ಶಂಕರ್ ನಿರ್ದೇಶನದ ಹಾಗೂ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ-ರಘು ವರಣ್ ನಟನೆಯ ಒಕೇ ಒಕ್ಕಡು ಮೂವಿ ಬಂದು 27 ವರ್ಷಗಳಾಯ್ತು. ಇಂದಿಗೂ ಅದು ಎವರ್‌ಗ್ರೀನ್. ಇದೀಗ ಅದೇ ಶೈಲಿಯ ಸಿನಿಮಾವೊಂದು ಸ್ಯಾಂಡಲ್‌ವುಡ್ ಅಂಗಳದಲ್ಲಿ ಬೆಳ್ಳಿಪರದೆ ಬೆಳಗಲು ಸಜ್ಜಾಗಿದೆ. ಶ್ರೀಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿ ಸೀಟ್‌ನಲ್ಲಿ ಕುಳಿತರೆ ಏನಾಗುತ್ತೆ ಅನ್ನೋ ಥ್ರಿಲ್ಲಿಂಗ್ ಕಥಾನಕದೊಂದಿಗೆ ಬರ್ತಿದೆ ಕಾಮನ್ ಮ್ಯಾನ್. ಟ್ರೈಲರ್ ಜೊತೆ ಅದ್ರ ಹೈಲೈಟ್ಸ್ ಇಲ್ಲಿದೆ..
- ಅಂದು ಒಕೇ ಒಕ್ಕಡು.. ಇಂದು ಕಾಮನ್‌ಮ್ಯಾನ್.. CM ಕಥೆ
- ಕೆರೆಬೇಟೆ ಗೌರಿಶಂಕರ್ ರಾಜಕೀಯ ವಿಡಂಬನಾತ್ಮಕ ಚಿತ್ರ..!!
- ಅಧಿಕಾರದ ಆಟ ಭ್ರಷ್ಟಾಚಾರದ ಬೇಟೆ.. ಸೆ-25ಕ್ಕೆ ಬಿಗ್‌ಸ್ಕ್ರೀನ್‌ಗೆ
- ನರಸಿಂಹಮೂರ್ತಿ ಡ್ರೀಮ್ ಪ್ರಾಜೆಕ್ಟ್.. ಓಂಸಾಯಿ ಪ್ರಕಾಶ್ ಸಾಥ್
ಕೆರೆಬೇಟೆ ಸಿನಿಮಾದಲ್ಲಿ ತಮ್ಮ ಸಹಜ ಅಭಿನಯದಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದ ರಿಯಲ್ ಟ್ಯಾಲೆಂಟ್ ಗೌರಿಶಂಕರ್, ಈಗ ಬಾಕ್ಸ್ ಆಫೀಸ್‌ನಲ್ಲಿ ಕಮರ್ಷಿಯಲ್ ಹೀರೋ ಆಗಿ ಧೂಳೆಬ್ಬಿಸಲು ಪಕ್ಕಾ ಪ್ಲಾನ್ ಮಾಡಿಕೊಂಡು ಬರ್ತಿದ್ದಾರೆ. ಸದ್ಯ ಕಾಮನ್ ಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಸಂವಿಧಾನ ಹಾಗೂ ವ್ಯವಸ್ಥೆಯ ವಿರುದ್ಧದ ಹೋರಾಟ, ಕುರ್ಚಿ ಕಾಳಗ ಹಾಗೂ ರಾಜಕೀಯ ಸಂಚಿನ ಕಥಾನಕ ಹೊಂದಿದೆ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿನಯದ ಐಕಾನಿಕ್ ಸಿನಿಮಾ ಮುದಲ್ವನ್ ಅಂದ್ರೆ ಒಕೇ ಒಕ್ಕಡು ಸಿನಿಮಾನ ನೆನಪಿಸುವಂತೆ, ಇಲ್ಲೂ ಒಬ್ಬ ಸಾಮಾನ್ಯ ಯುವಕನಿಗೆ ಅನಿರೀಕ್ಷಿತವಾಗಿ ಅಧಿಕಾರದ ಚುಕ್ಕಾಣಿ ಸಿಕ್ಕರೆ.. ಆತ ಸಿಎಂ ಆಗಿ ಆಡಳಿತ ವ್ಯವಸ್ಥೆ ಮತ್ತು ಭ್ರಷ್ಟ ಸಿಸ್ಟಮ್ ವಿರುದ್ಧ ಹೇಗೆ ಗರ್ಜಿಸುತ್ತಾನೆ ಎಂಬುದೇ ಈ ಚಿತ್ರದ ಅಸಲಿ ಕಥೆ.
ಈ ಚಿತ್ರಕ್ಕೆ ಕೇವಲ ಮಾಸ್ ಮಾತ್ರವಲ್ಲ, ಪಕ್ಕಾ ಕ್ಲಾಸ್ ಮತ್ತು ಸೋಶಿಯಲ್ ಮೆಸೇಜ್‌ನ ತೂಕವೂ ಇದೆ. ಸುರಭಿ ಫಿಲಂಸ್ ಸಂಸ್ಥಾಪಕ, ರಂಗಭೂಮಿ ದಿಗ್ಗಜ ಡಾ. ಎನ್. ನರಸಿಂಹಮೂರ್ತಿ ಅವರು ಸ್ವತಃ ಕಥೆ ಬರೆದು ನಿರ್ಮಿಸಿರುವುದಷ್ಟೇ ಅಲ್ಲದೆ, ಸಿನಿಮಾದಲ್ಲಿ ಪವರ್‌ಫುಲ್ ಸಿಎಂ ಪಾತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಜೊತೆಗೆ ಹಿರಿಯ ನಟ ಅಶೋಕ್ ರಾಜ್ಯಪಾಲರಾಗಿ ಗಂಭೀರ ಪಾತ್ರ ಪೋಷಿಸಿದ್ದಾರೆ. ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್ ಹಾಗೂ ಕಾಮಿಡಿ ಕಿಂಗ್ ಪ್ರಕಾಶ್ ತುಮಿನಾಡು ಕಥೆಗೆ ಮತ್ತಷ್ಟು ಮಸಾಲೆ ಬೆರೆಸಿದ್ದಾರೆ. ಸ್ಯಾಂಡಲ್‌ವುಡ್‌ನ ಸೀನಿಯರ್ ಡೈರೆಕ್ಟರ್ ಓಂ ಸಾಯಿಪ್ರಕಾಶ್ ನಿರ್ದೇಶನದ 106ನೇ ಸಿನಿಮಾ ಇದಾಗಿದ್ದು, ಇದರಲ್ಲಿ ಸಾಮಾಜಿಕ ಕಳಕಳಿ, ಸಾರ್ವಜನಿಕ ಜವಾಬ್ದಾರಿಯ ಅರಿವು ಮೂಡಿಸೋ ಮೆಸೇಜ್ ಇದೆ.
ಚಿತ್ರದ ಮೇಕಿಂಗ್ ಹೈಲೈಟ್ಸ್ ನೋಡಿದ್ರೆ ಕಿವಿಗೆ ಇಂಪಾದ ಹಾಡುಗಳು ಈಗಾಗಲೇ ಚಾರ್ಟ್‌ಬಸ್ಟರ್ ಹಿಟ್ ಆಗಿ ಕೇಳುಗರ ಮನಸ್ಸು ಗೆದ್ದಿವೆ. ವಿನಯ ಚಂದ್ರ ಸಂಗೀತ, ಜೆ.ಜಿ. ಕೃಷ್ಣ ಹಾಗೂ ದೀಪಕ್ ಕುಮಾರ್ ಕ್ಯಾಮೆರಾ ವರ್ಕ್ ಸಿನಿಮಾಗೆ ಕಣ್ಣಿಗೆ ಹಬ್ಬ ನೀಡಲಿವೆ. ಇನ್ನೂ ಥ್ರಿಲ್ಲರ್ ಮಂಜು ಕಂಪೋಸ್ ಮಾಡಿರೋ ಹೈ-ವೋಲ್ಟೇಜ್ ಆ್ಯಕ್ಷನ್ ಸೀನ್‌ಗಳಲ್ಲಿ ಗೌರಿಶಂಕರ್ ಅಬ್ಬರಿಸಿದ್ದು, ಮಾಸ್ ಪ್ರೇಕ್ಷಕರಿಗೆ ಮಸ್ತ್ ಮಜಾ ಕೊಡಲಿವೆ ಸಾಹಸ ದೃಶ್ಯಗಳು. ಭ್ರಷ್ಟಾಚಾರ, ಅನ್ಯಾಯ ಮತ್ತು ಕಾನೂನು ಸುವ್ಯವಸ್ಥೆಯ ವಿರುದ್ಧ ಹೋರಾಡುವ ಈ ಕಾಮನ್ ಮ್ಯಾನ್, ಅರ್ಜುನ್ ಸರ್ಜಾ ಸೃಷ್ಟಿಸಿದ್ದ ಆ ಒನ್ ಡೇ ಸಿಎಂ ಕ್ರೇಜ್‌ನ ಮತ್ತೆ ಥಿಯೇಟರ್‌ನಲ್ಲಿ ಮರುಸೃಷ್ಟಿಸುತ್ತಾ ಅನ್ನೋದನ್ನ ಸೆಪ್ಟೆಂಬರ್ 25ರವರೆಗೆ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





