ಕರ್ನಾಟಕ ಸ್ಟಾರ್ ನಿರೂಪಕಿ ಅನುಶ್ರೀಗೆ ಕೊನೆಗೂ ಕೂಡಿಬಂತು ಕಂಕಣಭಾಗ್ಯ. ರಾಜರತ್ನ ಅಪ್ಪು ಅವ್ರ ಡೈಹಾರ್ಡ್ ಫ್ಯಾನ್ ಮದ್ವೆ ಯಾವಾಗ..? ಯಾವಾಗ..? ಯಾವಾಗ..? ಅಂತ ಕಳೆದ ಹಲವು ವರ್ಷಗಳಿಂದ ಟಾಕ್ ಕ್ರಿಯೇಟ್ ಮಾಡಿತ್ತು. ಆದ್ರೀಗ ಆಮಂತ್ರಣ ಸಮೇತ ಅದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ. ಹಾಗಾದ್ರೆ ಹುಡುಗ ಯಾರು..? ಹೇಗಿದ್ದಾರೆ..? ಮದ್ವೆ ಎಲ್ಲಿ..? ಯಾರೆಲ್ಲಾ ಬರ್ತಿದ್ದಾರೆ ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
- ದಿ ವೆಯ್ಟ್ ಈಸ್ ಓವರ್.. ಕರ್ನಾಟಕದ ಸ್ಟಾರ್ ನಿರೂಪಕಿಗೆ ಮದ್ವೆ
- ಇನ್ವಿಟೇಷನ್ ಜೊತೆ ಅನು ಹಾಜರ್.. ಏಕಾಂಗಿ ನಿರೂಪಕಿ ಅರ್ಧಾಂಗಿ
ಕರ್ನಾಟಕ ರತ್ನ, ರಾಜರತ್ನ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ, ಕರುನಾಡಿನ ಸ್ಟಾರ್ ನಿರೂಪಕಿ ಅನುಶ್ರೀ ಸಪ್ತಪದಿಗೆ ಕೊನೆಗೂ ಶುಭ ಮುಹೂರ್ತ ಕೂಡಿ ಬಂದಿದೆ. ಹೌದು, ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಅನುಶ್ರೀ ಮದುವೆ ಕೂಡ ಒಂದು. ಅದರಲ್ಲೂ ಕೊರೋನಾ ಬಳಿಕ ಅನುಶ್ರೀ ಮದ್ವೆ ಸಾಕಷ್ಟು ಮಂದಿ ಜೊತೆ ತಳಕು ಹಾಕಿಕೊಳ್ತಿತ್ತು. ಅದಕ್ಕೆ ಕಾರಣ ಆಕೆ ಮೋಸ್ಟ್ ಎಲಿಜಿಬಲ್ ವಧು ಅನ್ನೋದು.
ಅನುಶ್ರೀ ಮದುವೆ ಆಗೇ ಹೋಯ್ತಂತೆ. ಹುಡ್ಗ ಅವರಂತೆ, ಇವರಂತೆ ಅಂತೆಲ್ಲಾ ಸಾಕಷ್ಟು ಸಲ ಈ ಸ್ಟಾರ್ ಆ್ಯಂಕರ್‌ಗೆ ಮದ್ವೆ ಮಾಡಿಸಿತ್ತು ಸೋಶಿಯಲ್ ಮೀಡಿಯಾ. ಅದು ಟ್ರೋಲ್ ಕೂಡ ಆಗಿತ್ತು. ಆದ್ರೆ ಅನುಶ್ರೀ ಮಾತ್ರ ದಯವಿಟ್ಟು ಬಿಟ್‌ಬಿಡ್ರೋ, ಮದ್ವೆ ಆದ್ರೆ ನಾನೇ ಹೇಳ್ತೀನಿ ಅಂತ ಸಾಕಷ್ಟು ಸಲ ಮನವಿ ಮಾಡಿದ್ರೂ ಸಹ ಆಕೆಯ ಮದ್ವೆ ವಿಚಾರ ಸಿಕ್ಕಾಪಟ್ಟೆ ಮುನ್ನೆಲೆಗೆ ಬರ್ತಿತ್ತು. ಆದ್ರೀಗ ಈ ಬಾರಿ ಹಾಗೆ ಕಾಯುವ ಪ್ರಮೇಯವೇ ಇಲ್ಲ. ವೆಡ್ಡಿಂಗ್ ಇನ್ವಿಟೇಷನ್ ಸಮೇತ ಅನುಶ್ರೀ ಹಾಜರ್ ಆಗಿದ್ದಾರೆ.
ಇನ್ಮೇಲೆ ನಾನು ಏಕಾಂಗಿ ನಿರೂಪಕಿ ಅಲ್ಲ, ಅರ್ಧಾಂಗಿ ಆಗಿ ಹೊಸ ಮನ್ವಂತರ ಶುರು ಮಾಡ್ತಿದ್ದೀನಿ ಅಂತ ಆಮಂತ್ರಣ ಪತ್ರಿಕೆ ಸಮೇತ ಸುದ್ದಿ ಆಗ್ತಿದ್ದಾರೆ. ಹಾಗಾದ್ರೆ ಅನುಶ್ರೀ ಕಲ್ಯಾಣ ಯಾವಾಗ..? ಎಲ್ಲಿ..? ಯಾರೆಲ್ಲಾ ಸಾಕ್ಷಿ ಆಗ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದ್ದೇ ಇರುತ್ತೆ. ಅದಕ್ಕಿಂತ ಹೆಚ್ಚಾಗಿ ಇಷ್ಟಕ್ಕೂ ಯಾರು ಆ ಅದೃಷ್ಠವಂತ ಅನ್ನೋದು ಕೂಡ ಬಿಲಿಯನ್ ಡಾಲರ್ ಪ್ರಶ್ನೆ ಆಗಿದೆ. ಅದಕ್ಕೆ ಉತ್ತರ ರೋಷನ್.

- ಆ್ಯಂಕರ್ ಅನುಶ್ರೀ ವೆಡ್ಸ್ ರೋಷನ್.. ಯಾರು ಈ ಅದೃಷ್ಠವಂತ..?
- ಕೂರ್ಗ್ ಉದ್ಯಮಿ ರೋಷನ್ ಜೊತೆ ಅನು ಅರೇಂಜ್ ಮ್ಯಾರೇಜ್
‘ನೀವೆಲ್ಲಾ ಕೇಳ್ತಿದ್ದ ಪ್ರಶ್ನೆಗೆ ಏಕೈಕ ಪ್ರಶ್ನೆಗೆ ಈಗ ಉತ್ತರ.. ಏಕಾಂಗಿ ನಿರೂಪಣೆಯ ನಂತರ.. ಅರ್ಧಾಂಗಿ ಆಗುವ ಹೊಸ ಮನ್ವಂತರ’.. ಹೀಗೆ ಮದುವೆಯ ಮಮತೆಯ ಕರೆಯೋಲೆಯಲ್ಲಿ ಬರೆದುಕೊಂಡಿರೋ ಅನುಶ್ರೀ ಕೈಹಿಡಿಯುತ್ತಿರೋದು ರೋಷನ್. ಹೌದು.. ರೋಷನ್ ಕೊಡಗು ಮೂಲದ ಕನ್ನಡಿಗ. ಒಳ್ಳೆಯ ಹೈಟು, ಖಡಕ್ ಪರ್ಸನಾಲಿಟಿ ಇರೋ ರೋಷನ್, ಮೂಲತಃ ಉದ್ಯಮಿ. ಅಂದಹಾಗೆ ಇವರದ್ದು ಲವ್ ಮ್ಯಾರೇಜ್ ಅಲ್ಲ, ಅರೇಂಜ್ ಕಮ್ ಲವ್ ಮ್ಯಾರೇಜ್.
ಅನುಶ್ರೀಗೆ ಮನೆಯಲ್ಲಿ ನೋಡಿದ ಹುಡುಗ ಈ ರೋಷನ್ ಆಗಿದ್ದು, ಆ ನಂತ್ರ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳೋಕೆ ಕೊಂಚ ಸಮಯಾವಕಾಶ ಪಡೆದು, ಫ್ರೆಂಡ್ಸ್ ಆಗಿ ಸುತ್ತಾಡಿದ್ದಾರೆ. ಆ ಪ್ರಾಸಸ್‌ನಲ್ಲಿ ಅನುಶ್ರೀ-ರೋಷನ್ ಅದ್ಯಾವುದೋ ಸಿನಿಮಾದ ಮುಹೂರ್ತ ಒಂದರಲ್ಲಿ ಇಬ್ಬರೂ ಭಾಗಿಯಾಗಿದ್ದರು. ಅಷ್ಟೇ ಅಲ್ಲ, ಅನುಶ್ರೀ ಇತ್ತೀಚೆಗೆ ಮಾಡಿದ ಫಾರಿನ್ ಟೂರ್‌ನಲ್ಲೂ ರೋಷನ್ ಭಾವಿ ಪತ್ನಿಗೆ ಸಾಥ್ ನೀಡಿದ್ದಾರೆ.
- ಅನು ಮದ್ವೆ ಎಲ್ಲಿ..? ಯಾವಾಗ..? ಯಾರೆಲ್ಲಾ ಬರ್ತಾರೆ ಗೊತ್ತಾ..?
- ಡೆಸ್ಟಿನೇಷನ್ ವೆಡ್ಡಿಂಗ್ ರೆಸಾರ್ಟ್‌ನಲ್ಲಿ ಅನು ರಾಯಲ್ ವೆಡ್ಡಿಂಗ್
- ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್‌ನಲ್ಲಿ 3 ದಿನಗಳ ಕಲ್ಯಾಣ
- ಆ-26ಕ್ಕೆ ಮೆಹಂದಿ, ಸಂಗೀತ್.. 28 ಬೆಳಗ್ಗೆ 10.56ಕ್ಕೆ ಮುಹೂರ್ತ
ಹೌದು, ಇದೇ ಆಗಸ್ಟ್ ತಿಂಗಳಾಂತ್ಯಕ್ಕೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೊಸ ಬಾಳಿಗೆ ಕಾಲಿಡ್ತಿದ್ದಾರೆ ಆ್ಯಂಕರ್ ಅನುಶ್ರೀ. ಆಗಸ್ಟ್ 26ರಿಂದ 28ರ ತನಕ ಸುಮಾರು ಮೂರು ದಿನಗಳ ತನಕ ನಡೆಯಲಿದೆ ಅನುಶ್ರೀ-ರೋಷನ್ ಕಲ್ಯಾಣ. 26ರಿಂದಲೇ ಮೆಹಂದಿ, ಸಂಗೀತ್ ಪಾರ್ಟಿಗಳು ನಡೆಯಲಿದ್ದು, ಆಗಸ್ಟ್ 28ರ ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ಆಗಲಿದೆ.
ಅಂದಹಾಗೆ ಅನುಶ್ರೀ- ರೋಷನ್ ಶುಭ ವಿವಾಹ ಕಾರ್ಯಕ್ರಮ, ಬೆಂಗಳೂರಿನ ಹೊರವಲಯದಲ್ಲಿರೋ ಡೆಸ್ಟಿನೇಷನ್ ವೆಡ್ಡಿಂಗ್ ಸೆಂಟರ್ ಆಗಿರೋ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್‌ನಲ್ಲಿ ನಡೆಯಲಿದೆ. ಕಗ್ಗಲಿಪುರದ ಬಳಿ ಇರೋ ತಿಟ್ಟಹಳ್ಳಿಯಲ್ಲಿ ಈ ಸ್ಟುಡಿಯೋ ಇರೋ ರೆಸಾರ್ಟ್ ಇದ್ದು, ಈ ಟ್ರಾಫಿಕ್ ಕಿರಿಕಿರಿ, ಹೊಗೆ, ಧೂಳು ಮುಕ್ತ ಸ್ವಚ್ಚ ಗಾಳಿ, ಬೆಳಕುಗಳ ನಡುವೆ ನಡೆಯಲಿದೆ ಅನ್ನೋದು ಇಂಟರೆಸ್ಟಿಂಗ್.
ಕನ್ನಡ ಬಹುತೇಕ ಎಲ್ಲಾ ಸ್ಟಾರ್ ನಟರು, ಸ್ಟಾರ್ ಡೈರೆಕ್ಟರ್‌ಗಳ ಜೊತೆ ಉತ್ತಮ ಒಡನಾಟ, ಬಾಂಧವ್ಯ ಹೊಂದಿರೋ ಅನುಶ್ರೀ, ರಾಜಕಾರಣಿಗಳಿಗೂ ಚಿರಪರಿಚಿತರು. ಸರ್ಕಾರದ ಸಾಕಷ್ಟು ಕಾರ್ಯಕ್ರಮಗಳನ್ನ ನಿರೂಪಣೆ ಮಾಡಿರೋ ಅನುಗೆ ರಾಜಕಾರಣಿಗಳ ಒಡನಾಟ ಕೂಡ ಇದೆ. ಹೀಗಾಗಿ ಇಡೀ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಅನುಶ್ರೀ-ರೋಷನ್ ಕಲ್ಯಾಣಕ್ಕೆ ಆಗಮಿಸಲಿದ್ದಾರೆ. ಕಿರುತೆರೆ ವಾಹಿನಿಗಳ ಕಲಾವಿದರು, ತಂತ್ರಜ್ಞರು, ಬ್ಯುಸಿನೆಸ್ ಹೆಡ್‌ಗಳು ಕೂಡ ಈ ಕಲ್ಯಾಣಕ್ಕೆ ಸಾಕ್ಷಿ ಆಗಲಿದ್ದಾರೆ.

- ನಿಮಗೆ ಆ್ಯಂಕರ್ ಅನುಶ್ರೀ ಗೊತ್ತು.. ನಟಿ ಅನುಶ್ರೀ ಪರಿಚಯಿಸ್ತೀವಿ
- ಡಬ್ಬಿಂಗ್‌ಗಾಗಿ ಸ್ಟೇಟ್ ಅವಾರ್ಡ್ ಪಡೆದ ಟ್ಯಾಲೆಂಟ್ ಈ ಅನುಶ್ರೀ
38 ವರ್ಷದ ಅನುಶ್ರೀಯನ್ನ ಆ್ಯಂಕರ್ ಅನುಶ್ರೀಯಾಗಷ್ಟೇ ನಾವು ನೋಡಿದ್ದೀವಿ. ಅಂದಹಾಗೆ ಆಕೆಯ ಕರಿಯರ್ ಶುರುವಾಗಿದ್ದು ಕೂಡ ವಾಹಿನಿಯೊಂದರ ನಿರೂಪಕಿಯಾಗಿಯೇನೇ. ಆದ್ರೆ ಈಕೆ ಹೀರೋಯಿನ್ ಆಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಛಾಪು ಮೂಡಿಸಿದ್ದಾರೆ. ಹೌದು, ಸುರತ್ಕಲ್ ಮೂಲದ ಅನುಶ್ರೀ ಮಂಗಳೂರು ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿ, ಮಾಯಾನಗರ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬರ್ತಾರೆ.

ಮಂಗಳೂರಿನಲ್ಲೇ ಲೋಕಲ್ ಟಿವಿ ವಾಹಿನಿಯೊಂದರಲ್ಲಿ ಟೆಲಿ ಫೋನಿನ್ ಕಾರ್ಯಕ್ರಮದ ನಿರೂಪಕಿ ಆಗಿದ್ದ ಈಕೆಗೆ, ಬೆಂಗಳೂರಿನ ಮೈನ್‌ಸ್ಟ್ರೀಮ್ ಆ್ಯಂಕರ್ ಆಗೋದು ಕಷ್ಟವಾಗಲಿಲ್ಲ. 2006ರಿಂದ ನಿರೂಪಕಿ, ನಟಿಯಾಗಿ ಸಕ್ರಿಯರಾಗಿರೋ ಅನುಶ್ರೀ, ತಮ್ಮ ಟ್ಯಾಲೆಂಟ್‌ನಿಂದಲೇ ಕನ್ನಡಿಗರ ಹೃದಯ ಗೆದ್ದ ಚೆಲುವೆ ಅನಿಸಿಕೊಂಡಿದ್ದಾರೆ. ಬೆಂಕಿಪಟ್ನ, ರಿಂಗ್ ಮಾಸ್ಟರ್ ಹಾಗೂ ಉಪ್ಪು ಹುಳಿ ಖಾರ ಸಿನಿಮಾಗಳಲ್ಲಿ ತಮ್ಮ ನಟನಾ ಗಮ್ಮತ್ತು ಕೂಡ ತೋರಿದ್ದಾರೆ.
ಪ್ರತಾಪ್ ನಾರಾಯಣ್ ಜೊತೆಗಿನ ಬೆಂಕಿಪಟ್ನ ಚಿತ್ರದ ಬೊಗಸೆಯಲ್ಲಿ ಸಾಂಗ್ ಇಂದಿಗೂ ಎವರ್‌ಗ್ರೀನ್. ಇನ್ನು ಉಪ್ಪು ಹುಳಿ ಖಾರ ಚಿತ್ರದ ಫಾರಿನ್ ಸಾಂಗ್, ಅದ್ರಲ್ಲಿರೋ ಡ್ಯಾನ್ಸ್ ಧಮಾಕ ಅನುಶ್ರೀಯಲ್ಲಿರೋ ಪ್ರತಿಭೆಗೆ ಹಿಡಿದ ಕನ್ನಡತಿಯಾಗಿತ್ತು.
ಅಂದ, ಚೆಂದದ ಜೊತೆ ಅನುಶ್ರೀಗೆ ಒಳ್ಳೆಯ ಕಂಠ ಕೂಡ ಕೊಟ್ಟಿದ್ದಾರೆ ದೇವರು. ಹಾಗಾಗಿಯೇ ಪ್ರಜ್ವಲ್ ದೇವರಾಜ್- ಶ್ರುತಿ ಹರಿಹರನ್ ನಟನೆಯ ಮಾದ & ಮಾನಸಿ ಚಿತ್ರಕ್ಕೆ ವಾಯ್ಸ್ ಡಬ್ ಮಾಡುವ ಮೂಲಕ, ರಾಜ್ಯ ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡರು.
ಅದೇನೇ ಇರಲಿ, ಅನುಶ್ರೀ ಸದ್ಯ ನಟ, ನಟಿಯರನ್ನು ಮೀರಿಸುವಂತಹ ಸ್ಟಾರ್‌ಡಮ್ ಇರೋ ಕನ್ನಡದ ಮನೆ ಮಗಳು. ಎಂಥದ್ದೇ ಸ್ಟೇಜ್ ಶೋ ಆಗಿರಲಿ, ಟಿವಿ ಶೋ ಇರಲಿ, ಸಂದರ್ಶನ ಇರಲಿ. ಎಲ್ಲವನ್ನೂ ಲವಲವಿಕೆಯಿಂದ ನಿಭಾಯಿಸ್ತಾರೆ. ಇಂತಹ ಕನ್ನಡದ ಮನೆ ಮಗಳು ತಮ್ಮ ಜೀವನದಲ್ಲಿ ಮದುವೆ ಆಗುವ ಮೂಲಕ ಮಹತ್ವದ ಹೆಜ್ಜೆ ಇಡ್ತಿರೋದು ನಿಜಕ್ಕೂ ಖುಷಿಯ ವಿಚಾರ. ಅಡ್ವಾನ್ಸ್ ಹ್ಯಾಪಿ ಮ್ಯಾರೀಡ್ ಲೈಫ್ ಅನುಶ್ರೀ.





