ಖ್ಯಾತ ನಟ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಕುಟುಂಬದಲ್ಲಿ ಇದೀಗ ಮದುವೆಯ ಸಂಭ್ರಮ ಮನೆ ಮಾಡಿದೆ. ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಅವರು ತಮ್ಮ ಬಹುಕಾಲದ ಪ್ರಿಯಕರ ಹಾಗೂ ವಿದೇಶಿ ಉದ್ಯಮಿ ಇಸಾಯ್ ನಟ್ಟರ್ (Isai Natter) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬರೋಬ್ಬರಿ 14 ವರ್ಷಗಳ ಪ್ರೀತಿಯ ಬಳಿಕ ಈ ಜೋಡಿ ವೈವಾಹಿಕ ಬಂಧನಕ್ಕೆ ಒಳಗಾಗಿದೆ.
ಅಂಜನಾ ಮತ್ತು ಇಸಾಯ್ ಅವರ ವಿವಾಹ ಸಮಾರಂಭ ವಿದೇಶದಲ್ಲಿ ನಡೆದಿದ್ದು, ಭಾರತೀಯ ಸಂಪ್ರದಾಯದಂತೆ ಮದುವೆ ನೆರವೇರಿಸಲಾಗಿದೆ. ಎರಡೂ ಕುಟುಂಬಗಳ ಸದಸ್ಯರು, ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಎಲ್ಲರೂ ಭಾರತೀಯ ಶೈಲಿಯ ಉಡುಪು ಧರಿಸಿ ಭಾಗವಹಿಸಿದ್ದರು. ನವದಂಪತಿಗೆ ಕುಟುಂಬಸ್ಥರು ಹಾಗೂ ಆಪ್ತರು ಶುಭ ಹಾರೈಸಿದ್ದಾರೆ.
14 ವರ್ಷಗಳ ಪ್ರೇಮಕಥೆಗೆ ಸುಖಾಂತ್ಯ
ಅಂಜನಾ ಹಾಗೂ ಇಸಾಯ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ವರ್ಷ ಇಟಲಿಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇವರ ನಿಶ್ಚಿತಾರ್ಥ ನಡೆದಿತ್ತು. ಅದಕ್ಕೂ ಮುನ್ನ ವಿದೇಶದಲ್ಲಿ ಇಸಾಯ್ ಪ್ರಪೋಸ್ ಮಾಡಿದ್ದ ಕ್ಷಣವನ್ನು ಅಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ದೀರ್ಘಕಾಲದ ಸ್ನೇಹ ಮತ್ತು ಪ್ರೀತಿ ಇದೀಗ ಮದುವೆಯ ಮೂಲಕ ಹೊಸ ಹಂತಕ್ಕೆ ಕಾಲಿಟ್ಟಿದೆ. ಇಸಾಯ್ ವಿದೇಶಿ ಪ್ರಜೆಯಾಗಿದ್ದು, ಉದ್ಯಮ ಹಾಗೂ ಜಾಗತಿಕ ಬ್ರ್ಯಾಂಡಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಚಿತ್ರರಂಗದಿಂದ ದೂರ, ಫ್ಯಾಷನ್ ಉದ್ಯಮದಲ್ಲಿ ಅಂಜನಾ
ಅರ್ಜುನ್ ಸರ್ಜಾ ಅವರ ಕುಟುಂಬ ಚಿತ್ರರಂಗದೊಂದಿಗೆ ನಿಕಟ ಸಂಬಂಧ ಹೊಂದಿದ್ದರೂ ಅಂಜನಾ ಮಾತ್ರ ಸಿನಿಮಾದಿಂದ ದೂರ ಉಳಿದಿದ್ದಾರೆ. ಅವರು ಫ್ಯಾಷನ್ ಉದ್ಯಮದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ.
ಅಂಜನಾ ಪರಿಸರ ಸ್ನೇಹಿ ಮತ್ತು ವೆಗನ್ ಫ್ಯಾಷನ್ ಉತ್ಪನ್ನಗಳ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಹಣ್ಣುಗಳ ಸಿಪ್ಪೆ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ತಯಾರಿಸುವ ಐಷಾರಾಮಿ ಹ್ಯಾಂಡ್‌ಬ್ಯಾಗ್‌ಗಳ ಬ್ರ್ಯಾಂಡ್ ಮೂಲಕ ಅವರು ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಹಿರಿಯ ಪುತ್ರಿ ಐಶ್ವರ್ಯಾ ಕೂಡ ನಟಿ
ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ ಐಶ್ವರ್ಯಾ ಅರ್ಜುನ್ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2024ರಲ್ಲಿ ಅವರು ತಮಿಳು ನಟ ಉಮಾಪತಿ ರಾಮಯ್ಯ ಅವರೊಂದಿಗೆ ವಿವಾಹವಾಗಿದ್ದರು. ಇದೀಗ ಕಿರಿಯ ಪುತ್ರಿ ಅಂಜನಾ ಕೂಡ ವಿವಾಹವಾಗಿರುವುದರಿಂದ ಅರ್ಜುನ್ ಸರ್ಜಾ ಹಾಗೂ ನಿವೇದಿತಾ ದಂಪತಿ ಇಬ್ಬರು ಪುತ್ರಿಯರನ್ನೂ ದಾಂಪತ್ಯ ಜೀವನಕ್ಕೆ ಕಳುಹಿಸಿಕೊಟ್ಟಂತಾಗಿದೆ.
ಅಂಜನಾ ಹಾಗೂ ಇಸಾಯ್ ಅವರ ವಿವಾಹದ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಮತ್ತು ಚಿತ್ರರಂಗದ ಆಪ್ತರು ನವದಂಪತಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.





