ರಾಜರತ್ನ ಅಪ್ಪು ನಮ್ಮನ್ನ ಅಗಲಿ ನಾಲ್ಕು ವರ್ಷಗಳಾಗ್ತಿದೆ. ಜೊತೆಗಿರದ ಜೀವ ಸದಾ ಜೀವಂತ ಎನ್ನುವಂತೆ ಆ ಆಪ್ತ ಜೀವ ನಮ್ಮೊಂದಿಗಿಲ್ಲ ಅನ್ನೋ ಭಾವನೆ ಎಂದೂ ಮೂಡಿಲ್ಲ. ನಗುವಿನ ಒಡೆಯನನ್ನ ನೆನೆಯದ ಕ್ಷಣವೇ ಇಲ್ಲ. ಅಪ್ಪು ಬರೀ ವ್ಯಕ್ತಿಯಲ್ಲ.. ಕನ್ನಡಿಗರ ಎಮೋಷನ್. ವರ್ಲ್ಡ್‌ನಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಸ್ಟಾರ್‌ಗಾಗಿ ಆ್ಯಪ್ ತಯಾರಾಗಿದೆ. ಯೆಸ್.. ಅಪ್ಪು ಆ್ಯಪ್ ಟ್ರೈಲರ್ ಲಾಂಚ್ ಆಗಿದ್ದು, ಕಿಚ್ಚನ ವಾಯ್ಸ್‌ನಲ್ಲಿ ನೋಡುಗರ ಕಣ್ಮನ ತಣಿಸುತ್ತಿದೆ.
- ಅಪ್ಪು ಬರೀ ಹೆಸರಲ್ಲ ಎಮೋಷನ್.. ಆರಡಿ ಕಟೌಟ್ ಹೇಳಿದ್ದೇನು?
- ಭಾವನಾತ್ಮಕ ಟ್ರೈಲರ್.. ‘ಜೊತೆಗಿರದ ಆ ಜೀವ ಸದಾ ಜೀವಂತ’..!
- ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಸ್ಟಾರ್‌ಗಾಗಿ ಸ್ಪೆಷಲ್ ಆ್ಯಪ್
- ಕಿಚ್ಚನ ವಾಯ್ಸ್.. ಅರ್ಥಪೂರ್ಣ ದೃಶ್ಯಗುಚ್ಚ.. ಅ-25ಕ್ಕೆ ಲಾಂಚ್..!!
ದೇವತಾ ಮನುಷ್ಯ ಅಣ್ಣಾವ್ರನ್ನೇ ಮೀರಿಸುವಂತಹ ಪ್ರೀತಿ, ಅಭಿಮಾನ, ಗೌರವಕ್ಕೆ ಪಾತ್ರರಾದ ರಾಜರತ್ನ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ನಮ್ಮೊಂದಿಗಿಲ್ಲ. ಆದ್ರೆ ಕನ್ನಡಿಗರಾದ ನಾವು ಅವರನ್ನ ಸ್ಮರಿಸದ ದಿನವೇ ಇಲ್ಲ. ಪ್ರತೀ ದಿನ ಪ್ರತೀ ಕ್ಷಣ ಅಪ್ಪು ಒಂಥರಾ ಹೃದಯದ ಮಿಡಿತವಾಗಿಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಕನ್ನಡಿಗರ ಮನೆ, ಮನಸುಗಳನ್ನ ಆವರಿಸಿದ್ದಾರೆ ಸರಳತೆಯ ಸಾರ್ವಭೌಮ ಅಪ್ಪು.
ಇಡೀ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಸ್ಟಾರ್ ನಟನಿಗಾಗಿ ಒಂದು ಸ್ಪೆಷಲ್ ಮೊಬೈಲ್ ಆ್ಯಪ್ ತಯಾರಾಗಿದೆ. ಅದೇ ಅಪ್ಪು ಆ್ಯಪ್. ಇದರಲ್ಲಿ ಪುನೀತ್ ರಾಜ್‌ಕುಮಾರ್ ಕುರಿತ ಕಂಪ್ಲೀಟ್ ಮಾಹಿತಿ, ಫೋಟೋಗಳು, ವಿಡಿಯೋಗಳು, ಅವರ ಆ ನಗು, ಅಭಿಮಾನಿ ದೇವರುಗಳ ಅಭಿಮಾನ ಹೀಗೆ ಎಲ್ಲವನ್ನು ಹಿಡಿದಿಡುವ ಕಾರ್ಯ ನಡೆದಿದೆ. ಇತ್ತೀಚೆಗೆ ಪಿಆರ್‌ಕೆ ಒಡತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಂದು ಟೀಸರ್ ಮೂಲಕ ಅಪ್ಪು ಆ್ಯಪ್ ಟ್ರೈಲರ್ ಹಿಂಟ್ ನೀಡಿದ್ರು.
ಇದೀಗ ಆ ಅಪ್ಪು ಆ್ಯಪ್ ಟ್ರೈಲರ್ ಅಫಿಶಿಯಲಿ ಲಾಂಚ್ ಆಗಿದೆ. ಅಭಿನಯ ಚಕ್ರವರ್ತಿ ಬಾದ್‌ಷಾ ಸುದೀಪ್ ಅದಕ್ಕೆ ಹಿನ್ನೆಲೆ ಧ್ವನಿ ನೀಡಿದ್ದು, ಅಪ್ಪು ಮೇಲೆ ಕಿಚ್ಚನಿಗಿರೋ ಭಾವನಾತ್ಮಕ ಬಾಂಧವ್ಯ ಹಾಗೂ ಆ ಸ್ನೇಹ ಸಂಬಂಧಕ್ಕೆ ಇದು ಸಾಕ್ಷಿಯಾಗಿದೆ. ಈ ಟ್ರೈಲರ್‌ನಲ್ಲಿ ಅಪ್ಪು ಜನನದಿಂದ ಮರಣದವರೆಗೆ ಎಲ್ಲವೂ ಸೇರಿದೆ. ಅಷ್ಟೇ ಅಲ್ಲ, ಅವರ ಅಗಲಿಕೆಯ ನಂತರ ಅವರ ಆಶಯಗಳು, ಜನ ಅವ್ರನ್ನ ದೇವರಂತೆ ಪೂಜಿಸಿದ ಪರಿ ಕೂಡ ಇದೆ. ಟೆಕ್ನಾಲಜಿ ಸಹಾಯದಿಂದ ತಯಾರಿಸಿರೋ ಈ ಟ್ರೈಲರ್ ನಗುಮುಖದ ಒಡೆಯನನ್ನ ಮತ್ತಷ್ಟು ಹತ್ತಿರ ಆಗಿಸ್ತಿದೆ.
ಅಂದಹಾಗೆ ಇದೇ ಅಕ್ಟೋಬರ್ 29ಕ್ಕೆ ಅಪ್ಪು ನಾಲ್ಕನೇ ಪುಣ್ಯಸ್ಮರಣೆ. ಅದಕ್ಕೂ ಮುನ್ನ ಅಕ್ಟೋಬರ್ 25ರಂದು ಈ ಅಪ್ಪು ಆ್ಯಪ್ ಅನ್ನು ಡಿಸಿಎಂ ಡಿಕೆ ಶಿವಕುಮಾರ್ ಲಾಂಚ್ ಮಾಡಲಿದ್ದಾರೆ ಅನ್ನೋದು ಇಂಟರೆಸ್ಟಿಂಗ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





