ಸಾಲು ಸಾಲು ಸಂಕಷ್ಟಗಳ ನಡುವೆ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ದೇವರ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಬೇಲ್ ಹೋರಾಟ ಮುಂದುವರಿದಿರುವ ಸಂದರ್ಭದಲ್ಲಿ ದರ್ಶನ್ ದಂಪತಿ ದೇವಾಲಯಗಳ ಭೇಟಿ ನೀಡಿದ್ದಾರೆ. ಇತ್ತೀಚೆಗೆ, ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಆರೋಪ ಮಾಡಿದ್ದರೆ, ದರ್ಶನ್ ಮತ್ತು ವಿಜಯಲಕ್ಷ್ಮೀ ಶಕ್ತಿಪೀಠ ಕಾಮಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಭೇಟಿಯ ಫೋಟೋವನ್ನು ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಅವರು ಬರೆದ ಸಂದೇಶವು ಎಲ್ಲರ ಗಮನ ಸೆಳೆದಿದೆ. “ಹೆಚ್ಚಿನ ಜನರು ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾನೆ. ದೇವರು ನಿಮ್ಮನ್ನು ಆಶೀರ್ವದಿಸಲಿ.” ಎಂದು ಬರೆದುಕೊಂಡಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಷಿ ದೇವಸ್ಥಾನವು ಭಾರತದ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಗುವಾಹಟಿಯ ನಿಲಾಚಲ್ ಬೆಟ್ಟದ ಮೇಲಿರುವ ಈ ದೇವಾಲಯದಲ್ಲಿ ಕಾಮಾಕ್ಷಿ ದೇವಿಯ ಯೋನಿ ರೂಪವನ್ನು ಪೂಜಿಸಲಾಗುತ್ತದೆ, ಯಾಕೆಂದರೆ ಇಲ್ಲಿ ದೇವಿಯ ವಿಗ್ರಹವಿಲ್ಲ. ಈ ದೇವಾಲಯವು ಶಕ್ತಿಶಾಲಿ ದೇವತೆಯ ಕ್ಷೇತ್ರವೆಂದು ಪ್ರಸಿದ್ಧವಾಗಿದೆ.
ಕಾಮಾಕ್ಷಿ ದೇವಸ್ಥಾನವು ಗಣ್ಯ ವ್ಯಕ್ತಿಗಳಿಗೆ, ರಾಜಕಾರಣಿಗಳಿಗೆ ಮತ್ತು ಉದ್ಯಮಿಗಳಿಗೆ ನೆಚ್ಚಿನ ತಾಣವಾಗಿದೆ. ದರ್ಶನ್ ದಂಪತಿಯೂ ಈ ದೇವಾಲಯಕ್ಕೆ ಆಗಾಗ ಭೇಟಿ ನೀಡುತ್ತಾರೆ. ಈ ಬಾರಿ, ದರ್ಶನ್ ಜೊತೆಗೆ ವಿಜಯಲಕ್ಷ್ಮೀ ಕಾಮಾಕ್ಷಿ ಕ್ಷೇತ್ರಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಭೇಟಿಯು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ವಿಶೇಷವಾಗಿ ವಿಜಯಲಕ್ಷ್ಮೀಯವರ ಸಂದೇಶವು ದರ್ಶನ್‌ರ ಸಂಕಷ್ಟದ ಸಮಯದಲ್ಲಿ ಆಶಾದಾಯಕವಾಗಿದೆ.





