ಬೆಂಗಳೂರು: ರಾಜ್ಯದ ‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳು ತಮ್ಮ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ದೇವಸ್ಥಾನಗಳ ಹೆಸರಲ್ಲಿ ಭೂಮಿ ಖರೀದಿಸಬೇಕು ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಮಹತ್ವದ ಸೂಚನೆ ನೀಡಿದ್ದಾರೆ. ಈ ಮೂಲಕ ದೇವಸ್ಥಾನಗಳ ಆಸ್ತಿಯನ್ನು ಶಾಶ್ವತವಾಗಿ ಹೆಚ್ಚಿಸುವುದರ ಜೊತೆಗೆ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನಗಳ ಅಭಿವೃದ್ಧಿ, ಹುಂಡಿ ಹಣದ ಸುರಕ್ಷತೆ ಹಾಗೂ ಮುಜರಾಯಿ ಆಸ್ತಿಗಳ ಸಂರಕ್ಷಣೆ ಕುರಿತು ಹಲವು ಮಹತ್ವದ ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಿದರು.
ಇಂದು ವಿಧಾನಸೌಧದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ ನಡೆಸಿ, ಸದಸ್ಯರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಬಳಿಕ ನೀಡಿದ ಅಗತ್ಯ ನಿರ್ದೇಶನಗಳು ಹೀಗಿವೆ..
ರಾಜ್ಯದಲ್ಲಿನ ‘ಎ’ ವರ್ಗ ಮತ್ತು ‘ಬಿ’ ವರ್ಗದ ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಸಬೇಕು.
ದೇವಸ್ಥಾನಗಳಲ್ಲಿ ಸಾಕಷ್ಟು ಹಣವಿದೆ. ಅಭಿವೃದ್ಧಿ ಕಾರ್ಯಗಳ ಜೊತೆಗೆ ದೇವಸ್ಥಾನದ ಹೆಸರಿಗೆ… pic.twitter.com/qIRKTNQZBl
— Dr. G Parameshwara (@DrParameshwara) August 1, 2026
ದೇವಸ್ಥಾನಗಳ ಹುಂಡಿ ಹಣದ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಎಲ್ಲಾ ಹುಂಡಿಗಳ ಮೇಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕೆಲಸವನ್ನು ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಡಿಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು.
ರಾಜ್ಯದ ಹಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಇನ್ನೂ ಮೂಲಭೂತ ಸೌಲಭ್ಯಗಳ ಕೊರತೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ನಾನು ಭೇಟಿ ನೀಡಿದ ಕೆಲವು ದೇವಸ್ಥಾನಗಳ ಸ್ಥಿತಿ ನೋಡಿದಾಗ ನಾವು ಯಾವ ಯುಗದಲ್ಲಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಜವಾಬ್ದಾರಿಯುತ ನಿರ್ವಹಣೆ ಇಲ್ಲದಿರುವುದು ಆತಂಕಕಾರಿ” ಎಂದು ಹೇಳಿದರು.
ದೇವಸ್ಥಾನಗಳ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಪರಮೇಶ್ವರ್, ಪ್ರತಿಯೊಂದು ಪ್ರಮುಖ ದೇವಸ್ಥಾನಕ್ಕೂ ಮಾಸ್ಟರ್ ಪ್ಲಾನ್ ರೂಪಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಜೊತೆಗೆ ‘ಸಿ’ ವರ್ಗದ ದೇವಸ್ಥಾನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳಿಗೆ ದತ್ತು ನೀಡಬಾರದು, ಏಕೆಂದರೆ ಭವಿಷ್ಯದಲ್ಲಿ ದೇವಸ್ಥಾನದ ಆಸ್ತಿಯ ಮೇಲೆಯೇ ಹಕ್ಕು ವಿವಾದಗಳು ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಇದೇ ವೇಳೆ, ‘ಎ’ ವರ್ಗದ ದೇವಸ್ಥಾನಗಳಿಗೆ ನೀಡುವ ಅನುದಾನದ ಶೇ.10ರಷ್ಟು ಮೊತ್ತವನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕು ಎಂದು ಸೂಚನೆ ನೀಡಿದರು.
ದೇವಸ್ಥಾನಗಳ ಒತ್ತುವರಿಯಾಗಿರುವ ಭೂಮಿಯನ್ನು ಆದ್ಯತೆ ಮೇರೆಗೆ ಸರ್ವೇ ನಡೆಸಿ, ಮೂರು ತಿಂಗಳೊಳಗೆ ತೆರವುಗೊಳಿಸಿ ಮುಜರಾಯಿ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಇದರ ಜೊತೆಗೆ, ಹೊಸ ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಧಿಸೂಚಿತ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರು ಹಾಗೂ ನೌಕರರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.





