ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಲಗೈ ಭಂಟ ಮತ್ತು ಆಪ್ತ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಸಂಕನಗೌಡರ್ ಅವರು ಕಳೆದ ಏಳೆಂಟು ವರ್ಷಗಳಿಂದ ನಾಪತ್ತೆಯಾಗಿದ್ದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ಖಾಕಿ ಪಡೆ ದರ್ಶನ್ ಅವರನ್ನು ಪ್ರಶ್ನಿಸಿದಾಗ, ಮಲ್ಲಿಕಾರ್ಜುನ್ ನಾಪತ್ತೆಯಾದ ವಿಚಾರವೂ ತನಿಖೆಗೆ ಬಂದಿತ್ತು. ಆ ವೇಳೆ “ಮಲ್ಲಿ ಸತ್ತು ಹೋಗಿರಬಹುದು. ದರ್ಶನ್ ಆತನನ್ನು ಮುಗಿಸಿ ತೋಟದ ಮನೆಯಲ್ಲಿ ಹೂತು ಹಾಕಿರಬಹುದು” ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಹರಿದಾಡಿದ್ದವು. ಆದರೆ ಈಗ, ಮಲ್ಲಿಕಾರ್ಜುನ್ ಅವರೇ ಸ್ವತಃ ಒಂದು ಪತ್ರದ ಮೂಲಕ ಮಾಧ್ಯಮಗಳ ಮುಂದೆ ಬರಲು ಸಿದ್ಧರಾಗಿದ್ದಾರೆ.
ಮಲ್ಲಿಕಾರ್ಜುನ್ ಬಿ. ಸಂಕನಗೌಡರ್ ಅವರು ಇದ್ದಕ್ಕಿದ್ದಂತೆ ಬೆಂಗಳೂರನ್ನು ತೊರೆದು ನಾಪತ್ತೆಯಾದರು. ರೇಣುಕಾಸ್ವಾಮಿ ಪ್ರಕರಣದ ತನಿಖೆ ವೇಳೆ ಪೊಲೀಸರು ದರ್ಶನ್ ಅವರನ್ನು ವಿಚಾರಿಸಿದಾಗ, ಮಲ್ಲಿಕಾರ್ಜುನ್ ಬಗ್ಗೆ ಮಾಹಿತಿ ಕೇಳಿದ್ದರು. ಆಗ ದರ್ಶನ್ ಅವರು ಅವನು ಎಲ್ಲೂ ಹೋಗಿಲ್ಲ. ಇದ್ದಾನೆ ಅಷ್ಟೇ. ಅವನ ಬಗ್ಗೆ ಜಾಸ್ತಿ ಪ್ರಶ್ನೆ ಮಾಡಬೇಡಿ ಎಂದು ಉತ್ತರಿಸಿದ್ದರು. ಆಗಾಗಿ ಈ ಬಗ್ಗೆ ಅನುಮಾನ ಮತ್ತಷ್ಟು ಹೆಚ್ಚಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ “ಮಲ್ಲಿ ಕೊಲೆಯಾಗಿ ಮಣ್ಣುಮಾಡಲಾಗಿದೆ” ಎಂಬ ವದಂತಿಗಳು ಹರಡಿದ್ದವು.
ಇದೀಗ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುವಂತೆ ಸ್ವತಃ ಮಲ್ಲಿಕಾರ್ಜುನ ಸಂಕನಗೌಡರ್ ಅವರೇ ಮುಂದೆ ಬಂದಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ಪತ್ರದ ಮೂಲಕ ತಿಳಿಸಿದ್ದು, “ನಾನು ಬದುಕಿದ್ದೀನಿ, ಶೀಘ್ರದಲ್ಲೇ ನಿಮ್ಮ ಮುಂದೆ ಬರುತ್ತಿದ್ದೀನಿ” ಎಂದು ಹೇಳಿ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
“ಮಾಧ್ಯಮ ಮಿತ್ರರವರೆಲ್ಲರಿಗೂ ಹೃತ್ಪೂರ್ವಕ ನಮಸ್ಕಾರ. ನಾನು ಮಲ್ಲಿಕಾರ್ಜುನ್ ಬಿ. ಸಂಕನಗೌಡರ. ಮೂಲತಃ ಗದಗದವನು. 18 ವರ್ಷಗಳ ಕಾಲ ನಾನು ಚಲನಚಿತ್ರ ಕ್ಷೇತ್ರದಲ್ಲಿ ಹಲವಾರು ಪ್ರಾಜೆಕ್ಟ್ಗಳಲ್ಲಿ ಸಹಾಯಕ ನಿರ್ದೇಶಕ, ಸಹ ನಿರ್ದೇಶಕ, ನಿರ್ಮಾಪಕ, ವಿತರಕನಾಗಿ ಕೆಲಸ ಮಾಡಿದ್ದೇನೆ.
ಕೆಲವು ಅನಿವಾರ್ಯ ಕಾರಣಗಳಿಂದ ಮತ್ತು ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆ, ನನ್ನ ಬಿಸಿನೆಸ್ನಲ್ಲಿ ನಷ್ಟ ಉಂಟಾಗಿ ಕೆಲವು ವರ್ಷಗಳ ಹಿಂದೆ ನಾನು ಬೆಂಗಳೂರನ್ನು ತಾತ್ಕಾಲಿಕವಾಗಿ ಬಿಡುವಂತಹ ಪರಿಸ್ಥಿತಿ ಬಂತು. ಕೆಲವು ವರ್ಷಗಳಾದ ಮೇಲೆ ಮತ್ತೆ ನಾನು ವಾಪಾಸ್ ಬಂದಿದ್ದೀನಿ.
ನನ್ನ ಮುಂದಿನ ಯೋಜನೆಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡಲು 16-04-2026, ಗುರುವಾರದಂದು ಬೆಳಿಗ್ಗೆ ಹನ್ನೊಂದು ಗಂಟೆಗೆ (11 AM) ಬೆಂಗಳೂರಿನ ಜಿಟಿ ಮಾಲ್, ಎಂಎಂಬಿ ಲೆಗಸಿಯಲ್ಲಿ ನಾನು ಪತ್ರಿಕಾಗೋಷ್ಠಿಯನ್ನು ಇಟ್ಟುಕೊಂಡಿದ್ದೇನೆ. ತಾವೆಲ್ಲರೂ ದಯವಿಟ್ಟು ಬರಬೇಕಾಗಿ ವಿನಂತಿ. ಇಂತಿ ನಿಮ್ಮ ಪ್ರೀತಿಯ ಮಲ್ಲಿಕಾರ್ಜುನ್.” ಎಂದು ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಿಳಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.





