ಸೋಮವಾರ ರಾತ್ರಿ ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬೆಂಗಾವಲು ವಾಹನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮರ್ಸಿಡಿಸ್ ಕಾರು, ಆಟೋ ರಿಕ್ಷಾ ಹಾಗೂ ಇನ್ನೋವಾ ಕಾರು ನಡುವೆ ನಡೆದ ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ನಟ ಅಕ್ಷಯ್ ಕುಮಾರ್ ಹಾಗೂ ಅವರ ಪತ್ನಿ ಟ್ವಿಂಕಲ್ ಖನ್ನಾ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಸೋಮವಾರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಜುಹು–ವರ್ಸೋವಾ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ತಮ್ಮ ಬೆಂಗಾವಲು ವಾಹನದ ಮುಂದೆ ಇದ್ದ ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಹಿಂದೆ ಸಾಗುತ್ತಿದ್ದ ಬೆಂಗಾವಲು ವಾಹನ ಈ ಅಪಘಾತಕ್ಕೆ ಒಳಪಟ್ಟಿದೆ.
ವೇಗದ ಮರ್ಸಿಡಿಸ್ ಕಾರಿನಿಂದ ಅಪಘಾತ
ಅತಿವೇಗವಾಗಿ ಚಲಿಸುತ್ತಿದ್ದ ಮರ್ಸಿಡಿಸ್ ಕಾರು ರಸ್ತೆಬದಿ ಸಾಗುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿ ಇದ್ದ ಚಾಲಕ ಮತ್ತು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ನಿಯಂತ್ರಣ ತಪ್ಪಿದ ಆಟೋ, ಅಕ್ಷಯ್ ಕುಮಾರ್ ಅವರ ಬೆಂಗಾವಲು ಇನ್ನೋವಾ ಕಾರಿಗೆ ಅಪ್ಪಳಿಸಿದೆ.
ಆಟೋ ರಿಕ್ಷಾದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯರು ಮತ್ತು ವಾಹನ ಸವಾರರು ರಕ್ಷಿಸಲು ಪ್ರಯತ್ನಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು
ಅಪಘಾತದ ಮಾಹಿತಿ ತಿಳಿದ ಕೂಡಲೇ ಜುಹು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಎಫ್‌ಐಆರ್ ದಾಖಲಾಗಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಈ ಅಪಘಾತದಲ್ಲಿ ಅಕ್ಷಯ್ ಕುಮಾರ್ ಅವರ ಬೆಂಗಾವಲು ವಾಹನದ ಚಾಲಕರ ಯಾವುದೇ ತಪ್ಪಿಲ್ಲ. ಮರ್ಸಿಡಿಸ್ ಕಾರಿನ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯೇ ಈ ದುರ್ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ದೃಶ್ಯಗಳು
ಈ ಭೀಕರ ಅಪಘಾತದ ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಜ್ಜುಗುಜ್ಜಾದ ಆಟೋ ರಿಕ್ಷಾ ಹಾಗೂ ರಸ್ತೆ ಮೇಲೆ ಬಿದ್ದಿರುವ ಅವಶೇಷಗಳ ದೃಶ್ಯಗಳು ಜನರಲ್ಲಿ ಆತಂಕ ಮೂಡಿಸಿವೆ. ಇಲ್ಲಿವರೆಗೆ ನಟ ಅಕ್ಷಯ್ ಕುಮಾರ್ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಟ್ವಿಂಕಲ್ ಖನ್ನಾ ಅವರೂ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.





