ಚಿಕ್ಕಮಗಳೂರು: ದಕ್ಷಿಣ ಭಾರತದ ಚಿತ್ರರಂಗದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಇದೀಗ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ, ಶಾರದಾಂಬೆಯ ದರ್ಶನ ಪಡೆದಿದ್ದಾರೆ. ನಟಿಯ ಈ ಧಾರ್ಮಿಕ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಮಡಿಲಲ್ಲಿರುವ ಶೃಂಗೇರಿ ಶಾರದಾ ಪೀಠವು ದೇಶದ ಪ್ರಮುಖ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿನ ಶಾರದಾಂಬೆ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆಯುತ್ತಾರೆ. ಇದೀಗ ಖ್ಯಾತ ನಟಿ ತ್ರಿಷಾ ಕೂಡ ಶಾರದಾಂಬೆಯ ಸನ್ನಿಧಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದಿದ್ದಾರೆ.
ನಟಿ ತ್ರಿಷಾ ಅವರು ತಮ್ಮ ಶೃಂಗೇರಿ ಭೇಟಿಯ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ದೇವಾಲಯದ ದೀಪಾಲಂಕೃತ ಭವ್ಯ ರಾಜಗೋಪುರದ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವ ಅವರು, ತಿಳಿ ಗುಲಾಬಿ ಬಣ್ಣದ ಸಲ್ವಾರ್ ಧರಿಸಿ ಸರಳ ಹಾಗೂ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳ ಜೊತೆಗೆ ‘DIVINE’ ಎಂಬ ಒಂದೇ ಒಂದು ಪದವನ್ನು ಕ್ಯಾಪ್ಶನ್ ಆಗಿ ಬರೆದುಕೊಂಡಿದ್ದಾರೆ..
ತ್ರಿಷಾ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತ್ರಿಷಾ ಅವರ ಹೆಸರು ಸಿನಿಮಾ ಸುದ್ದಿಗಳ ಜೊತೆಗೆ ರಾಜಕೀಯ ವಲಯದಲ್ಲೂ ಚರ್ಚೆಯಾಗುತ್ತಿದೆ. ನಟಿ ತಮಿಳುನಾಡು ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಕುರಿತು ನಟಿಯ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಸಿನಿರಂಗದಲ್ಲೂ ತೊಡಗಿಸಿಕೊಂಡಿರುವ ತ್ರಿಷಾ, ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಅವರು, ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದಲೂ ಆಗಾಗ ಸುದ್ದಿಯಾಗುತ್ತಾರೆ. ಇದೀಗ ಶೃಂಗೇರಿ ಶಾರದಾ ಪೀಠದ ಭೇಟಿಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ…





