ಅರುಂಧತಿ, ಬಾಹುಬಲಿ, ಭಾಗಮತಿ ಫೇಮ್ ಅನುಷ್ಕಾ ಶೆಟ್ಟಿ ಕರಿಯರ್ ಮುಗೀತಿ ಅಂತಿದ್ರು ಜನ. ಆದ್ರೀಗ ಆಕೆಯ ಸಿನಿಮಾ ಮಾಡಿರೋ ಬ್ಯುಸಿನೆಸ್ ನೋಡಿದ್ರೆ ಬಾಯ್ ಮೇಲೆ ಬೆರಳಿಡ್ತೀರಾ. ಘಾಟಿ ಸಿನಿಮಾ ರಿಲೀಸ್ಗೂ ಮೊದಲೇ ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಕನ್ನಡತಿಯ ಗತ್ತು, ಗಮ್ಮತ್ತಿನ ಸ್ಟೋರಿ ಇಲ್ಲಿದೆ.
ಬಾಹುಬಲಿ ದೇವಸೇನಾಗೆ ಅದ್ಯಾಕೋ ಅದೃಷ್ಠ ಕೈ ಕೊಟ್ಟಿದ್ದು ಸುಳ್ಳಲ್ಲ. ಹಾಗಂತ ಆಕೆ ತನ್ನ ಪ್ರಯತ್ನಗಳನ್ನ ಮಾತ್ರ ಎಂದೂ ಕೊನೆಗೊಳಿಸಲಿಲ್ಲ. ನಿರಂತರ ಸಿನಿಮಾ ಮಾಡ್ತಾನೇ ಇದ್ದಾರೆ. ಒಂದ್ಕಡೆ ವಯಸ್ಸಾಗ್ತಿದೆ. ಮದುವೆ ಆಗಿಲ್ಲ ಮದುವೆ ಯಾವಾಗ..? ಹುಡುಗ ಯಾರು..? ಪ್ರಭಾಸ್ನೇ ಮದ್ವೆ ಆಗ್ತೀರಾ ಅನ್ನೋ ಪ್ರಶ್ನೆಗಳು. ಮತ್ತೊಂದ್ಕಡೆ ಸಿಕ್ಕಾಪಟ್ಟೆ ದಪ್ಪ ಆಗಿ, ಅವಕಾಶಗಳಿಲ್ಲದೆ ಮನೆಯಲ್ಲಿ ಕೈ ಕಟ್ಟಿ ಕೂರುವ ಕೆಟ್ಟ ಗಳಿಗೆ. ಇವೆಲ್ಲವುಗಳ ಮಧ್ಯೆ ಅನುಷ್ಕಾ ಮಾತ್ರ ಗಟ್ಟಿಗಿತ್ತಿ ಅಂತ ಪ್ರೂವ್ ಮಾಡಿ ತೋರಿಸಿದ್ದಾರೆ.
43 ವರ್ಷದ ಅನುಷ್ಕಾ ಶೆಟ್ಟಿ, ನಾಯಕನಟಿಯಾಗಿ ಮಾಡಿದ ಪಾತ್ರಗಳಷ್ಟೇ ಮಹಿಳಾ ಪ್ರಧಾನ ಸಿನಿಮಾಗಳಿಂದಲೂ ಖ್ಯಾತಿ ಗಳಿಸಿದ್ರು. ಅರುಂಧತಿ, ಭಾಗಮತಿ, ರುದ್ರಮಾದೇವಿ, ಸೈಜ್ ಝೀರೋ ಹೀಗೆ ಸಾಲು ಸಾಲು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಿಂಚಿದ್ರು. ಅವುಗಳ ಸಾಲಿಗೆ ಈಗ ಘಾಟಿ ಹೊಸದಾಗಿ ಸೇರಿಕೊಳ್ತಿದೆ. ಸಿಂಗಲ್ ಟೀಸರ್ನಿಂದಲೇ ಧೂಳೆಬ್ಬಿಸಿದ್ದ ಘಾಟಿ, ಅಕ್ಷರಶಃ ಹುಬ್ಬೇರಿಸಿತ್ತು.
ಸದ್ಯ ಪ್ರೀ ರಿಲೀಸ್ ಬ್ಯುಸಿನೆಸ್ನಿಂದ ಕ್ರಿಶ್ ಜಾಗರ್ಲಮುಡಿ ನಿರ್ದೇಶನದ ಘಾಟಿ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಜುಲೈ 11ಕ್ಕೆ ತೆರೆಗಪ್ಪಳಿಸಲಿರೋ ಈ ಸಿನಿಮಾ, ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮಾಡಿ, ಈ ಮೂಲಕ ಅನುಷ್ಕಾ ಮಾರ್ಕೆಟ್ ಕಿಂಚಿತ್ತೂ ಕಮ್ಮಿ ಆಗಿಲ್ಲ ಅನ್ನೋದನ್ನ ಮನದಟ್ಟು ಮಾಡಿದೆ. ಟಿವಿ, ಓಟಿಟಿ ಹಾಗೂ ಆಡಿಯೋ ರೈಟ್ಸ್ 36 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿದೆ ಎನ್ನಲಾಗಿದೆ.
ಆದಿತ್ಯ ಮ್ಯೂಸಿಕ್ಗೆ ಚಿತ್ರದ ಆಡಿಯೋ ರೈಟ್ಸ್, ಅಮೆಜಾನ್ಗೆ ಓಟಿಟಿ ರೈಟ್ಸ್ ಮಾರಾಟವಾಗಿದ್ದು, ಸದ್ಯ ಘಾಟಿ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ವಿಕ್ರಮ್ ಪ್ರಭು, ರಮ್ಯಾಕೃಷ್ಣ, ಜಗಪತಿ ಬಾಬು ಕೂಡ ತಾರಾಗಣದಲ್ಲಿದ್ದು, ಸಿನಿಮಾ ಜುಲೈ 11ರಿಂದ ಪ್ರೇಕ್ಷಕರನ್ನ ರಂಜಿಸೋಕೆ ಥಿಯೇಟರ್ಗೆ ಲಗ್ಗೆ ಇಡ್ತಿದೆ.
ಇದರ ಮಧ್ಯೆ ಅನುಷ್ಕಾ ಕರಿಯರ್ ಮುಗಿದೇ ಹೋಯ್ತು ಅಂದವ್ರಿಗೆ ಮಲಯಾಳಂಗೂ ಎಂಟ್ರಿ ಕೊಟ್ಟು, ತನ್ನ ನಟನಾ ಗಮ್ಮತ್ತು ತೋರಿದ್ದಾರೆ ಅನುಷ್ಕಾ ಶೆಟ್ಟಿ. ಜಯಸೂರ್ಯ ಜೊತೆಗೂಡಿ 100 ಕೋಟಿ ಬಜೆಟ್ನ ಖತನಾರ್ ಅನ್ನೋ ಮಲಯಾಳಂ ಚಿತ್ರದಲ್ಲಿ ಬಣ್ಣ ಹಚ್ಚಿರೋ ಅನುಷ್ಕಾ, ಕೇರಳ ಸಿನಿದುನಿಯಾಗೂ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಈಕೆ ಚಿತ್ರರಂಗಕ್ಕೆ ಬಂದು 20 ವರ್ಷಗಳೇ ಕಳೆಯಿತು. ಇಂದಿಗೂ ಮದ್ವೆ ಆಗದೆ ಉಳಿದರೂ ಸಹ ಅದೇ ಛಾರ್ಮ್ ಉಳಿಸಿಕೊಂಡಿದ್ದಾರೆ. ಆದ್ರೆ ಆಗ ಮೆರೆಸಿದಂತಹ ರಾಜಮೌಳಿ, ನಾಗಾರ್ಜುನ್ ಹಾಗೂ ಪ್ರಭಾಸ್ ಚಿತ್ರಗಳಲ್ಲಿ ಮತ್ತೆ ಕಾಣಿಸಿಕೊಳ್ಳಬೇಕು ಅನ್ನೋದು ಪ್ರೇಕ್ಷಕರ ಆಶಯ.