ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ, ‘ಅಭಿನಯ ಸರಸ್ವತಿ’ ಎಂದೇ ಖ್ಯಾತರಾದ ಹಿರಿಯ ನಟಿ ಬಿ. ಸರೋಜಾ ದೇವಿಯವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿಯೊಂದನ್ನು ಘೋಷಿಸಬೇಕೆಂದು ನಟಿ ತಾರಾ ಅನುರಾಧ ಅವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದಕ್ಕಾಗಿ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಮನವಿಯನ್ನು ಸಿಎಂ ಅವರ ಎಕ್ಸ್ ಖಾತೆಯಲ್ಲಿ ಫೋಟೋ ಸಮೇತ ದಾಖಲಿಸಲಾಗಿದೆ.
ಹಿರಿಯ ಕಲಾವಿದೆ ಬಿ.ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡುವಂತೆ ನಟಿ ತಾರಾ ಅನುರಾಧ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. pic.twitter.com/b412V4hDfA
— CM of Karnataka (@CMofKarnataka) July 23, 2025
ಬಿ. ಸರೋಜಾ ದೇವಿಯವರು ಜುಲೈ 14 ರಂದು ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ 87ನೇ ವಯಸ್ಸಿನಲ್ಲಿ ನಿಧನರಾದರು. ಅವರ ಸಾವಿಗೆ ಕನ್ನಡ ಚಿತ್ರರಂಗವೇ ಕಂಬನಿ ಮಿಡಿಯಿತು. ಅವರ ಮೃತದೇಹವನ್ನು ಮಲ್ಲೇಶ್ವರಂನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಸ್ಯಾಂಡಲ್‌ವುಡ್‌ನ ಹಲವಾರು ನಟ-ನಟಿಯರು, ಗಣ್ಯರು ಮತ್ತು ಅಭಿಮಾನಿಗಳು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ನಂತರ, ಸರೋಜಾ ದೇವಿಯವರ ಹುಟ್ಟೂರು ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅವರ ಅಂತಿಮ ಸಂಸ್ಕಾರ ನಡೆಯಿತು. ಅವರ ತಾಯಿಯ ಸಮಾಧಿಯ ಪಕ್ಕದಲ್ಲೇ ಸರೋಜಾ ದೇವಿಯವರ ಸಮಾಧಿಯನ್ನು ನಿರ್ಮಿಸಲಾಗುತ್ತಿದೆ.
ಸರೋಜಾ ದೇವಿಯವರ ಚಿತ್ರರಂಗದ ಕೊಡುಗೆ ಅಪಾರ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಏಳು ದಶಕಗಳ ಸಿನಿಪಯಣದಲ್ಲಿ ಅವರ ಅಭಿನಯಕ್ಕಾಗಿ ‘ಅಭಿನಯ ಸರಸ್ವತಿ’ ಎಂಬ ಬಿರುದು ಲಭಿಸಿತ್ತು. ತಮಿಳು ಚಿತ್ರರಂಗದಲ್ಲಿ ಅವರಿಗೆ ‘ಕನ್ನಡತು ಪೈಂಗಿಳಿ’ (ಕನ್ನಡದ ಅರಗಿಣಿ) ಎಂಬ ಹೆಸರಿತ್ತು. 1969ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳು ಅವರಿಗೆ ಒಲಿದಿವೆ.
ಈ ಮನವಿಯ ಜೊತೆಗೆ, ಸರೋಜಾ ದೇವಿಯವರು ವಾಸವಾಗಿದ್ದ ಮಲ್ಲೇಶ್ವರಂನ ರಸ್ತೆಗೆ ಅವರ ಹೆಸರನ್ನು ಇಡುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ಯೋಜನೆಗೆ ಅಂತಿಮ ರೂಪ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.