ಬಾಹುಬಲಿ ಬಂದು 10 ವರ್ಷಗಳಾದ ಹಿನ್ನೆಲೆ, ಇದೀಗ ಎರಡೂ ಸಿನಿಮಾಗಳನ್ನ ಒಟ್ಟುಗೂಡಿಸಿ ಒಂದೇ ಸಿನಿಮಾ ಮಾಡಿ, ತೆರೆಗೆ ತರ್ತಿದ್ದಾರೆ ಮಹಾನ್ ಮಾಂತ್ರಿಕ ರಾಜಮೌಳಿ. ಯೆಸ್.. ಇದೊಂಥರಾ ಪ್ರೇಕ್ಷಕರಿಗೆ ಖುಷಿ ಕೊಡುವ ವಿಷಯವಾದ್ರೂ, 3 ಗಂಟೆ 50 ನಿಮಿಷದಷ್ಟು ದೊಡ್ಡದಾದ ಸಿನಿಮಾ ನೋಡೋದು ಹೇಗೆ ಗುರು ಅಂತ ಚಿತ್ರಪ್ರೇಮಿಗಳು ಹೆದರುವಂತಾಗಿದೆ.
- OMG..! ಹೇಗೆ ನೋಡೋದು 3ಗಂಟೆ 50ನಿಮಿಷದ ಬಾಹುಬಲಿ?
- ರಾಜಮೌಳಿಯ 2 ಬಾಹುಬಲಿಗಳು.. ಒಂದೇ ಸಿನಿಮಾ ಆಗಿ ತೆರೆಗೆ
- ರನ್ ಟೈಂ ನೋಡಿ ಶಾಕ್ ಆದ ಪ್ರೇಕ್ಷಕರು.. ಒಂದೇ ಚಿತ್ರ 2 ಬ್ರೇಕ್?
- ಹಣ ಮಾಡೋ ಟೆಕ್ನಿಕ್.. ಥಿಯೇಟರ್ ಮಂದಿಗೆ ಟೆಕ್ನಿಕಲ್ ಪ್ರಾಬ್ಲಂ
ಬಾಹುಬಲಿ.. ಭಾರತೀಯ ಚಿತ್ರ ಪ್ರೇಮಿಗಳಲ್ಲದೆ, ಇಡೀ ವಿಶ್ವ ಸಿನಿದುನಿಯಾ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಮಾಸ್ಟರ್‌ಪೀಸ್ ಸಿನಿಮಾ. ಇಂಡಿಯನ್ ಸ್ಪೀಲ್‌ಬರ್ಗ್ ಅಂತಲೇ ಕರೆಯಲ್ಪಡುವ ಮಹಾನ್ ಮಾಂತ್ರಿಕ ರಾಜಮೌಳಿ ನಿರ್ದೇಶನದ ಎವರ್‌ಗ್ರೀನ್ ಸಿನಿಮಾ. ಒಂದಲ್ಲ, ಎರಡೆರಡು ಭಾಗಗಳಲ್ಲಿ ತೆರೆಕಂಡ ಈ ಸಿನಿಮಾಗಳು ಸುಮಾರು 2500ಕ್ಕೂ ಅಧಿಕ ಕೋಟಿ ರೂಪಾಯಿಗಳ ಬ್ಯುಸಿನೆಸ್ ಮಾಡಿತ್ತು.
2015ರ ಜುಲೈ 10ಕ್ಕೆ ಬಾಹುಬಲಿ- ದಿ ಬಿಗಿನಿಂಗ್.. 2017ರ ಏಪ್ರಿಲ್ 18ಕ್ಕೆ ಬಾಹುಬಲಿ- ದಿ ಕನ್‌ಕ್ಲ್ಯೂಶನ್ ಚಿತ್ರಗಳು ತೆರೆಕಂಡಿದ್ದವು. ಪ್ರಭಾಸ್-ರಾಣಾ ನಡುವೆ ಮಾಹಿಷ್ಮತಿ ಸಾಮ್ರಾಜ್ಯದ ಅಧಿಪತ್ಯಕ್ಕಾಗಿ ನಡೆಯುವ ಮಹಾ ಸಮರಗಳು, ರಾಜಮಾತೆಯಾಗಿ ರಮ್ಯಾಕೃಷ್ಣ ಗತ್ತು, ಅವಮಾನ-ಅಪಮಾನಗಳನ್ನ ಸಹಿಸಿಕೊಳ್ಳೋ ದೇವಸೇನಾ ಅನುಷ್ಕಾ ಶೆಟ್ಟಿ, ಗ್ಲಾಮರ್ ಗೊಂಬೆ ಮಿಲ್ಕಿಬ್ಯೂಟಿ ತಮನ್ನಾ, ಕೊಟ್ಟ ಮಾತಿಗೆ ಕಟ್ಟು ಬಿದ್ದ ಕಟ್ಟಪ್ಪ ಸತ್ಯರಾಜ್ ಹೀಗೆ ಎಲ್ಲವೂ ಅದ್ಭುತ, ಮಹಾ ಅದ್ಭುತ.
ಎಂ.ಎಂ ಕೀರವಾಣಿ ಸಂಗೀತ, ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಅಟ್ರ್ಯಾಕ್ಷನ್. ರಾಜಮೌಳಿ ತಮ್ಮ ತಂದೆ ಬರೆದ ಕಥೆಗೆ ದೃಶ್ಯ ರೂಪ ಕೊಟ್ಟ ಪರಿ ನಿಜಕ್ಕೂ ಅವರ್ಣನೀಯ. ಗ್ರಾಫಿಕ್ಸ್ ಹಾಗೂ ಸ್ಪೆಷಲ್ ಎಫೆಕ್ಟ್ಸ್ ಕಣ್ಣಿಗೆ ಕಟ್ಟಿದಂತೆ ಸಹಜವಾಗಿ ಕಟ್ಟಿಕೊಟ್ಟ ಮೌಳಿಯ ಚಾಕಚಕ್ಯತೆಗೆ ಸಲಾಂ ಹೇಳಲೇಬೇಕು. ನೋಡುಗರು ಕಣ್ಣು ಬಾಯಿ ಬಿಟ್ಕೊಂಡು ಬೆರಗು ಕಣ್ಣುಗಳಿಂದ ನೋಡುವಂತಹ ದೃಶ್ಯ ವೈಭವ ಬಾಹುಬಲಿ. ಇದೀಗ ಎರಡೂ ಬಾಹುಬಲಿಗಳನ್ನ ಮಿಕ್ಸ್ ಮಾಡಿ, ಒಂದೇ ಸಿನಿಮಾ ಮಾಡಿ, ಮತ್ತೊಮ್ಮೆ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೆದಿದೆ.
ಭಾಗ-1 ಹಾಗೂ 2.. ಎರಡೂ ಸೇರಿ ಬಾಹುಬಲಿ- ದಿ ಎಪಿಕ್ ಅನ್ನೋ ಒಂದೇ ಸಿನಿಮಾ ಬರ್ತಿರೋ ವಿಷಯ ಕೇಳಿ ಚಿತ್ರ ಪ್ರೇಮಿಗಳು ದಿಲ್‌ಖುಷ್ ಆಗಿದ್ದಾರೆ. ಇದೀಗ ಅದೇ ಚಿತ್ರರಸಿಕರು ಸಿನಿಮಾದ ರನ್ ಟೈಂ ಕೇಳಿ ಹೆದರುವಂತಹ ಪರಿಸ್ಥಿತಿ ಬಂದಿದೆ. ಹೌದು.. ಸಿನಿಮಾದ ರನ್ ಟೈಂ ಬರೋಬ್ಬರಿ 3 ಗಂಟೆ 50 ನಿಮಿಷ ಅಂದ್ರೆ ನೀವು ನಂಬಲೇಬೇಕು. ಅಲ್ಲಿಗೆ 230 ನಿಮಿಷಗಳ ನಾನ್‌ಸ್ಟಾಪ್ ಮ್ಯಾರಥಾನ್ ಮೂವಿ. ಅಲ್ಲಿಗೆ ನಾಲ್ಕರಿಂದ ನಾಲ್ಕೂವರೆ ಗಂಟೆಗಳ ಕಾಲ ಚಿತ್ರಮಂದಿರದಲ್ಲಿ ಲಾಕ್ ಆಗಬೇಕಾಗುತ್ತೆ ಪ್ರೇಕ್ಷಕರು.
ಇಷ್ಟು ದೊಡ್ಡ ಸಿನಿಮಾ ಆಗಿರೋದ್ರಿಂದ ಬ್ರೇಕ್ ಒಂದು ಇಟ್ಟರೆ ಸಾಲಲ್ಲ. ಕನಿಷ್ಟ ಎರಡು ಬಾರಿ ಬ್ರೇಕ್ ನೀಡಬೇಕಾಗುತ್ತೆ ಅಂತಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲ, ಇದು ಹಣ ಮಾಡೋಕೆ ನಿರ್ಮಾಣ ಸಂಸ್ಥೆ ಹಾಗೂ ರಾಜಮೌಳಿಯ ನ್ಯೂ ಟೆಕ್ನಿಕ್. ಆದ್ರೆ ನಾಲ್ಕು ಗಂಟೆಗಳ ಕಾಲ ಒಂದೇ ಸಿನಿಮಾ ಅಂದ್ರೆ, ಚಿತ್ರಮಂದಿರದಲ್ಲಿ ಸಿನಿಮಾ ರನ್ ಮಾಡೋಕೆ ಟೆಕ್ನಿಕಲ್ ಪ್ರಾಬ್ಲಂ ಆಗಲಿದೆ ಅನ್ನೋದನ್ನ ಮರೆತಿದೆ ಚಿತ್ರತಂಡ. ಸೋ.. ಇದೇ ಅಕ್ಟೋಬರ್ 31ಕ್ಕೆ ತೆರೆಗೆ ಬರ್ತಿರೋ ಬಾಹುಬಲಿ ದಿ ಎಪಿಕ್ ಈ ಎಲ್ಲಾ ಸಮಸ್ಯೆಗಳನ್ನ ಹೇಗೆ ನೀಗಿಸುತ್ತೆ..? ಎಷ್ಟು ಕೋಟಿ ಗಳಿಸುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್