ಹೈದರಾಬಾದ್: ಭಾರತೀಯ ಚಿತ್ರರಂಗದ ತಾಂತ್ರಿಕ ಪಯಣದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕರಾಗಿ ನಟಿಸುತ್ತಿರುವ, ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯದ ಹಾಗೂ ಸನ್ ಪಿಕ್ಚರ್ಸ್ ಸಂಸ್ಥೆಯ ಕಲಾನಿಧಿ ಮಾರನ್ ನಿರ್ಮಾಣದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಮಹತ್ವಾಕಾಂಕ್ಷೆಯ ಚಿತ್ರ ‘ರಾಕಾ’, ಸಿನಿ ತಂತ್ರಜ್ಞಾನದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿ ಪ್ರತಿಷ್ಠಿತ ‘ಗಿನ್ನೆಸ್ ವಿಶ್ವ ದಾಖಲೆ’ಗೆ ಭಾಜನವಾಗಿದೆ.
“ನೈಜ ಸಮಯದಲ್ಲಿ ಏಕಕಾಲಕ್ಕೆ ಗರಿಷ್ಠ ಸಂಖ್ಯೆಯ ಕಲಾವಿದರ ಮೋಷನ್-ಕ್ಯಾಪ್ಚರ್” (Most People Motion-Captured in Real-Time) ಎಂಬ ವಿಭಾಗದಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. 2026ರ ಫೆಬ್ರವರಿಯಲ್ಲಿ ನಡೆದ ಈ ಅಭೂತಪೂರ್ವ ತಾಂತ್ರಿಕ ಪ್ರಯತ್ನದಲ್ಲಿ, ಒಂದೇ ಸೆಷನ್‌ನಲ್ಲಿ ಒಟ್ಟು 37 ಕಲಾವಿದರನ್ನು ರಿಯಲ್-ಟೈಮ್‌ನಲ್ಲಿ ಸೆರೆಹಿಡಿದು ಈ ಸಾಧನೆ ಮಾಡಲಾಗಿತ್ತು. ಇದೀಗ 2026ರ ಸೆಪ್ಟೆಂಬರ್ 15ರಂದು ಈ ದಾಖಲೆಯನ್ನು ಗಿನ್ನೆಸ್ ಸಂಸ್ಥೆಯು ಅಧಿಕೃತವಾಗಿ ದೃಢೀಕರಿಸಿದೆ. ಚಿತ್ರತಂಡದ ಪ್ರಮುಖ ಕಲಾವಿದರು ಮತ್ತು ತಾಂತ್ರಿಕ ವರ್ಗದ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ, ಗಿನ್ನೆಸ್ ವಿಶ್ವ ದಾಖಲೆಯ ಹಿರಿಯ ತೀರ್ಪುಗಾರರಾದ ಸ್ವಪ್ನಿಲ್ ದಂಗ್ರಿಕರ್ ಅವರು ನಾಯಕ ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಅವರಿಗೆ ಅಧಿಕೃತ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಈ ಅಪರೂಪದ ಮೋಷನ್-ಕ್ಯಾಪ್ಚರ್ ಪ್ರಕ್ರಿಯೆಯು ಭಾರತೀಯ ಚಿತ್ರರಂಗದ ಮಟ್ಟಿಗೆ ಅತ್ಯಂತ ಸವಾಲಿನದ್ದಾಗಿತ್ತು. ಇದರಲ್ಲಿ 4 ವರ್ಷದ ಪುಟ್ಟ ಮಗುವಿನಿಂದ ಹಿಡಿದು 70 ವರ್ಷದ ಹಿರಿಯ ವೃದ್ಧರವರೆಗೆ ಒಟ್ಟು 37 ಜನ ಕಲಾವಿದರು ಭಾಗವಹಿಸಿದ್ದರು. ಒಂದೇ ಕ್ಯಾಪ್ಚರ್ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ಕಲಾವಿದರ ಮುಖಭಾವ, ದೈಹಿಕ ಭಾಷೆ ಹಾಗೂ ಅಭಿನಯದ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ತಪ್ಪಿಹೋಗದಂತೆ ನೈಜವಾಗಿ ಸೆರೆಹಿಡಿಯುವುದು ದೊಡ್ಡ ಸವಾಲಾಗಿತ್ತು.
ಈ ಬೃಹತ್ ಸಾಹಸವನ್ನು ಸಾಕಾರಗೊಳಿಸಲು ಚಿತ್ರದ ವಿಎಫ್‌ಎಕ್ಸ್ ಪ್ರೊಡ್ಯೂಸರ್ ನೇತೃತ್ವದಲ್ಲಿ ಹೊಚ್ಚಹೊಸ ಮೋಷನ್-ಕ್ಯಾಪ್ಚರ್ ಪೈಪ್‌ಲೈನ್ ಹಾಗೂ ವರ್ಕ್‌ಫ್ಲೋ ಸಿದ್ಧಪಡಿಸಲಾಗಿತ್ತು. ಬರೋಬ್ಬರಿ 92 ಅತ್ಯಾಧುನಿಕ ಆಪ್ಟಿಕಲ್ ಮೋಷನ್-ಕ್ಯಾಪ್ಚರ್ ಕ್ಯಾಮೆರಾಗಳು, ನಿಖರ ಕ್ಯಾಲಿಬ್ರೇಷನ್, ನೆಟ್‌ವರ್ಕಿಂಗ್, ಸಿಂಕ್ರೊನೈಸೇಶನ್, ಅನ್‌ರಿಯಲ್ ಎಂಜಿನ್‌ನ ರಿಯಲ್-ಟೈಮ್ ದೃಶ್ಯೀಕರಣ, ವಿಟ್‌ನೆಸ್ ಕ್ಯಾಮೆರಾಗಳು ಹಾಗೂ ಫೇಶಿಯಲ್ ಕ್ಯಾಪ್ಚರ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ಪರಿಸರವನ್ನು ಇದಕ್ಕಾಗಿ ನಿರ್ಮಿಸಲಾಗಿತ್ತು.
ಸನ್ ಪಿಕ್ಚರ್ಸ್ ಸಂಸ್ಥೆಯ ಭವ್ಯ ನಿರ್ಮಾಣ ಮೌಲ್ಯ, ಅಟ್ಲಿಯವರ ದೂರದೃಷ್ಟಿ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಕಲಾ ಬದ್ಧತೆ, ಆಪಲ್ ಆರ್ಟ್ ಸ್ಟುಡಿಯೋದ ತಾಂತ್ರಿಕ ಪರಿಣತಿ ಹಾಗೂ ಸಮಗ್ರ ವಿಎಫ್‌ಎಕ್ಸ್ ತಂಡದ ಒಗ್ಗಟ್ಟಿನ ಶ್ರಮದಿಂದ ಈ ಜಾಗತಿಕ ಮೈಲಿಗಲ್ಲು ಸಾಧ್ಯವಾಗಿದೆ. ಈ ಐತಿಹಾಸಿಕ ಹೆಗ್ಗಳಿಕೆಯು ಭಾರತೀಯ ಚಿತ್ರರಂಗದ ಸೃಜನಶೀಲತೆ ಮತ್ತು ಆಧುನಿಕ ತಂತ್ರಜ್ಞಾನದ ಸಾಮರ್ಥ್ಯವನ್ನು ಜಾಗತಿಕ ಭೂಪಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.





