ಕರ್ನಾಟಕ ಚಲನಚಿತ್ರ ಅಕಾಡೆಮಿ ನೇತೃತ್ವದಲ್ಲಿ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ವಿವಾದಕ್ಕೆ ಸಿಲುಕಿದೆ. ಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸಿನಿಮಾಗಳನ್ನು ಕಳುಹಿಸಿದ್ದ ಹಲವರ ಚಿತ್ರಗಳನ್ನು ನೋಡದೆಯೇ ತಿರಸ್ಕರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕೆಲವು ಚಿತ್ರ ನಿರ್ಮಾಪಕರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದ್ದ ಹೈಕೋರ್ಟ್, ಈಗ ವಿಚಾರಣೆಗೆ ದಿನಾಂಕ ನಿಗದಿ ಪಡಿಸಿದ್ದು ಫೆಬ್ರವರಿ 24ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೈಕೋರ್ಟ್ ನೋಟಿಸ್ ನೀಡಿದೆ.
ಖ್ಯಾತ ನಿರ್ದೇಶಕ ಮಂಸೋರೆ, ‘ತಿಂಗ್ಳ್ ಬೆಳ್ಕ್’ ಸಿನಿಮಾದ ನಿರ್ದೇಶಕ ನರೇಶ್ ಹೆಗಡೆ, ಟೇಕ್ವಾಂಡೋ ಗರ್ಲ್ ಸಿನಿಮಾ ನಿರ್ಮಾಪಕರು ಸೇರಿದಂತೆ ಹಲವು ನಿರ್ಮಾಪಕರು ಚಿತ್ರೋತ್ಸವಕ್ಕೆ ತಮ್ಮ ಚಿತ್ರಗಳನ್ನು ಕಳುಹಿಸಿಕೊಟ್ಟಿದ್ದರು. ಆ ಚಿತ್ರಗಳು ಪ್ರದರ್ಶನಕ್ಕೆ ಯೋಗ್ಯವಲ್ಲ ಎಂದು ತಿರಸ್ಕರಿಸಲಾಗಿತ್ತು. ಆದರೆ ನಿರ್ಮಾಪಕರ ವಾದವೇನು ಎಂದರೆ ತೀರ್ಪುಗಾರರು ತಮ್ಮ ಚಿತ್ರವನ್ನು ನೋಡಿಯೇ ಇಲ್ಲ. ನೋಡದೆಯೇ ಹೇಗೆ ತಿರಸ್ಕರಿಸುತ್ತೀರಿ ಎನ್ನುವುದು.
ಚಲನಚಿತ್ರ ನಿರ್ಮಾಪಕರ ವಾದದಲ್ಲಿ ಒಂದು ಅಂಶವಿದೆ. ಏನೆಂದರೆ ಸಿನಿಮಾವನ್ನು ಚಿತ್ರೋತ್ಸವ ಸ್ಪರ್ಧೆಗೆ ಒಂದು ನಿರ್ದಿಷ್ಟ ಫಾರ್ಮ್ಯಾಟ್‌ನಲ್ಲಿ ಮಾತ್ರವೇ ಕಳುಹಿಸಲಾಗುತ್ತದೆ. ಆ ಫಾರ್ಮ್ಯಾಟ್ ಓಪನ್ ಮಾಡುವುದಕ್ಕೆ ಪಾಸ್ ವರ್ಡ್ ಕೊಟ್ಟಿರುತ್ತಾರೆ. ಅದಾದ ನಂತರ ಚಿತ್ರವನ್ನು ಯಾರು ನೋಡಿದರು, ಎಷ್ಟು ಬಾರಿ ನೋಡಿದರು ಹಾಗೂ ಎಷ್ಟು ಅವಧಿ ನೋಡಿದರು ಎಂಬ ಲೆಕ್ಕವೂ ಸಿಗುತ್ತದೆ. ಆದರೆ ಈಗ ರಿಜೆಕ್ಟ್ ಆಗಿರುವ ಬಹುತೇಕ ಸಿನಿಮಾಗಳನ್ನು ತೀರ್ಪುಗಾರರು ಓಪನ್ ಕೂಡಾ ಮಾಡಿಲ್ಲ. ಇನ್ನೂ ಕೆಲವು ಸಿನಿಮಾಗಳನ್ನು 10 ನಿಮಿಷಗಳಿಗಿಂತ ಕಡಿಮೆ ನೋಡಿದ್ದಾರೆ. ಹೀಗೆ ಮಾಡುವುದಾದದರೆ ಸ್ಪರ್ಧೆಗೆ ಚಿತ್ರಗಳನ್ನೇಕೆ ಆಹ್ವಾನಿಸಬೇಕು. ಒಂದೊಂದು ವಿಭಾಗಕ್ಕೆ ಒಂದೊಂದು ರೀತಿಯಲ್ಲಿ ಶುಲ್ಕವನ್ನೇಕೆ ಕಟ್ಟಿಸಿಕೊಳ್ಳಬೇಕು ಎನ್ನುವುದು ಚಿತ್ರ ನಿರ್ಮಾಪಕರ ಪ್ರಶ್ನೆ.
ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸ್ಪರ್ಧಾತ್ಮಕ ವಿಭಾಗಕ್ಕೆ ಸಲ್ಲಿಕೆಯಾಗಿರುವ ಸಿನಿಮಾಗಳನ್ನು ಪೂರ್ಣವಾಗಿ ವೀಕ್ಷಿಸದೇ ತಿರಸ್ಕರಿಸಿರುವುದು ಗಂಭೀರ ಲೋಪ. ಚಿತ್ರೋತ್ಸವಕ್ಕೆ, ಸರ್ಕಾರ ಸಾರ್ವಜನಿಕರ ಹಣ ನೀಡುವುದು ಅಕಾಡೆಮಿ ಮತ್ತು ಚಿತ್ರೋತ್ಸವ ಸಮಿತಿ ತಮ್ಮ ಮನಸೋ ಇಚ್ಛೆಯಂತೆ ವರ್ತಿಸಿ, ನಿಯಮಗಳನ್ನು ಗಾಳಿಗೆ ತೂರಿ ನಡೆಸುವುದಕ್ಕಲ್ಲ. ಈ ಆರೋಪಕ್ಕೆ ಅಕಾಡೆಮಿ ಮತ್ತು ಚಿತ್ರೋತ್ಸವ ಸಮಿತಿ ವಿವರಣೆ ನೀಡಲೇಬೇಕು’ ಎಂದು ಖ್ಯಾತ ನಿರ್ದೇಶಕ ಮಂಸೋರೆ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ತಿಂಗ್ಳ್ ಬೆಳ್ಕ್’ ಸಿನಿಮಾದ ನಿರ್ದೇಶಕ ನರೇಶ್ ಹೆಗಡೆ ಕೂಡ ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ‘ನಾಳೆ ರಜಾ ಕೋಳಿ ಮಜಾ’ ಸಿನಿಮಾದ ನಿರ್ದೇಶಕ ಅಭಿಲಾಶ್ ಶೆಟ್ಟಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 1ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಆರಂಭ ಆಗಲಿದೆ. ಆದರೆ ಆಯ್ಕೆ ಪ್ರಕ್ರಿಯೆ ಸರಿಯಾಗಿ ಆಗಿಲ್ಲ ಎಂಬ ಕಾರಣದಿಂದ ಫಿಲ್ಮ್ ಫೆಸ್ಟಿವಲ್ ಮುಂದೂಡಬೇಕು ಎಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದಾರೆ. ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ಮನವಿ ಮಾಡಿದ್ದಾರೆ. ಫೆಬ್ರವರಿ 24ರಂದು ವಿಚಾರಣೆ ನಡೆಯಲಿದ್ದು, ಅಂದು ಚಿತ್ರೋತ್ಸವದ ಹಣೆಬರಹ ನಿರ್ಧಾರವಾಗುವ ಸಾಧ್ಯತೆ ಇದೆ.