ಕಾಮಿಡಿ ಕಿಲಾಡಿಗಳು’ ಮೂರನೇ ಸೀಸನ್‌ನಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ನಟ ಚಂದ್ರಶೇಖರ ಸಿದ್ದಿ ಜುಲೈ 31ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಮಿಡಿ ಕಿಲಾಡಿಗಳ ಖ್ಯಾತಿಯ ಈ ನಟನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆತನ ಪತ್ನಿ ಕಮಲಾಕ್ಷಿಯ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದೆ.
ಚಂದ್ರಶೇಖರ್‌ರವರ ತಾಯಿ ಲಕ್ಷ್ಮೀ, ತಮ್ಮ ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ, ಪತ್ನಿಯ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿಯಿಂದ ನೀಡಿದ್ದ ಕಿರುಕುಳ, ಹಲ್ಲೆಯಿಂದ ಬೇಸತ್ತು ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾದ ಆರೋಪವಿದೆ. ಪತ್ನಿ ಕಮಲಾಕ್ಷಿಯಿಂದ ಕಟ್ಟಿಗೆ, ಪೊರಕೆಯಿಂದ ಹಲ್ಲೆ ನಡೆಸಿರುವ ದೃಶ್ಯ ಒಳಗೊಂಡ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಚಂದ್ರಶೇಖರ ಸಿದ್ದಿ, ಕಾಮಿಡಿ ಕಿಲಾಡಿಗಳ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದರು. ಈ ಕಾರ್ಯಕ್ರಮದಲ್ಲಿ ತಮ್ಮ ಹಾಸ್ಯ ಪ್ರತಿಭೆಯಿಂದ ಗಮನ ಸೆಳೆದಿದ್ದ ಅವರು, ನಂತರ ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಕಿರುತೆರೆಯಲ್ಲಿ ಸತತವಾಗಿ ಅವಕಾಶಗಳು ಸಿಗದಿರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಜನವರಿ 2025 ರಿಂದ ಚಂದ್ರಶೇಖರ್ ಮಾನಸಿಕವಾಗಿ ಜರ್ಜರಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಊರಾದ ಚಿಮನಳ್ಳಿಗೆ ವಾಪಸಾಗಿ, ಕಬ್ಬಿಗೆ ಗ್ರಾಮದಲ್ಲಿ ಪತ್ನಿಯೊಂದಿಗೆ ಕೂಲಿ ಕೆಲಸಕ್ಕೆ ತೆರಳಿದ್ದರು.
ನಟನೆಯಲ್ಲಿ ಆಸಕ್ತಿ ಹೊಂದಿದ್ದ ಚಂದ್ರಶೇಖರ್, ನಾಟಕ ತರಬೇತಿ ಪಡೆದಿದ್ದರು. ಕಾಮಿಡಿ ಕಿಲಾಡಿಗಳ ಶೋ ಜನಪ್ರಿಯತೆಯ ನಂತರದ ದಿನಗಳಲ್ಲಿ ಅವಕಾಶಗಳ ಕೊರತೆಯಿಂದ ಕೂಲಿ ಕೆಲಸಕ್ಕೆ ತಿರುಗಿದ್ದರು. ಈ ಸಂದರ್ಭದಲ್ಲಿ ದಾಂಪತ್ಯ ಕಲಹವೂ ತೀವ್ರಗೊಂಡಿತ್ತು. ಚಂದ್ರಶೇಖರ್‌ರವರ ತಾಯಿ ಲಕ್ಷ್ಮೀ, ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಮಗನ ಮತ್ತು ಆತನ ಪತ್ನಿಯ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು ಎಂದು ಲಕ್ಷ್ಮೀ ತಿಳಿಸಿದ್ದಾರೆ.
ಪತ್ನಿ ಕಮಲಾಕ್ಷಿಯಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳವೇ ಚಂದ್ರಶೇಖರ್‌ರವರ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕಮಲಾಕ್ಷಿ, ಚಂದ್ರಶೇಖರ್‌ರವರನ್ನು ಕಟ್ಟಿಗೆ ಮತ್ತು ಪೊರಕೆಯಿಂದ ಹೊಡೆಯುತ್ತಿರುವ ದೃಶ್ಯ ಕಂಡುಬಂದಿದೆ. ಈ ವಿಡಿಯೋ ಪೊಲೀಸ್ ತನಿಖೆಗೆ ಪ್ರಮುಖ ಸಾಕ್ಷ್ಯವಾಗಿದ್ದು, ಪ್ರಕರಣದಲ್ಲಿ ಆರೋಪಿತ ಪತ್ನಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.