ಬಾಲಿವುಡ್ನ ಅತ್ಯಂತ ಜನಪ್ರಿಯ ಹಾಗೂ ಪ್ರಭಾವಶಾಲಿ ಕುಟುಂಬಗಳಲ್ಲಿ ಒಂದಾದ ಬಚ್ಚನ್ ಕುಟುಂಬ ಮತ್ತೆ ಸುದ್ದಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ನಟ ಅಭಿಷೇಕ್ ಬಚ್ಚನ್ ಅವರ ವೈವಾಹಿಕ ಜೀವನದ ಬಗ್ಗೆ ವಿಚ್ಛೇದನದ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಲೇ ಇದ್ದವು. ಆದರೆ, ಈ ಎಲ್ಲಾ ವದಂತಿಗಳಿಗೆ ತೆರೆ ಎಳೆಯುವಂತೆ ಇದೀಗ ಬಚ್ಚನ್ ಕುಟುಂಬವು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಮಗಳು ಆರಾಧ್ಯಗಾಗಿ ಶಾಲಾ ಕಾರ್ಯಕ್ರಮದಲ್ಲಿ ಬಚ್ಚನ್ ಕುಟುಂಬ
ಡಿಸೆಂಬರ್ 18 ರಂದು ಮುಂಬೈನ ಪ್ರಸಿದ್ಧ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಚ್ಚನ್ ಕುಟುಂಬ ಅಭಿಮಾನಿಗಳ ಗಮನ ಸೆಳೆದಿವೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ತಮ್ಮ ಮಗಳು ಆರಾಧ್ಯ ಬಚ್ಚನ್ಗಾಗಿ ಶಾಲಾ ಕಾರ್ಯಕ್ರಮಕ್ಕೆ ಒಟ್ಟಾಗಿ ಆಗಮಿಸಿದ್ದು ಮಾತ್ರವಲ್ಲ, ಕುಟುಂಬದ ಹಿರಿಯರಾದ ಅಮಿತಾಬ್ ಬಚ್ಚನ್ ಕೂಡ ಅವರ ಜೊತೆ ಇದ್ದರು.
ಆರಾಧ್ಯ ಬಚ್ಚನ್ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆಯ ಪ್ರತಿಭೆ ಹಾಗೂ ಪರಿಶ್ರಮಕ್ಕೆ ಪ್ರೋತ್ಸಾಹ ನೀಡಲು ಇಡೀ ಕುಟುಂಬವೇ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಈ ಸಂದರ್ಭ ಐಶ್ವರ್ಯ ರೈ ಅವರ ತಾಯಿ ಬೃಂದಾ ರೈ ಕೂಡ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದಾರೆ.
ವೇಷಭೂಷಣದಲ್ಲೂ ಮಿಂಚಿದ ಕುಟುಂಬ
ಕಾರ್ಯಕ್ರಮದ ವೇಳೆ ಐಶ್ವರ್ಯ ರೈ ಅವರು ಕಪ್ಪು ಬಣ್ಣದ ಸುಂದರ ಬನಾರಸಿ ದುಪಟ್ಟಾ ಹಾಗೂ ಸೂಟ್ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡರು. ಅಮಿತಾಬ್ ಬಚ್ಚನ್ ಅವರು ಕಪ್ಪು ಸೂಟ್ನಲ್ಲಿ ಸೊಗಸಾದ ಲುಕ್ನಲ್ಲಿ ಗಮನ ಸೆಳೆದರೆ, ಅಭಿಷೇಕ್ ಬಚ್ಚನ್ ಅವರು ಕ್ಯಾಶುವಲ್ ಬ್ಲೂ ಔಟ್ಫಿಟ್ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡರು.
ಕಾರ್ಯಕ್ರಮದ ವೇಳೆ ಅಭಿಷೇಕ್ ಮತ್ತು ಐಶ್ವರ್ಯ ಪರಸ್ಪರ ಮಾತುಕತೆಯಲ್ಲಿ ನಿರತರಾಗಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇವರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಸುದ್ದಿಗಳಿಗೆ ತೆರೆ ಎಳೆದಂತಿದೆ.
ಡಿವೋರ್ಸ್ ವದಂತಿಗಳ ಬಗ್ಗೆ ಅಭಿಷೇಕ್ ಪ್ರತಿಕ್ರಿಯೆ
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ತಮ್ಮ ವೈವಾಹಿಕ ಜೀವನದ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ. 14 ವರ್ಷದ ಮಗಳು ಆರಾಧ್ಯಗೆ ಈ ವಿಷಯಗಳ ಬಗ್ಗೆ ತಿಳಿದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಖಂಡಿತವಾಗಿಯೂ ಇಲ್ಲ. ನಾವು ಇನ್ನೂ ಆಕೆಗೆ ಸ್ವಂತ ಮೊಬೈಲ್ ಫೋನ್ ನೀಡಿಲ್ಲ. ಆಕೆಯ ಸ್ನೇಹಿತರು ಸಂಪರ್ಕಿಸಬೇಕಾದರೂ ಆಕೆಯ ತಾಯಿ ಐಶ್ವರ್ಯ ಅವರ ಫೋನ್ಗೆ ಕರೆ ಮಾಡಬೇಕು,” ಎಂದು ಹೇಳಿದರು.
ಆರಾಧ್ಯ ತುಂಬಾ ಪ್ರಬುದ್ಧ ಹುಡುಗಿ ಎಂದು ಹೇಳಿದ ಅಭಿಷೇಕ್, “ಆಕೆಗೆ ಇಂತಹ ಅಸಂಬದ್ಧ ಸುದ್ದಿಗಳ ಮೇಲೆ ಆಸಕ್ತಿಯೇ ಇಲ್ಲ. ಐಶ್ವರ್ಯ ಮಗಳಿಗೆ ಸತ್ಯ ಮತ್ತು ಆತ್ಮವಿಶ್ವಾಸದ ಪಾಠಗಳನ್ನು ಕಲಿಸಿದ್ದಾರೆ,” ಎಂದು ಪತ್ನಿಯನ್ನು ಶ್ಲಾಘಿಸಿದರು.





