ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ 45 ನಾಳೆ ತೆರೆಗಪ್ಪಳಿಸುತ್ತಿದೆ. ಆದ್ರೆ ಎರಡು ದಿನ ಮೊದಲೇ ಕ್ರಿಟಿಕ್ಸ್‌ಗಾಗಿ ಸ್ಪೆಷಲ್ ಪ್ರೀಮಿಯರ್ ಆಯ್ತು. ಇದು ಫ್ಯಾಂಟಸಿನಾ ಅಥ್ವಾ ರಿಯಾಲಿಟಿನಾ ಅಂತಿದ್ದವರಿಗೆ ಕ್ಲ್ಯಾರಿಟಿ ಸಿಕ್ಕಿದೆ. ಗರುಡ ಪುರಾಣ ಈ ಚಿತ್ರದಲ್ಲಿ ಅನಾವರಣ ಆಯ್ತಾ..? ಪಾಪ-ಪುಣ್ಯಗಳ ಲೆಕ್ಕ ಆ ಶಿವ ಹಾಗೂ ಯಮನ ಬಳಿ ಹಂಡ್ರೆಡ್ ಪರ್ಸೆಂಟ್ ಪಕ್ಕಾ ಇರುತ್ತವಾ..? ಹೆಣ್ಣಿನ ವೇಷ ಹಾಕಿ ಗೆದ್ದ ಈ ವರ್ಷದ ಬ್ಲಾಕ್‌ಬಸ್ಟರ್ ಹಿಟ್ಸ್ ಸು ಫ್ರಮ್ ಸೋ, ಕಾಂತಾರ ಲಿಸ್ಟ್‌ಗೆ 45 ಕೂಡ ಸೇರಿಕೊಳ್ತಾ..? ಇಷ್ಟಕ್ಕೂ ಕಥೆ ಏನು..? ಸಿನಿಮಾ ಹೇಗಿದೆ..? ಶಿವಣ್ಣ-ಉಪ್ಪಿ-ರಾಜ್ ಅಭಿನಯ ಹೇಗಿದೆ ಅನ್ನೋದ್ರ ಕಂಪ್ಲೀಟ್ ರಿವ್ಯೂ ರಿಪೋರ್ಟ್ ಇಲ್ಲಿದೆ ನೋಡಿ…
- ಅಬ್ಬಬ್ಬಾ.. ಗರುಡ ಪುರಾಣ.. ‘45’ ಚಿತ್ರದಲ್ಲಿ ಅನಾವರಣ
- ಪಾಪ-ಪುಣ್ಯಗಳ ಲೆಕ್ಕ.. ಯಮ-ಶಿವನ ಬಳಿ ಎಲ್ಲಾ ಪಕ್ಕಾ..!
- ರಿಲೀಸ್‌ಗೆ 2 ದಿನ ಮೊದಲೇ ಬಹುನಿರೀಕ್ಷಿತ 45 ದಿಗ್ಧರ್ಶನ
- ಚಿತ್ರರಂಗದ ಇತಿಹಾಸದಲ್ಲೇ ಯಾರೂ ಮಾಡದ ಪ್ರಯೋಗ
ದಿ ವೆಯ್ಟ್ ಈಸ್ ಓವರ್.. ಕೊನೆಗೂ ಈ ವರ್ಷದ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಮೂವಿ 45 ತೆರೆಗಪ್ಪಳಿಸಿದೆ. 90 ವರ್ಷಗಳ ಇತಿಹಾಸವಿರೋ ನಮ್ಮ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಯಾರೂ ಟ್ರೈ ಮಾಡದಂತಹ ಕಥಾನಕವನ್ನು ಬೆಳ್ಳಿಪರೆದೆ ಮೇಲೆ ಪ್ರಯೋಗಿಸಲಾಗಿದೆ. ಯೆಸ್.. ನಾವು ನೀವು ಪ್ರತಿಯೊಬ್ಬರೂ ಕೇಳಿದ್ದ ಗರುಡ ಪುರಾಣ 45 ಚಿತ್ರದಲ್ಲಿ ಅನಾವರಣಗೊಂಡಿದೆ. ಅಂಥದ್ದೊಂದು ವಿನೂತನ, ವಿಭಿನ್ನ ಹಾಗೂ ವಿಶಿಷ್ಠ ಕೈಂಕರ್ಯಕ್ಕೆ ಅರ್ಜುನ್ ಜನ್ಯ ಚೊಚ್ಚಲ ಚಿತ್ರದಲ್ಲೇ ಸಾರಥ್ಯ ವಹಿಸಿರೋದು ಗ್ರೇಟ್.
ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಂತಹ ವರ್ಸಟೈಲ್ ಆ್ಯಕ್ಟರ್‌ಗಳನ್ನ ಇಟ್ಕೊಂಡು ಇಂಥದ್ದೊಂದು ಪ್ರಯೋಗಾತ್ಮಕ ಚಿತ್ರ ಮಾಡಲಾಗಿದ್ದು, ಮೊದಲಿಗೆ ನಿಮಗೆ ಗರುಡ ಪುರಾಣ ಅಂದ್ರೆ ಏನು ಅನ್ನೋದನ್ನ ಕ್ವಿಕ್ ಆಗಿ ಹೇಳಿಬಿಡ್ತೀನಿ ಕೇಳಿ. ನಮ್ಮ ಹಿಂದೂ ಧರ್ಮದ 18 ಪುರಾಣಗಳಲ್ಲಿ ಈ ಗರುಡ ಪುರಾಣ ಕೂಡ ಒಂದು. ಈ ಪವಿತ್ರ ಗ್ರಂಥದಲ್ಲಿ ಜೀವನ, ಸಾವು, ಮರಣದ ನಂತರ ಆತ್ಮದ ಪಯಣ, ಸ್ವರ್ಗ ಹಾಗೂ ನರಕಗಳ ಬಗ್ಗೆ ಆಳವಾದ ವಿವರಣೆಗಳಿವೆ. ಪ್ರಮುಖವಾಗಿ ಆತ್ಮದ ಪ್ರಯಾಣದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತದೆ.
ಅಂದಹಾಗೆ ಮನುಷ್ಯ ಪಾಪ ಮಾಡಿದ್ರೆ ನರಕಕ್ಕೆ ಹೋಗ್ತಾನೆ.. ಪುಣ್ಯ ಮಾಡಿದ್ರೆ ಸ್ವರ್ಗ ವಾಸಿ ಆಗ್ತಾನೆ ಅನ್ನೋ ಮಾತು ಅಕ್ಷರಶಃ ಸತ್ಯ. ಕರ್ಮದ ಫಲಾನುಫಲಗಳ ಮೇಲೆ ಜೀವನ ನಿಂತಿದೆ. ಸತ್ಕಾರ್ಯಗಳನ್ನ ಮಾಡಿದ್ರೆ ಸ್ವರ್ಗದ ಬಾಗಿಲು ತೆರೆಯುತ್ತೆ. ಪಾಪಗಳನ್ನ ಮಾಡಿದ್ರೆ ನರಕದ ದರ್ಶನವಾಗುತ್ತೆ. ಅದನ್ನ ಯಮಧರ್ಮರಾಜನ ಪಾತ್ರದಲ್ಲಿ ಉಪೇಂದ್ರ, ಲಾರ್ಡ್ ಶಿವನಾಗಿ ಶಿವರಾಜ್‌ಕುಮಾರ್ ಹಾಗೂ ಶ್ರೀಸಾಮಾನ್ಯ ವ್ಯಕ್ತಿಯಾಗಿ ರಾಜ್ ಬಿ ಶೆಟ್ಟಿ ಬಹಳ ಅರ್ಥಪೂರ್ಣವಾಗಿ ನಿರ್ವಹಿಸಿದ್ದಾರೆ.
ರಿಲೀಸ್‌ಗೂ ಎರಡು ದಿನ ಮೊದಲೇ ಈ ಸಿನಿಮಾ ಸ್ಪೆಷಲ್ ಪ್ರೀಮಿಯರ್ ಕಂಡಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಈ ಸಿನಿಮಾದ ಮೇಲೆ ಇದ್ದ ನಂಬಿಕೆ, ಕಥೆ, ಕಲಾವಿದರ ನಟನೆ ಹಾಗೂ ಮೇಕಿಂಗ್ ಮೇಲೆ ಇದ್ದ ಭರವಸೆ, ಸಿನಿಮಾ ಪತ್ರಕರ್ತರಿಗೆ ಅಡ್ವಾನ್ಸ್ ಆಗಿ ಸಿನಿಮಾನ ತೋರಿಸುವಂತೆ ಮಾಡಿತು. ರಾಜ್ ಬಿ ಶೆಟ್ಟಿ ಮೊದಲಿಗೆ ಬಂದು ನಿರ್ದೇಶನ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಸಾಥ್ ನೀಡಿದ್ರೆ, ಸಿನಿಮಾ ಮುಗೀತಾ ಇದ್ದಂತೆ ಬಂದ ಶಿವಣ್ಣ-ಉಪ್ಪಿ ಅಭೂತಪೂರ್ವ ಪ್ರತಿಕ್ರಿಯೆಗಳಿಗೆ ದಿಲ್‌ಖುಷ್ ಆದ್ರು.
- ನೋ ಫ್ಯಾಂಟಸಿ 100% ರಿಯಾಲಿಟಿ..45 ಡೇಸ್ ಓಟ.. ಕಾಲನ ಆಟ
- ಶಿವಪ್ಪ-ರಾಯಪ್ಪನ ಪ್ರಪಂಚದಲ್ಲಿ ವಿನಯ್ ಒದ್ದಾಟದ ಕಥೆ
ಇದು ಫ್ಯಾಂಟಸಿ ಕಥೆ ಆದ್ರೂ ರಿಯಾಲಿಟಿಗೆ ಬಹಳ ಹತ್ತಿರ ಇದೆ. ಯಾಕಂದ್ರೆ ಪ್ರತಿಯೊಬ್ಬ ವ್ಯಕ್ತಿಗೂ ಕನೆಕ್ಟ್ ಆಗುತ್ತೆ. ವಿನಯ್ ಅನ್ನೋ ಐಟಿ ಉದ್ಯೋಗಿಯೊಬ್ಬನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಆ ಶ್ರೀಸಾಮಾನ್ಯನಾಗಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲೇ ಹೆಲ್ಮೆಟ್ ಹಾಕದೆ, ಬೈಕ್‌ನಲ್ಲಿ ಮೊಬೈಲ್ ಮಾತಾಡ್ತಾ ಹೋಗಿ ಶ್ವಾನವೊಂದಕ್ಕೆ ಡಿಕ್ಕಿ ಹೊಡೆದು ಅದರ ಸಾವಿಗೆ ಕಾರಣಕರ್ತನಾಗ್ತಾನೆ. ಅದರ ಮಾಲೀಕ ರಾಯಪ್ಪ ಆ ರೋಜಿ ಅನ್ನೋ ಶ್ವಾನದ ಸಾವಿಗೆ ಕಾರಣಕರ್ತನಾದವನನ್ನ 45 ದಿನದಲ್ಲಿ ಕೊಲ್ತೀನಿ ಅಂತ ಶಪಥ ಮಾಡ್ತಾನೆ.
ರಾಯಪ್ಪ ಪಾತ್ರದಲ್ಲಿ ಉಪೇಂದ್ರ ಖಡಕ್ ಖಳನಾಯಕನಂತೆ ಭಾಸವಾದ್ರೆ, ಆ ವಿನಯ್‌ನ ಕಾಪಾಡೋಕೆ ಬರೋ ಶಿವಪ್ಪನಾಗಿ ಶಿವಣ್ಣ ಸಖತ್ ಮ್ಯಾಜಿಕ್ ಮಾಡ್ತಾರೆ. ಇಲ್ಲಿ ತತ್ವಗಳಿವೆ, ಜೀವನದ ಪಾಠಗಳಿವೆ. ಪಾಪಗಳು, ಪುಣ್ಯಗಳ ಪಕ್ಕಾ ಲೆಕ್ಕಗಳಿವೆ. ಈ ಶಿವಪ್ಪ-ರಾಯಪ್ಪನ ನಡುವೆ ವಿನಯ್ ಹೇಗೆ ಒದ್ದಾಡ್ತಾನೆ ಅನ್ನೋದೇ 45 ಸಿನಿಮಾದ ಕಥೆ. ಬಹುಶಃ ಈ ಚಿತ್ರ ನೋಡಿದ್ರೆ ಜನ ತಮಗೆ ಅರಿವೇ ಇಲ್ಲದಂತೆ ಮಾಡ್ತಿರೋ ತಪ್ಪುಗಳನ್ನ ಖಂಡಿತ ತಿದ್ದಿಕೊಳ್ತಾರೆ.
ವಿನಯ್‌ಗೆ 45 ದಿನ ಸಮಯ ನೀಡುವ ರಾಯಪ್ಪ, 45ನೇ ದಿನ ಪ್ರಾಣ ತೆಗೀತೀನಿ ಎಂದಿರ್ತಾರೆ. ಪ್ರಾಣ ಭಯದಲ್ಲಿ ಓಡುವ ಆತ, ರಾಯಪ್ಪನನ್ನೇ ಮುಗಿಸಲು ಸುಪಾರಿ ಕೊಡ್ತಾನೆ. ಅವರನ್ನೆಲ್ಲಾ ರಾಯಪ್ಪ ಉಡೀಸ್ ಮಾಡ್ತಾ ಬರ್ತಾರೆ. ಇದರ ನಡುವೆ ಒಂದು ನಿವಿರಾದ ಪ್ರೇಮಕಥೆ. ಕೌಸ್ತುಭ ಮಣಿ ಹಾಗೂ ರಾಜ್ ಶೆಟ್ಟಿ ಮೊಹಬ್ಬತ್ ಕಹಾನಿ ನೋಡುಗರಿಗೆ ಮುದ ನೀಡುತ್ತೆ.
- ಸು ಫ್ರಮ್ ಸೋ, ಕಾಂತಾರ, 45.. ಹೆಣ್ಣಿನ ವೇಷಕ್ಕೆ ಸಕ್ಸಸ್
- ಗೆಜ್ಜೆ ಕಟ್ಟಿದ್ರೆ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಅನ್ನೋ ಸೂತ್ರ
- 11 ಮಹಾ ಅವತಾರಗಳು.. ಲಿವಿಂಗ್ ಲೆಜೆಂಡ್ ಶಿವತಾಂಡವ
- ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಕನೆಕ್ಟ್ ಆಗೋ ಚಿತ್ರ..!
ಯೆಸ್.. ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಾದ ಸು ಫ್ರಮ್ ಸೋ, ಕಾಂತಾರ ಚಾಪ್ಟರ್-1 ಹಾಗೂ ಈಗಿನ 45 ಸಿನಿಮಾಗೆ ಒಂದು ಸಾಮ್ಯತೆ ಇದೆ. ಅದೇನಪ್ಪಾ ಅಂದ್ರೆ ಹೀರೋ ಹೆಣ್ಣಿನ ವೇಷ ತಾಳುವುದು. ಇದೊಂಥರಾ ಸಕ್ಸಸ್ ಸೂತ್ರವೂ ಹೌದು. ಯಾಕಂದ್ರೆ ಸು ಫ್ರಮ್ ಸೋ ಚಿತ್ರದ ಉದ್ದೇಶ ಬಹಳ ಚೆನ್ನಾಗಿದೆ. ಹಾಗಾಗಿಯೇ ಹೀರೋ ಜೆ ಪಿ ತುಮ್ಮಿನಾಡ್ ಹೆಣ್ಣಿನ ವೇಷ ಧರಿಸೋ ಸುಲೋಚನ ಸೂತ್ರ ವರ್ಕೌಟ್ ಆಯ್ತು. ಇತ್ತ ಕಾಂತಾರ-1ನಲ್ಲಿ ಕೂಡ ಕ್ಲೈಮ್ಯಾಕ್ಸ್ ಫೈಟ್‌ನಲ್ಲಿ ಬಾಮುಂಡಿಯಾಗಿ ರಿಷಬ್ ಶೆಟ್ಟಿ ಆರ್ಭಟಿಸಿದ್ರು.
ಈಗ ಅದು ಶಿವಣ್ಣನ ಸರದಿ. ಶಿವನ ಅವತಾರಗಳಲ್ಲಿ ಅರ್ಧ ನಾರೀಶ್ವರಿ ಕೂಡ ಒಂದು. 45 ಚಿತ್ರದಲ್ಲಿ ಶಿವಣ್ಣ ಬರೀ ಶಿವಪ್ಪನಲ್ಲ. ಬರೋಬ್ಬರಿ 11 ಅವತಾರಗಳಲ್ಲಿ ಹುಬ್ಬೇರಿಸಿದ್ದಾರೆ. ಉಪ್ಪಿ ಹೇಳ್ತಿದ್ದ ಅವರೊಬ್ಬರಲ್ಲ ಅನ್ನೋ ಮಾತಿಗೆ ಕ್ಲೈಮ್ಯಾಕ್ಸ್ ಉತ್ತರ ಆಗುತ್ತೆ. ರೆಡ್ ಸ್ಯಾರಿಯಲ್ಲಿ ಗೆಜ್ಜೆ ಕಟ್ಟಿ ಅರ್ಧ ನಾರೀಶ್ವರನ ಶಿವ ತಾಂಡವ ನೋಡೋಕೆ ಎರಡು ಕಣ್ಣು ಸಾಲುವುದಿಲ್ಲ.
- ಅನಕೊಂಡ ರೀತಿಯ ಹಾವುಗಳ ಆರ್ಭಟ.. ಸಿಜಿ ಸೂಪರ್
- ನೆಕ್ಸ್ಟ್ ಲೆವೆಲ್ ಮೇಕಿಂಗ್.. 45 ಪರ್ವಕ್ಕೆ ಅರ್ಜುನ ಸಾರಥಿ
45 ಸಿನಿಮಾ ಕಥೆ ಹಾಗೂ ಪಾತ್ರಗಳಿಂದಷ್ಟೇ ಅಲ್ಲ, ಮೇಕಿಂಗ್‌ನಿಂದಲೂ ವಿಭಿನ್ನ. ಈ ಸಿನಿಮಾ ಸಿಕ್ಕಾಪಟ್ಟೆ ಸಿಜಿ ಹಾಗೂ ವಿಎಫ್‌ಎಕ್ಸ್‌ನಿಂದ ಕೂಡಿದೆ. ಅದ್ರಲ್ಲೂ ಕ್ಲೈಮ್ಯಾಕ್ಸ್ ಕಂಪ್ಲೀಟ್ ಸಿಜಿಯಿಂದಲೇ ದೃಶ್ಯ ವೈಭವ ಮೂಡಿದೆ. ಭಯಾನಕ ಯುದ್ಧದ ಸೀಕ್ವೆನ್ಸ್, ಅಲ್ಲಿನ ವೆಪನ್ಸ್, ಕಾಸ್ಟ್ಯೂಮ್ಸ್ ಎಲ್ಲವೂ ಅದ್ಭುತ, ಅಮೋಘ, ಅದ್ವಿತೀಯ. ಅನಕೊಂಡ ರೀತಿಯ ಬೃಹತ್ ಹಾವುಗಳನ್ನ ಸಿಜಿ ಮೂಲಕ ಕ್ರಿಯೇಟ್ ಮಾಡಿರೋದು ಇಂಪ್ರೆಸ್ಸೀವ್.
ಯಮನ ಸೈನ್ಯದ ವಿರುದ್ಧ ಶಿವ ಬರೋಬ್ಬರಿ ಹನ್ನೊಂದು ಅವತಾರಗಳಲ್ಲಿ ತಾಂಡವವಾಡುವ ದೃಶ್ಯ ನೋಡೋಕೆ ಮೈ ಜುಮ್ಮೆನಿಸುತ್ತೆ. ಅದ್ರಲ್ಲೂ ಕೊನೆಯ 20 ನಿಮಿಷ ಚಪ್ಪಲಿಯನ್ನ ಕಳಚಿ ಸಿನಿಮಾ ನೋಡ್ತಾರೆ ಚಿತ್ರಪ್ರೇಮಿಗಳು. ಅಷ್ಟರ ಮಟ್ಟಿಗೆ ನೋಡುಗರನ್ನ ಆವರಿಸಿಕೊಳ್ಳಲಿದೆ 45 ಸಿನಿಮಾ.
ಅರ್ಜುನ್ ಜನ್ಯ ಚೊಚ್ಚಲ ಚಿತ್ರದಲ್ಲೇ ಇಂತಹ ಪ್ರಯೋಗ ಮಾಡಿರೋದು ನಿಜಕ್ಕೂ ಗಮನಾರ್ಹ. ಇನ್ನು ಅವರ ಆ ಕನಸಿಗೆ ಕೋಟಿ ಕೋಟಿ ರೂಪಾಯಿ ನೀರಂತೆ ಎರೆದು, ಸಾಕಾರಗೊಳಿಸಿರೋ ಸೂರಜ್ ಪ್ರೊಡಕ್ಷನ್ಸ್‌ನ ರಮೇಶ್ ರೆಡ್ಡಿ ಪ್ರೊಡಕ್ಷನ್ ವ್ಯಾಲ್ಯೂಸ್ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತವೆ. ಎಂಟು ವರ್ಷಗಳಲ್ಲಿ ಎಂಟು ಸಿನಿಮಾ ಮಾಡಿರೋ ರಮೇಶ್ ರೆಡ್ಡಿ, ಬಾಲಿವುಡ್, ಮಲಯಾಳಂಗೂ ತಮ್ಮ ನಿರ್ಮಾಣ ಸಂಸ್ಥೆಯನ್ನ ವಿಸ್ತರಿಸಿದ್ದಾರೆ. ಆದ್ರೆ ಅವ್ರ ಸಿನಿಮಾ ಪ್ಯಾಷನ್ ಎಂಥದ್ದು ಅನ್ನೋದಕ್ಕೆ ಈ 45 ಮೇಕಿಂಗ್ ಕೈಗನ್ನಡಿ ಆಗಿದೆ.
ಪ್ರಮೋದ್ ಶೆಟ್ಟಿ, ಸುಧಾರಾಣಿ, ರಾಜೇಂದ್ರನ್, ಮಾನಸಿ ಸುಧೀರ್ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ಈ ಚಿತ್ರದಲ್ಲಿದ್ದು, ಎಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸತ್ಯ ಹೆಗಡೆ ಕ್ಯಾಮೆರಾ ವರ್ಕ್, ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಸಿನಿಮಾಗೆ ಪ್ಲಸ್ ಆಗಿದ್ದು, ಸಿಜಿ ಹಾಗೂ ವಿಎಫ್‌ಎಕ್ಸ್‌ನಲ್ಲಿ ಇನ್ನು ಕೊಂಚ ಪಕತ್ವೆ ಇದ್ದಿದ್ರೆ, ರಾಜಮೌಳಿಯ ಬಾಹುಬಲಿ ರೇಂಜ್‌ಗೆ ಸೌಂಡ್ ಆಗುವಂತಹ ಚಿತ್ರವಾಗ್ತಿತ್ತು.
ಈ ಸಿನಿಮಾ ಬರೀ ಗರುಡ ಪುರಾಣ ಮಾತ್ರ ಹೇಳಿಲ್ಲ. ಜೀವನದ ಪಾಠ ಮಾಡಿದೆ. ಪುಸ್ತಕ, ತತ್ವಗಳ ಮೂಲಕ ಹೇಳಿದ್ರೆ ಜನ ಕೇಳಲ್ಲ ಅಂತ ಕಮರ್ಷಿಯಲ್ ಚಿತ್ರದ ಮೂಲಕ ಸಾರಿದೆ. ಶಿವಪ್ಪನಾಗಿ ಶಿವಣ್ಣ ಹೇಳುವ ಒಂದೊಂದು ಮಾತು ಕೂಡ ನಟಸಾರ್ವಭೌಮ ಡಾ ರಾಜ್‌ಕುಮಾರ್ ಮಾತುಗಳಂತೆ ಪ್ರೇಕ್ಷಕರ ಹೃದಯ ಹೊಕ್ಕಲಿವೆ. ರಾಜ್ ಬಿ ಶೆಟ್ಟಿ ಈ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು, ನಾಳೆ ವರ್ಲ್ಡ್ ವೈಡ್ ಈ ಸಿನಿಮಾ ತೆರೆಗಪ್ಪಳಿಸಲಿದೆ. ಇಂದು ಸುಮಾರು 50ಕ್ಕೂ ಹೆಚ್ಚು ಪ್ರೀಮಿಯರ್ ಶೋಗಳು ನಡೆಯಲಿದ್ದು, ಎಲ್ಲಾ ಕಡೆ ಟಿಕೆಟ್ಸ್ ಸೋಲ್ಡ್ ಔಟ್ ಆಗಿವೆ.
ಸದ್ಯ ಕನ್ನಡ ವರ್ಷನ್‌ಗೆ ಎಲ್ಲೆಡೆ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಮುಂದಿನ ವಾರದಿಂದ ಅಂದ್ರೆ 2026ರ ಮೊದಲ ಸಿನಿಮಾ ಆಗಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಈ 45 ದೊಡ್ಡ ಪರದೆ ಬೆಳಗಲಿದೆ. ಗ್ಯಾರಂಟಿ ನ್ಯೂಸ್‌ನಿಂದ 45 ಚಿತ್ರಕ್ಕೆ ಐದಕ್ಕೆ ನಾಲ್ಕು ಸ್ಟಾರ್ ರೇಟಿಂಗ್ ನೀಡಲಾಗ್ತಿದ್ದು, ಇಯರ್ ಎಂಡ್ ಸಿನಿಮಾ ಥಿಯೇಟರ್‌ಗೆ ಹೋಗೋರಿಗೆ ಇದೊಂದು ಬೆಸ್ಟ್ ಚಾಯ್ಸ್ ಆಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





