, ಶರಾವತಿಯ ಒತ್ತಡದ ಮುಂದೆ ಅವಳು ಮೌನವಾಗಿರಲು ಸಾಧ್ಯವಿಲ್ಲ.
ಇದೇ ಸಮಯದಲ್ಲಿ, ಶರಾವತಿಯ ಬಲಗೈ ಥರಹ ಇರುವ ಕರೀಂ ದುಬೈಯಿಂದ ಬಳ್ಳಾರಿ ಬಂದು ದತ್ತನನ್ನು ಸಂಹರಿಸಲು ಚಕ್ರವ್ಯೂಹ ರಚಿಸಿದ್ದಾನೆ. ಸೀಮಾಳನ್ನು ಸಾವು-ಬದುಕಿನ ಸ್ಥಿತಿಗೆ ತಳ್ಳಿ, ದತ್ತನನ್ನು ದೂರಕ್ಕೆ ಕಳಿಸಿ, ದೃಷ್ಟಿಯನ್ನು ಅಪಹರಣ ಮಾಡಿದ್ದಾನೆ. ದತ್ತನು ದೃಷ್ಟಿಯನ್ನು ಹುಡುಕಲು ಧಾವಿಸಿದಾಗ, ದೃಷ್ಟಿಯು ಮುಚ್ಚಿಟ್ಟಿದ್ದ ಸತ್ಯವು ಬಹಿರಂಗವಾಗುವ ಸನ್ನಿವೇಶ ಸೃಷ್ಟಿಯಾಗಿದೆ.
ಸುಂದರ ಮುಖಗಳ ಮೇಲೆ ಅವಿಶ್ವಾಸ ಹೊಂದಿರುವ ದತ್ತಾಭಾಯ್‌ಗೆ, ನಂಬಿಕೆದ್ರೋಹಿಗಳನ್ನು ಕ್ಷಮಿಸುವ ಸ್ವಭಾವವಿಲ್ಲ. ದೃಷ್ಟಿಯೇ ತನ್ನ ಜಗತ್ತು ಎಂದು ಭಾವಿಸಿದ್ದ ಅವನಿಗೆ, ಅವಳು ಮರೆಮಾಚಿದ್ದ ಸತ್ಯವು ತಿಳಿದರೆ ಏನಾಗಬಹುದು? ಅವಳ ಅಸ್ತಿತ್ವವೇ ಸುಳ್ಳು ಎನಿಸಿಕೊಳ್ಳಬಹುದೇ? ಹೊಸದಾಗಿ ಮೊಳಕೆಯೊಡೆದ ಪ್ರೇಮವು ನಾಶವಾಗಬಹುದೇ? ಅಥವಾ, ದತ್ತನು ದೃಷ್ಟಿಯ ಕಷ್ಟಗಳನ್ನು ಅರ್ಥಮಾಡಿಕೊಂಡು, ಅವಳನ್ನು ಸ್ವೀಕರಿಸುತ್ತಾನೆಯೇ?
ಸ್ವ-ರಕ್ಷಣೆಗಾಗಿ ತನ್ನ ನಿಜವಾದ ಗುರುತನ್ನು ಮರೆಮಾಚಿದ ದೃಷ್ಟಿ ಈಗ ಗಂಭೀರ ಸಂಕಟದಲ್ಲಿದ್ದಾಳೆ. ಹೇಳಲಾಗದ ಪರಿಸ್ಥಿತಿಗಳಿಗೆ ಸಿಕ್ಕಿಬಿದ್ದು, ತನ್ನ ರಹಸ್ಯವನ್ನು ಹಂಚಿಕೊಳ್ಳಲು ಸಿದ್ಧಳಾಗುತ್ತಿದ್ದ ಹೊತ್ತಿನಲ್ಲೇ ಅಪಹರಣಕ್ಕೊಳಗಾಗಿದ್ದಾಳೆ.
ದತ್ತಾಭಾಯ್‌ನ ಬಳಿಗೆ ಮರಳುವಾಗ, ಮಳೆಯ ನೀರಿನಲ್ಲಿ ಅವಳ ದೇಹದ ಕಪ್ಪು ಬಣ್ಣ ಕಳಚಿ ಬೀಳುವ ಸಂಭವವಿದೆ. ವರ್ಷಗಳ ಕಾಲ ಮುಸುಕಿನ ಹಿಂದೆ ಮರೆಮಾಚಿದ್ದ ತನ್ನ ನೈಜ ರೂಪವು ಎಲ್ಲರ ಮುಂದೆ ಬಹಿರಂಗವಾಗುವ ಈ ಕ್ಷಣದಲ್ಲಿ ದೃಷ್ಟಿಯ ಮನಸ್ಥಿತಿ ಹೇಗಿರಬಹುದು? ಶರಾವತಿಯು ತನ್ನ ದುಷ್ಟ ಯೋಜನೆಯಲ್ಲಿ ಯಶಸ್ವಿಯಾಗುವಳೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು, ಪ್ರತಿದಿನ ಸಂಜೆ 6 ಗಂಟೆಗೆ ಈ ಧಾರಾವಾಹಿಯನ್ನು ನೋಡಿ.