ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ, ಸಮೃದ್ಧಿ ವಿ ಮಂಜುನಾಥ್ ನಿರ್ಮಾಣದ ಹಾಗೂ ಶ್ರೀನಿವಾಸರಾಜು ನಿರ್ದೇಶನದ “ಬೃಂದಾ ವಿಹಾರಿ” ಚಿತ್ರದ ಮೊದಲ ಹಾಡು ರಾಮನವಮಿ ಸಂದರ್ಭದಲ್ಲಿ ಬಿಡುಗಡೆಯಾಗಿದೆ.
ಡಾ.ವಿ.ನಾಗೇಂದ್ರಪ್ರಸಾದ್ ಬರೆದಿರುವ ” ಹೇ ರಾಮ ರಾಮ” ಎಂಬ ಸುಮಧುರ ಗೀತೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಖ್ಯಾತ ಗಾಯಕ ಅನುರಾಗ್ ಕುಲಕರ್ಣಿ ಹಾಡಿದ್ದಾರೆ. ಹಾಡು ಬಿಡುಗಡೆಯಾದ ಕ್ಷಣದಿಂದಲೇ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ಗಣೇಶ್ ಹಾಗೂ ಶ್ರೀನಿವಾಸರಾಜು ಅವರ ಕಾಂಬಿನೇಶನ್ ನಲ್ಲಿ ಮೂಡಿಬಂದಿದ್ದ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಹಾಡುಗಳು ಬಹಳ ಜನಪ್ರಿಯವಾಗಿತ್ತು. ಆ ಚಿತ್ರದ ನಂತರ ಇವರ ಕಾಂಬಿನೇಶನ್ ನಲ್ಲಿ ಬರುತ್ತಿರುವ “ಬೃಂದಾ ವಿಹಾರಿ” ಚಿತ್ರದ ಹಾಡುಗಳು ಸಹ ಜನರ ಮೆಚ್ಚುಗೆ ಪಡೆದುಕೊಳ್ಳಲಿದೆ. ಅದಕ್ಕೆ ಈಗ ಬಿಡುಗಡೆಯಾಗಿರುವ ಮೊದಲ ಹಾಡೇ ಸಾಕ್ಷಿಯಾಗಿದೆ.
ವಿರಾಟ್ ಸಾಯಿ ಕ್ರಿಯೇಷನ್ಸ್ ಅರ್ಪಿಸುವ ಈ ಚಿತ್ರವನ್ನು ಸಮೃದ್ಧಿ ವಿ ಮಂಜುನಾಥ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಶ್ರೀನಿವಾಸರಾಜು ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ ಹಾಗೂ ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮ ಅಭಿನಯಿಸಿದ್ದಾರೆ. ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ “ವೃಂದಾ ವಿಹಾರಿ” ಚಿತ್ರದಲ್ಲಿದೆ.





